ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಜನತೆಗೆ ಆರೋಗ್ಯದ ಭದ್ರತೆ ಕಲ್ಪಿಸುವ ಉದ್ದೇಶದಿಂದ ಆಯುಸ್ಮಾನ ಭಾರತ ಯೋಜನೆ ಜಾರಿ ಮಾಡಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರವೂ ಕೈ ಜೋಡಿಸಿದ್ದು, ಜಿಲ್ಲೆಯಲ್ಲಿ 64,947 ಜನರು ಈ ವರೆಗೂ ನೋಂದಣಿ ಮಾಡಿಕೊಂಡಿದ್ದಾರೆ.
Advertisement
ಕೇಂದ್ರ ಸರ್ಕಾರವು ಈ ಯೋಜನೆಗೆ ಆಯುಷ್ಮಾನ್ ಭಾರತ ಎಂದು ನಾಮಕರಣ ಮಾಡಿದ್ದರೆ, ಈ ಹಿಂದಿನ ಸರ್ಕಾರವು ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಎಂದು ಮತ್ತೂಂದು ಹೆಸರು ಸೇರ್ಪಡೆ ಮಾಡಿ ಪುನರ್ ನಾಮಕರಣ ಮಾಡಿತ್ತು. ಆದರೆ, ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರೂ ಯೋಜನೆ ಮಾತ್ರ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕವೆಂದೇ ಚಾಲ್ತಿಯಲ್ಲಿದೆ.
Related Articles
Advertisement
ಜಾಗೃತಿ ಮೂಡಿಸಬೇಕಿದೆ: ಜಿಲ್ಲೆಯಲ್ಲಿ ಅದೆಷ್ಟೋ ಕುಟುಂಬಗಳಿಗೆ ಈ ಯೋಜನೆಯ ಬಗ್ಗೆ ಇನ್ನೂ ಜಾಗೃತಿಯಿಲ್ಲ. ಇಂದಿಗೂ ಲಕ್ಷಾಂತರ ರೂ. ವ್ಯಯ ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಬಡ ಜನರಿಗೆ ಈ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ. ಆರೋಗ್ಯ ಭದ್ರತೆಗೆ ಇರುವ ಮಹತ್ವದ ಯೋಜನೆಯಲ್ಲಿ ಜನರು ನೋಂದಣಿ ಮಾಡಿಕೊಂಡಿರುವ ಲೆಕ್ಕಾಚಾರ ನೋಡಿದರೆ ಇನ್ನೂ ಜಾಗೃತಿಯ ಅಗತ್ಯವಿದೆ. ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಬಿಪಿಎಲ್, ಎಪಿಎಲ್ ಕುಟುಂಬಗಳಿವೆ. ಎಪಿಎಲ್ ಕುಟುಂಬಗಳು ಈ ಯೋಜನೆಯ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿಲ್ಲ. ಬಿಪಿಎಲ್ನ ಜನರು ಹೆಚ್ಚು ನೋಂದಣಿಗೆ ಮುಂದಾಗುತ್ತಿದ್ದಾರೆ.
ನೋಂದಣಿಗೆ ಅವಕಾಶ ಸಿಗಲಿ: ಸರ್ಕಾರವು ಜಿಲ್ಲೆಯಲ್ಲಿನ ಬೆರಳೆಣಿಕೆ ಸೇವಾ ಸಿಂಧು ಕೇಂದ್ರಗಳಲ್ಲಿ ಮಾತ್ರ ಆಯುಷ್ಮಾನ್ ಭಾರತ ಕಾರ್ಡ್ ನೋಂದಣಿಗೆ ಅವಕಾಶ ಕಲ್ಪಿಸಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜನತೆಗೆ ಈ ಸೌಲಭ್ಯ ದೊರೆತಿಲ್ಲ. ಜಿಲ್ಲೆಯಲ್ಲಿನ ಎಲ್ಲ ಸೇವಾ ಕೇಂದ್ರಗಳಿಗೂ ಆರೋಗ್ಯ ಕಾರ್ಡ್ ಮಾಡಲು ಅನುಮತಿ ನೀಡಬೇಕಿದೆ. ಅಂದರೆ ಮಾತ್ರ ಗ್ರಾಮೀಣ ಹಂತಕ್ಕೂ ಜನರು ಸ್ಥಳದಲ್ಲೇ ಕಾರ್ಡ್‌ಗೆ ನೋಂದಣಿ ಮಾಡಿಸಿಕೊಳ್ಳಲಿದ್ದಾರೆ. ಇನ್ನೂ ನಗರ ಪ್ರದೇಶದಲ್ಲಿ ಮಾತ್ರ ನೋಂದಣಿಗೆ ಅವಕಾಶ ದೊರೆತಿದ್ದು, ಕೇಂದ್ರಗಳ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾಳಜಿ ವಹಿಸಬೇಕಿದೆ.
ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ ಯೋಜನೆಯಡಿ ಜಾಗೃತಿ ಮೂಡಿಸಲಾಗುತ್ತಿದೆ. ಈ ವರೆಗೂ 57,782 ಬಿಪಿಎಲ್ ಜನರು ನೋಂದಣಿ ಮಾಡಿಸಿಕೊಂಡಿದ್ದರೆ, 7165 ಎಪಿಎಲ್ ಕುಟುಂಬವು ನೋಂದಣಿ ಮಾಡಿಸಿಕೊಂಡಿವೆ. ಜಿಲ್ಲೆಯ ಸೇವಾ ಕೇಂದ್ರ, ಕರ್ನಾಟಕ ಒನ್ ಸೇರಿದಂತೆ ಜಿಲ್ಲಾಸ್ಪತ್ರೆಯಲ್ಲೂ ಆಯುಷ್ಮಾನ್ ಭಾರತ ಕಾರ್ಡ್ ನೋಂದಣಿ ಮಾಡಲಾಗುತ್ತಿದೆ.•ಎಸ್.ಕೆ. ದೇಸಾಯಿ,
ಆಯುಷ್ಮಾನ್ ಭಾರತ ಜಿಲ್ಲಾ ನೋಡಲ್ ಅಧಿಕಾರಿ