ವರದಿ: ಕೆ.ನಿಂಗಜ್ಜ
ಗಂಗಾವತಿ: ಮಿನಿ ಅಸೆಂಬ್ಲಿ ಚುನಾವಣೆ ಎಂದೇ ಕರೆಯಲ್ಪಡುವ ಜಿಪಂ-ತಾಪಂ ಕ್ಷೇತ್ರಗಳ ಮೀಸಲಾತಿ ಪ್ರಕಟವಾಗಿದ್ದು, ಚುನಾವಣೆಯ ದಿನಾಂಕ ಘೋಷಣೆ ಬಾಕಿ ಇರುವಾಗಲೇ ಈಗಲೇ ತಾಲೀಮು ಶುರುವಾಗಿದೆ.
ಬಿಜೆಪಿ-ಕಾಂಗ್ರೆಸ್ ಪಕ್ಷಗಳಲ್ಲಿ ಡಜನ್ ಗಟ್ಟಲೆ ಆಕಾಂಕ್ಷಿಗಳಿದ್ದು, ಎರಡೂ ಪಕ್ಷಗಳಲ್ಲಿ ಶಾಸಕರು-ಮಾಜಿ ಸಚಿವರ ಮಕ್ಕಳು ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಜಿಪಂ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಗಂಗಾವತಿ ತಾಲೂಕು ವಿಂಗಡಣೆಯಾದ ನಂತರ ಗಂಗಾವತಿ ತಾಲೂಕಿನಲ್ಲಿ ನಾಲ್ಕು ಜಿಪಂ ಕ್ಷೇತ್ರಗಳು ಉಳಿದಿವೆ.
ಚುನಾವಣಾ ಆಯೋಗ ಮೊದಲಿದ್ದ ಕ್ಷೇತ್ರಗಳ ಹೆಸರನ್ನು ನೂತನ ನಿಯಮಗಳ ಪ್ರಕಾರ ಬದಲಿಸಿದೆ. ಚಿಕ್ಕಜಂತಗಲ್(ಆನೆಗೊಂದಿ), ವಡ್ಡರಹಟ್ಟಿ(ಹೇರೂರು), ಶ್ರೀರಾಮನಗರ(ಮರಳಿ), ಬಸಾಪಟ್ಟಣ(ವೆಂಕಟಗಿರಿ) ಜಿಪಂ ಕ್ಷೇತ್ರಗಳಿವೆ. ಇವುಗಳಲ್ಲಿ ಆನೆಗೊಂದಿ-ಮರಳಿ ಜಿಪಂ ಕ್ಷೇತ್ರಗಳು ಸಾಮಾನ್ಯ ವರ್ಗ, ವಡ್ಡರಹಟ್ಟಿ ಎಸ್ಟಿ ಮಹಿಳೆ, ಬಸಾಪಟ್ಟಣ ಎಸ್ಸಿ ಮಹಿಳೆಗೆ ಮೀಸಲು ನಿಗದಿಯಾಗಿದ್ದು ಬಿಸಿಎ-ಬಿಸಿಬಿ ವರ್ಗಕ್ಕೆ ಈ ಬಾರಿ ತಾಲೂಕಿನಲ್ಲಿ ಮೀಸಲು ಕಲ್ಪಿಸಿಲ್ಲ.
ಸಾಮಾನ್ಯ ಮೀಸಲು ಕ್ಷೇತ್ರಗಳಾಗಿರುವ ಚಿಕ್ಕಜಂತಗಲ್(ಆನೆಗೊಂದಿ)ಶ್ರೀರಾಮನಗರ (ಮರಳಿ) ಜಿಪಂ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಿಜೆಪಿ ಕಾಂಗ್ರೆಸ್ ಪಕ್ಷಗಳಲ್ಲಿ ತೀವ್ರ ಸ್ಪಧೆ ಇದ್ದು,ಹಾಲಿ ಮಾಜಿ ಶಾಸಕರು ಜಿಪಂ ಮಾಜಿ ಸದಸ್ಯರ ಪುತ್ರರ ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿವೆ. ಚಿಕ್ಕಜಂತಗಲ್ (ಆನೆಗೊಂದಿ) ಕ್ಷೇತ್ರದಲ್ಲಿ ಬಿಜೆಪಿಯಿಂದ ಶಾಸಕ ಪರಣ್ಣ ಮುನವಳ್ಳಿ ಪುತ್ರ ಸಾಗರ ಮುನವಳ್ಳಿ, ನ್ಯಾಯವಾದಿ ಎಚ್.ಸಿ.ಯಾದವ್, ಗುತ್ತಿಗೆದಾರ ರಘುರಾಂ ರೆಡ್ಡಿ, ರಾಜವಂಶಸ್ಥರಾದ ರತ್ನಶ್ರೀರಾಯ, ಗೌರೀಶ ಬಾಗೋಡಿ, ಹರಿಹರ ದೇವರಾಯ ಮತ್ತು ಜಿಪಂ ಮಾಜಿ ಸದಸ್ಯ ಸಿದ್ದರಾಮಯ್ಯಸ್ವಾಮಿ ಪುತ್ರ ವಿರೂಪಾಕ್ಷಯ್ಯ ಸ್ವಾಮಿ ಪ್ರಮುಖ ಸ ರ್ಧಾಳುಗಳಾಗಿದ್ದಾರೆ.
ಕಾಂಗ್ರೆಸ್‌ನಿಂದ ರಾಜವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಪುತ್ರ ಇಮ್ತಿಯಾಜ್ ಅನ್ಸಾರಿ, ಮಂಜುನಾಥ ಕಲಾಲ್, ಟಿ.ಜಿ. ಬಾಬು, ಅಂಬಿಗೇರ್ ಅಂಜಿನಪ್ಪ ಪ್ರಮುಖರಾಗಿದ್ದಾರೆ.
ಶ್ರೀರಾಮನಗರ(ಮರಳಿ) ಕ್ಷೇತ್ರದಲ್ಲಿ ಬಿಜೆಪಿಯಿಂದ ಸತ್ಯನಾರಾಯಣ(ಬಾಬಿ), ಚಿತ್ತೂರಿ ದುರ್ಗಾರಾವ್,ಬರಗೂರು ನಾಗರಾಜ ಕಾಂಗ್ರೆಸ್‌ನಿಂದ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಪುತ್ರ ಸರ್ವೇಶ್, ರೆಡ್ಡಿ ಶ್ರೀನಿವಾಸ, ವೆಂಕಟ ಸತ್ಯನಾರಾಯಣ(ನಾನಿ) ಹೆಸರುಗಳು ಚಾಲ್ತಿಯಲ್ಲಿವೆ. ಈಗಾಗಲೇ ಸಾಗರ ಮುನವಳ್ಳಿ ಉಡುಮಕಲ್ ನಲ್ಲಿ, ಸರ್ವೇಶ್ ಮಲ್ಲಿಕಾರ್ಜುನ ನಾಗಪ್ಪ ಜಂಗಮರ ಕಲ್ಗುಡಿಯಲ್ಲಿ, ವಿರೂಪಾಕ್ಷಯ್ಯಸ್ವಾಮಿ ಸಂಗಾಫುರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿದ್ದಾರೆ.