Advertisement

ವಿಭಾಗಮಟ್ಟದ ಕ್ರೀಡಾಕೂಟ ಅಚ್ಚುಕಟ್ಟಾಗಿ ನಿರ್ವಹಿಸಿ

11:04 AM Oct 05, 2019 | Naveen |

ಕೊಪ್ಪಳ: ಕಲಬುರಗಿ ವಿಭಾಗಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ, ಬಾಲಕಿಯರಿಗಾಗಿ ಖೋಖೋ, ಬಾಲ್‌ ಬ್ಯಾಡ್ಮಿಂಟನ್‌ ಹಾಗೂ ಹ್ಯಾಂಡ್‌ಬಾಲ್‌ ಕ್ರೀಡೆಗಳನ್ನು ಜಿಲ್ಲೆಯಲ್ಲಿ ಸಂಘಟಿಸಲಾಗುತ್ತಿದ್ದು, ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಿ ಎಂದು ಪ್ರಭಾರಿ ಎಡಿಸಿ ಮಾರುತಿ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕ್ರೀಡಾಕೂಟ ಸಂಘಟಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಕಲಬುರಗಿ ವಿಭಾಗದ ಆರು ಜಿಲ್ಲೆಗಳಿಂದ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ ಎಂದರು.

ಅ. 12ರಂದು ಖೋಖೋ ಸ್ಪರ್ಧೆ ನಡೆಯಲಿದ್ದು, ಒಟ್ಟು 24 ತಂಡಗಳು ಭಾಗವಹಿಸಲಿವೆ. ಈ ಕ್ರೀಡೆಯಲ್ಲಿ ಭಾಗವಹಿಸುವ ತಂಡಗಳು ಅ. 11ರಂದು ನೋಂದಣಿ ಮಾಡಿಕೊಳ್ಳಬೇಕು. ಅ. 13ರಂದು ನಡೆಯುವ ಬಾಲ್‌ ಬ್ಯಾಡ್ಮಿಂಟನ್‌ ಕ್ರೀಡೆಯಲ್ಲಿ 12 ತಂಡಗಳು ಭಾಗವಹಿಸಲಿದ್ದು, ಅ. 12ರಂದು ನೋಂದಣಿ ಮಾಡಿಕೊಳ್ಳಬೇಕು. ಅ. 16ರಂದು ಹ್ಯಾಂಡ್‌ ಬಾಲ್‌ ಸ್ಪರ್ಧೆ ನಡೆಯಲಿದ್ದು, 24 ತಂಡಗಳು ಭಾಗವಹಿಸಲಿವೆ. ಭಾಗವಹಿಸುವ ತಂಡಗಳು ಅ. 15ರಂದು ನೋಂದಣಿ ಮಾಡಿಕೊಳ್ಳಬೇಕು ಎಂದರು.

ನ. 5 ಮತ್ತು 6ರಂದು ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬಾಲಕ, ಬಾಲಕಿಯರಿಗಾಗಿ ಹ್ಯಾಂಡ್‌ಬಾಲ್‌ ಕ್ರೀಡಾಕೂಟ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಿಂದ ಕ್ರೀಡಾಪಟುಗಳು ಆಗಮಿಸುತ್ತಿದ್ದಾರೆ. ಬಾಲಕರ 16 ತಂಡಗಳು ಹಾಗೂ ಬಾಲಕಿಯರ 16 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ. ಈ ಎರಡೂ ಕ್ರೀಡಾಕೂಟಗಳಲ್ಲಿ ಅಂದಾಜು 1400 ಕ್ರೀಡಾಪಟುಗಳು, 230ಕ್ಕೂ ಹೆಚ್ಚು ತಂಡದ ವ್ಯವಸ್ಥಾಪಕರು, ನಿರ್ಣಾಯಕರು ಸೇರಿದಂತೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ ಎಂದು ತಿಳಿಸಿದರು.

ಭಾಗವಹಿಸುವ ಕ್ರೀಡಾಪಟುಗಳು, ತಂಡದ ವ್ಯವಸ್ಥಾಪಕರಿಗೆ ವಸತಿ ವ್ಯವಸ್ಥೆ, ಊಟ-ಉಪಹಾರದ ವ್ಯವಸ್ಥೆ, ಕ್ರೀಡಾಂಗಣಕ್ಕೆ ಕರೆತರುವ ಮತ್ತು ಕರೆದೊಯ್ಯುವ ವ್ಯವಸ್ಥೆ ಸೇರಿದಂತೆ ಪ್ರತಿಯೊಂದು ಕಾರ್ಯವೂ ವ್ಯವಸ್ಥಿತವಾಗಿರಬೇಕು. ಕ್ರೀಡಾಪಟುಗಳು ಉಳಿದುಕೊಳ್ಳಲು ಅಗತ್ಯ ವಸತಿ ನಿಲಯದ ವ್ಯವಸ್ಥೆ ಮಾಡಬೇಕು. ತುರ್ತು ಆರೋಗ್ಯ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು.

Advertisement

ಸಾರಿಗೆ ವ್ಯವಸ್ಥೆಗಾಗಿ ವಿವಿಧ ಶಾಲೆಗಳ ಶಾಲಾ ವಾಹನಗಳನ್ನು ಬಳಸಿಕೊಳ್ಳಿ. ಈ ಎಲ್ಲ ಕಾರ್ಯಗಳಿಗೂ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು. ಸಭೆಯಲ್ಲಿ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ, ಕ್ರೀಡಾ ಇಲಾಖೆಯ ಅಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next