Advertisement

10 ಕೋವಿಡ್‌ ಸೆಂಟರ್‌ ಆರಂಭಕ್ಕೆ ವ್ಯವಸ್ಥೆ

08:52 PM May 03, 2021 | Team Udayavani |

ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಜಿಲ್ಲಾಡಳಿತಕ್ಕೂ ದೊಡ್ಡ ಸಮಸ್ಯೆಯಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ಹಲವು ಪ್ರಯತ್ನ ನಡೆಸುತ್ತಿದ್ದು, ಈ ಮಧ್ಯೆ ಜಿಲ್ಲೆಯ 10 ಕಡೆ ಕೋವಿಡ್‌ ಕೇರ್‌ ಸೆಂಟರ್‌ ಆರಂಭಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ. ಹೌದು. ಜಿಲ್ಲೆಯಲ್ಲಿ ಮೊದಲ ಅಲೆಗಿಂತ ಎರಡನೇ ಅಲೆಯು ವ್ಯಾಪಕವಾಗಿ ಉಲ½ಣಗೊಳ್ಳುತ್ತಿದೆ. ಇದು ಜನರಲ್ಲಿ ಆತಂಕ ಮೂಡಿಸಿದೆ. ನಿತ್ಯವೂ 300ಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಡುತ್ತಿರುವುದು ನಿಜಕ್ಕೂ ಆಘಾತವನ್ನೇ ತಂದಿದೆ.

Advertisement

ಇದಲ್ಲದೇ, ವಯಸ್ಸಾದವರು ಸೋಂಕಿಗೆ ಬಲಿಯಾಗುತ್ತಿದ್ದು, ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ಇದರಿಂದ ತಲೆ ಬಿಸಿ ಮಾಡಿಕೊಂಡಿರುವ ಜಿಲ್ಲಾಡಳಿತ ಸೋಂಕು ನಿಯಂತ್ರಣಕ್ಕೆ ಹೋಂ ಐಸೋಲೇಷನ್‌ ಜೊತೆಗೆ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಆರಂಭಿಸುವ ಚಿಂತನೆ ನಡೆಸಿದೆ. ಪ್ರಸ್ತುತ ಜಿಲ್ಲೆಯಲ್ಲಿ 10 ಕೋವಿಡ್‌ ಕೇರ್‌ ಸೆಂಟರ್‌ ಆರಂಭಕ್ಕೆ ಚಿಂತನೆಯು ನಡೆಯುತ್ತಿದೆ. ಯಲಬುರ್ಗಾ ತಾಲೂಕಿನಲ್ಲಿ 3, ಕೊಪ್ಪಳ ತಾಲೂಕಿನಲ್ಲಿ 2, ಗಂಗಾವತಿ ತಾಲೂಕಿನಲ್ಲಿ 2, ಕುಷ್ಟಗಿ ತಾಲೂಕಿನಲ್ಲಿ 2 ಸೇರಿದಂತೆ ಒಟ್ಟು 9 ಸರ್ಕಾರಿ ಕೋವಿಡ್‌ ಕೇರ್‌ ಸೆಂಟರ್‌ ಗಳನ್ನು ಗುರುತಿಸಲಾಗಿದೆ. ಈ ಪೈಕಿ ನಾಲ್ಕು ಸೆಂಟರ್‌ ಗಳಲ್ಲಿ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಇನ್ನು ಐದು ಸೆಂಟರ್‌ಗಳನ್ನು ಮುಂಜಾಗೃತಾ ಕ್ರಮವಾಗಿ ಗುರುತಿಸಿ ಕಾಯ್ದಿರಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ದೃಢಪಟ್ಟ ಬಳಿಕ ಬಹುಪಾಲು ಜನರು ಹೋಂ ಐಸೋಲೇಷನ್‌ಗೆ ಒಳಗಾಗುತ್ತಿದ್ದಾರೆ.

ಆದರೆ ಸ್ಲಂ ಏರಿಯಾದಲ್ಲಿ ಮನೆಗಳು ಸಣ್ಣದಾಗಿದ್ದು, ಕುಟುಂಬ ಸದಸ್ಯರ ಸಂಖ್ಯೆಯು ಹೆಚ್ಚಾಗಿರುವುದರಿಂದ ಅಲ್ಲಿ ಸೋಂಕಿತರು ಮನೆಯಲ್ಲೇ ಇರುವುದರಿಂದ ಇತರರಿಗೂ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಅಂತಹವರು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಇರಿಸಿ ಆರೈಕೆ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಜೊತೆಗೆ ಕೆಲವರಿಗೆ ಸೋಂಕು ದೃಢಪಟ್ಟರೂ ಆರೋಗ್ಯವಾಗಿಯೇ ಇರುತ್ತಾರೆ. ವೈದ್ಯರ ಶಿಫಾರಸ್ಸಿನ ಮೇರೆಗೆ ಅಂತಹವರನ್ನು ಸೆಂಟರ್‌ಗಳಿಗೆ ವರ್ಗಾಯಿಸುವ ಕುರಿತ ಚಿಂತನೆ ನಡೆದಿದೆ.

ಗವಿಮಠ, ಜೈನ ಸಮುದಾಯ ಸ್ಪಂದನೆ: ಇನ್ನೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾವೀರ ಜೈನ ಸಮುದಾಯ ಸ್ವತಃ ಮುಂದೆ ಬಂದು ಮಹಾವೀರ ಭವನವನ್ನು ಕೋವಿಡ್‌ ಕೇರ್‌ ಸೆಂಟರ್‌ ಆಗಿ ಬಳಕೆ ಮಾಡುವಂತೆ ಜಿಲ್ಲಾಡಳಿತಕ್ಕೆ ಹೇಳಿದೆ. ಸಮಾಜದ ಆಸಕ್ತಿಯು ಜಿಲ್ಲಾಡಳಿತಕ್ಕೆ ಭರವಸೆ ಸಿಕ್ಕಂತಾಗಿದ್ದು, ರವಿವಾರ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಅವರು ಮಹಾವೀರ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇಲ್ಲಿ 60 ಬೆಡ್‌ ವ್ಯವಸ್ಥೆ ಇದ್ದು, ಅದನ್ನು ಬಳಕೆ ಮಾಡುವ ಕುರಿತಂತೆ ಜಿಲ್ಲಾಡಳಿತ ಸಮ್ಮತಿಸಿದೆ ಎನ್ನುವ ಮಾಹಿತಿ ಲಭ್ಯ ಆಗಿದೆ. ಇನ್ನು ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗಳ ಜೊತೆ ಜಿಲ್ಲಾಡಳಿತ ಸಮಾಲೋಚನೆ ನಡೆಸಿದ್ದು, ಸೋಂಕು ನಿಯಂತ್ರಣಕ್ಕೆ ಗವಿಮಠವು ಸಾಥ್‌ ನೀಡಿದೆ. ಅಲ್ಲದೇ ಮಠದ ವೃದ್ಧಾಶ್ರಮದ ಪಕ್ಕದ ಭವನದಲ್ಲಿ 100 ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಜಿಲ್ಲಾಡಳಿತಕ್ಕೆ ಕೊಡುವುದಾಗಿಯೂ ಶ್ರೀಗಳು ಜಿಲ್ಲಾಧಿಕಾರಿಗೆ ಭರವಸೆ ನೀಡಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.

Advertisement

ಮಠವು ಕೋವಿಡ್‌ ಕೇರ್‌ ಸೆಂಟರ್‌ ಆಗಿ ಬದಲಾಗಿ, 100 ಆಕ್ಸಿಜನ್‌ ಬೆಡ್‌ಗಳ ವ್ಯವಸ್ಥೆ ಮಾಡಿಕೊಡುವ ಭರವಸೆ ಕೊಟ್ಟಿರುವುದು ಜಿಲ್ಲಾಡಳಿತಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ಸ್ಲಂ ಏರಿಯಾದ ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಇರಿಸಿ ಅವರ ಆರೈಕೆ ಮಾಡಲು ಜಿಲ್ಲಾಡಳಿತವು ಯೋಜನೆ ರೂಪಿಸಿದ್ದು, ಎಷ್ಟರ ಮಟ್ಟಿಗೆ ವ್ಯವಸ್ಥೆ ಮಾಡಿಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next