ಕೊಪ್ಪಳ: ಜಿಲ್ಲೆಯಲ್ಲಿ ಒಂದೆಡೆ ಕೊರೊನಾ ಆರ್ಭಟ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಲಾಕ್ ಡೌನ್‌ನಿಂದ ಬಡ ಜನರಿಗೆ ಹಸಿವಿನ ಬಾಧೆ ಕಾಡುತ್ತಿದೆ. ಈ ನಡುವೆಯೂ ಇಂದಿರಾ ಕ್ಯಾಂಟೀನ್, ಸಂಸ್ಥೆಗಳ ಮೂಲಕ ಬಡ ಜನರ, ಹಸಿದವರ ಹಸಿವು ನೀಗಿಸುವ ಕೆಲಸ ನಡೆಯುತ್ತಿದೆ. ಜಿಲ್ಲೆಯಲ್ಲಿ ಬಿಗಿಯಾದ ಲಾಕ್ ಡೌನ್‌ನಿಂದಾಗಿ ಕೃಷಿ ಹಾಗೂ ಆರೋಗ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆ ಬಂದ್ ಆಗಿವೆ.
ಹೋಟೆಲ್‌ಗಳು ಬಂದ್ ಆಗಿದ್ದರಿಂದ ನಿರ್ಗತಿಕರು, ಬಡವರು, ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸಿದ ಜನರು ಊಟ, ನೀರಿಗೆ ಪರದಾಡುವಂತಹ ಪರಿಸ್ಥಿತಿ ನಗರದಲ್ಲಿ ಎದುರಾಗಿದೆ. ಈ ಮಧ್ಯೆಯೂ ಹಲವು ಸಂಘ-ಸಂಸ್ಥೆಗಳು ನೊಂದವರ ನೆರವು ನೀಡುವ ಮೂಲಕ ಆಸರೆಯಾಗುತ್ತಿವೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಇಂದಿರಾ ಕ್ಯಾಂಟೀನ್ ಅನ್ನು ಮುಂದುವರಿಸಿದ್ದು, ನಗರದಲ್ಲಿನ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ, ಉಪಹಾರ ಪಡೆಯಲು ಜನರು ಸರದಿ ಸಾಲಿನಲ್ಲಿ ನಿಂತ ಸನ್ನಿವೇಶವೂ ಕಂಡುಬಂತು. ಉಚಿತವಾಗಿ ಹಸಿದವರಿಗೆ ಊಟದ ಪ್ಯಾಕೇಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ.
ಕೊರೊನಾ ಹಿನ್ನೆಲೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಊಟ ಪಡೆಯುವಂತೆಯು ನಗರಸಭೆ ಅಧಿ ಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಹಸಿದವರು ಸಾಲಾಗಿ ನಿಂತು ಊಟ ಪಡೆದರು. ಇನ್ನೂ ಭಾರತೀಯ ಸ್ಕೌಟ್ ಮತ್ತು ಗೈಡ್ಸ್ ತಂಡವೂ ಸಹಿತ 10 ದಿನಗಳವರೆಗೂ ನಗರ ಪ್ರದೇಶದಲ್ಲಿನ ಹಸಿದವರಿಗೆ ಊಟದ ಪ್ಯಾಕೇಟ್ ವಿತರಣೆ ಮಾಡುವ ಸೇವಾ ಕಾರ್ಯ ಹಮ್ಮಿಕೊಂಡಿದೆ.
ಗುರುವಾರ ಸಹಿತ ತಂಡದ ಸದಸ್ಯರು ನಗರದ ವಿವಿಧ ಆಸ್ಪತ್ರೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ತೆರಳಿ ಅಲ್ಲಿ ಬಡವರಿಗೆ, ನಿರ್ಗತಿಕರಿಗೆ, ಹಸಿದವರಿಗೆ ಊಟದ ಪ್ಯಾಕೇಟ್‌ಗಳನ್ನು ವಿತರಿಸಿ ಮಾನವೀಯತೆ ಮರೆದರು.
ಗವಿಮಠಕ್ಕೆ 50 ಸಾವಿರ ರೂ. ಅರ್ಪಣೆ: ಕೊಪ್ಪಳದ ಗವಿಮಠವು ಆಕ್ಸಿಜನ್ ಬೆಡ್, ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದು ಸೋಂಕಿತರ ಆರೈಕೆಗಾಗಿ ಕೊಪ್ಪಳದ ಜೀವನ್ ಶೆಟ್ಟಿ ಎನ್ನುವ ವ್ಯಕ್ತಿ ತಮ್ಮ 20ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಮಠಕ್ಕೆ ತೆರಳಿಗೆ ಗವಿಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದ ಪಡೆದು 50 ಸಾವಿರ ರೂ. ನೆರವು ಅರ್ಪಿಸಿದರು. ಗವಿಮಠದ ಆಸ್ಪತ್ರೆಯಲ್ಲಿ ಸೋಂಕಿತರಿಗೆ ವಾಲಿಬಾಲ್ ಆಡಿಸಲಾಯಿತು.