ದತ್ತು ಕಮ್ಮಾರ
ಕೊಪ್ಪಳ: ಯಾವ ಬೆಳೆಗೆ ಯಾವ ಔಷಧಿ ಸಿಂಪರಣೆ ಮಾಡಬೇಕು? ಬೆಳೆಯು ಒಣಗುತ್ತಿದ್ದರೆ ಏನು ಮಾಡಬೇಕು? ಯಾರನ್ನು ಕೇಳಬೇಕು? ಯಾವ ಹೊಲ(ಭೂಮಿ)ದಲ್ಲಿ ಯಾವ ಯಾವ ಬೆಳೆ ಬೆಳೆದರೆ ಸೂಕ್ತ.. ಇವೆಲ್ಲ ವಿಷಯಗಳ ಕುರಿತು ರೈತ ಇನ್ಮುಂದೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಸಕಾಲಕ್ಕೆ ವಿಜ್ಞಾನಿಗಳಿಂದ ಮಾಹಿತಿ ನೀಡಲು ರಾಯಚೂರು ಕೃಷಿ ವಿಶ್ವವಿದ್ಯಾಲಯ ಮೊಟ್ಟ ದಲ ಬಾರಿಗೆ ಶುಲ್ಕ ರಹಿತ 1800-425-0470 ಸಹಾಯವಾಣಿ(ಹೆಲ್ಪ್ಲೈನ್) ಆರಂಭಿಸಲು ಸಿದ್ಧತೆ ನಡೆಸಿದೆ. ಸೆ. 25ರಂದು “ಬೀಜ ದಿನೋತ್ಸವ’ದಂದು ಆರಂಭಿಸಲು ಅಣಿ ಮಾಡಿಕೊಂಡಿದೆ. ರೈತಾಪಿ ವಲಯ ಉಚಿತವಾಗಿ ಕರೆ ಮಾಡಿ ಕೃಷಿ ಸಂಬಂ ಧಿತ ಮಾಹಿತಿ ಪಡೆಯಬಹುದು.
ಪ್ರಾದೇಶಿಕತೆಗೆ ಅನುಗುಣವಾಗಿ ರೈತ ಯಾವ ಬೆಳೆ ಬೆಳೆಯಬೇಕು? ಬೆಳೆಗಳಿಗೆ ಬರುವ ರೋಗ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ವಿಧಾನ, ರೋಗ ಬಾಧೆ ನಿಯಂತ್ರಣಕ್ಕೆ ಸಿಂಪರಣೆ ಮಾಡುವ ಔಷಧಿ ಮತ್ತು ಬಳಕೆಯ ಪ್ರಮಾಣ ಇನ್ನಿತರ ವಿಷಯಗಳ ಕುರಿತಂತೆ ಅನ್ನದಾತನಿಗೆ ವಿವಿಯಿಂದ ಕ್ಷಣಾರ್ಧದಲ್ಲಿ ಮಾಹಿತಿ ದೊರೆಯಲಿದೆ.
ವಿಜ್ಞಾನಿಗಳಿಂದ ನೇರ ಮಾಹಿತಿ: ಸರ್ಕಾರ ಕೃಷಿ ಇಲಾಖೆಯಿಂದ ಆರಂಭಿಸಿರುವ ಹೆಲ್ಪ್ಲೈನ್‌ನಲ್ಲಿ ಸಿಬ್ಬಂದಿ ರೈತನಿಗೆ ಮಾಹಿತಿ ನೀಡಿದರೆ, ರಾಯಚೂರು ಕೃಷಿ ವಿವಿಯಲ್ಲಿ ರೈತ ಮಾಡುವ ಕರೆ ವಿಜ್ಞಾನಿಗಳಿಗೆ ವರ್ಗವಾಗಿ ಮಾಹಿತಿ ದೊರೆಯಲಿದೆ. ಮೊದಲು ಕರೆ ವಿವಿ ಕಾಲ್ ಸೆಂಟರ್‌ಗೆ ತೆರಳುತ್ತದೆ. ಅಲ್ಲಿನ ಸಿಬ್ಬಂದಿ ರೈತನಿಂದ ಮಾಹಿತಿ ಪಡೆದು ಆತನ ಪ್ರಶ್ನೆಗಳಿಗೆ ಅನುಸಾರ ಮಾಹಿತಿ ನೀಡುವ ವಿಜ್ಞಾನಿಗಳಿಗೆ ಕರೆಯನ್ನು ವರ್ಗಾಯಿಸುತ್ತಾರೆ.
ಹಿರಿಯ ವಿಜ್ಞಾನಿಗಳು ರೈತನ ಪ್ರಶ್ನೆಗೆ ಪೂರ್ಣ ಮಾಹಿತಿ ನೀಡಲಿದ್ದಾರೆ. ರಾಯಚೂರು ಕೃಷಿ ವಿವಿಯಲ್ಲಿ 250 ವಿಜ್ಞಾನಿಗಳಿದ್ದು, ಈ ಪೈಕಿ 40-50 ಹಿರಿಯ ತಜ್ಞ ವಿಜ್ಞಾನಿಗಳನ್ನು ರೈತರಿಗೆ ಮಾಹಿತಿ ನೀಡಲು ಆಯ್ಕೆ ಮಾಡಲಾಗಿದೆ. ಆಯಾ ವಿಭಾಗದ ವಿಜ್ಞಾನಿಗಳು ರೈತನ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ.