ದತ್ತು ಕಮ್ಮಾರ
ಕೊಪ್ಪಳ: ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಸಂಬಂಧಿಸಿ ಇನ್ನೂ 38 ಕೋಟಿ ರೂ. ಬೆಳೆವಿಮೆ ಬರುವುದು ಬಾಕಿಯಿದೆ. ಕೃಷಿ ಇಲಾಖೆಯು ರೈತರ ಬ್ಯಾಂಕ್ ಖಾತೆಯಲ್ಲಿ ಮಿಸ್ಟೆಕ್ ಇವೆ ಎನ್ನುತ್ತಿದೆಯಾದರೂ ಯಾರೋ ಮಾಡಿರುವ ಎಡವಟ್ಟಿನಿಂದ ರೈತರು ವಿಮಾ ಮೊತ್ತಕ್ಕೆ ಪರದಾಡುವಂತಾಗಿದೆ.
ಹೌದು.. ಕೊಪ್ಪಳ ಜಿಲ್ಲೆ ಪದೇ ಪದೆ ಬರಕ್ಕೆ ತುತ್ತಾಗಿದೆ. ಮಳೆಯ ಕೊರತೆಯಿಂದಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಜಾರಿಯಾಗಿರುವ ಫಸಲ್ ಬಿಮಾ ಯೋಜನೆಯಡಿ ರೈತರು ಹೆಚ್ಚಿನ ಮಟ್ಟದಲ್ಲಿ ವಿಮೆ ಪಾವತಿ ಮಾಡಿ ಬರದ ಪರಿಸ್ಥಿತಿಯಲ್ಲಿ ಬೆಳೆ ಕೈ ಕೊಟ್ಟರೆ ವಿಮಾ ಮೊತ್ತವಾದರೂ ಕೈ ಹಿಡಿಯಲಿದೆ ಎಂಬ ಆಶಾಭಾವದಲ್ಲಿದ್ದಾರೆ.
38 ಕೋಟಿ ರೂ. ಬರೋದು ಬಾಕಿ: 2018-19ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ 49,239 ರೈತರು ವಿಮೆ ಕಟ್ಟಿದ್ದಾರೆ. ಇದರಲ್ಲಿ ಇನ್ನೂ 12,660 ರೈತರ 33.15 ಕೋಟಿ ರೂ. ವಿಮೆ ಮೊತ್ತವನ್ನು ಸರ್ಕಾರ ರೈತರ ಖಾತೆಗೆ ಜಮೆ ಮಾಡಿಲ್ಲ. ಇನ್ನೂ ಹಿಂಗಾರು ಹಂಗಾಮಿನಲ್ಲಿ 41,306 ರೈತರು ವಿಮೆ ಪಾವತಿ ಮಾಡಿದ್ದು, ಈ ಪೈಕಿ 2,299 ರೈತರಿಗೆ 5.39 ಕೋಟಿ ರೂ. ಬರುವುದು ಬಾಕಿಯಿದೆ. ಕಳೆದ ಮುಂಗಾರು-ಹಿಂಗಾರು ಸೇರಿ 14,959 ರೈತರಿಗೆ 38. ಕೋಟಿ ರೂ. ವಿಮೆ ಮೊತ್ತ ಬರುವುದು ಬಾಕಿಯಿದೆ.
ಬ್ಯಾಂಕ್ ಖಾತೆ ಮಿಸ್ಟೆಕ್: ಕಳೆದ ಕೆಲವು ತಿಂಗಳ ಹಿಂದೆಯೇ ವಿಮಾ ಕಂಪನಿಯಿಂದ ಕೃಷಿ ಇಲಾಖೆಗೆ 40 ಕೋಟಿ ರೂ. ಹಸ್ತಾಂತರ ಮಾಡಲಾಗಿದೆ. ಕೃಷಿ ಇಲಾಖೆ ಆಯುಕ್ತರ ಖಾತೆಯಲ್ಲಿ ವಿಮಾ ಮೊತ್ತವು ಕೊಳೆಯುತ್ತಾ ಬಿದ್ದಿದೆ. ರೈತರು ಮಾತ್ರ ಪ್ರತಿ ನಿತ್ಯ ಕೃಷಿ ಇಲಾಖೆಗೆ ಅಲೆದಾಡುವಂತ ಸ್ಥಿತಿ ತಪ್ಪಿಲ್ಲ. ರೈತ ಸಂಘಟನೆಗಳು ಹಲವು ಬಾರಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ಆದರೂ ಇಲಾಖೆ ಅಧಿಕಾರಿಗಳು ವಿಮಾ ಮೊತ್ತ ಪಾವತಿಗೆ ಕ್ರಮ ಕೈಗೊಳ್ಳುತ್ತಿಲ್ಲ.
ಈ ಬಗ್ಗೆ ಅ ಧಿಕಾರಿಗಳನ್ನು ಕೇಳಿದರೆ, ರೈತರ ಖಾತೆಗಳು ಮಿಸ್ಟೆಕ್ ಆಗಿವೆ. ಅವುಗಳನ್ನು ಪರಿಶೀಲಿಸಿ ಪುನಃ ರಾಜ್ಯ ಇಲಾಖೆಗೆ ಕಳಿಸಿಕೊಟ್ಟಿದ್ದೇವೆ. ಹಂತ ಹಂತವಾಗಿ ರೈತರ ಖಾತೆಗೆ ನೇರವಾಗಿ ವಿಮೆ ಮೊತ್ತ ಜಮೆಯಾಗಲಿದೆ ಎನ್ನುತ್ತಿದ್ದಾರೆ. ವಿಶೇಷವೆಂದರೆ, 14 ಸಾವಿರ ರೈತರ ಖಾತೆಗಳು ಹೇಗೆ ತಾನೆ ತಪ್ಪಾಗಲು ಸಾಧ್ಯ ಎನ್ನುವ ಪ್ರಶ್ನೆ ಜನರಲ್ಲಿ ಮೂಡಿದೆ. ಇಲ್ಲಿ ಬ್ಯಾಂಕ್ ಸಿಬ್ಬಂದಿ ಮಾಡಿದ ಎಡವಟ್ಟೋ? ಕೃಷಿ ಇಲಾಖೆ ಮಾಡಿರುವ ಎಡವಟ್ಟೋ? ಅಥವಾ ರೈತನು ಮಾಡಿದ ಎಡವಟ್ಟೋ ವಿಮಾ ಮೊತ್ತ ಮಾತ್ರೆ ರೈತರ ಕೈ ಸೇರುತ್ತಿಲ್ಲ.
ಕಳೆದ ಸಾಲಿನ ಮುಂಗಾರು-ಹಿಂಗಾರಿನಲ್ಲಿ ಬರಬೇಕಿರುವ ವಿಮೆಯ ಮೊತ್ತವನ್ನು ಕೂಡಲೇ ರೈತರ ಖಾತೆಗೆ ಜಮೆ ಮಾಡಬೇಕು ಎನ್ನುವ ಒತ್ತಾಯ ರೈತರಿಂದ ಕೇಳಿ ಬಂದಿದೆ. ಸಂಬಂಧಿಸಿದ ಅಧಿ ಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕಿದೆ.