ಕೊಪ್ಪಳ: ಜಿಲ್ಲೆಯಲ್ಲಿ ಸಾರಿಗೆ ಸಂಚಾರ ಆರಂಭವಾಗುತ್ತಿದ್ದು, ಬಸ್ ಗಳ ಓಡಾಟಕ್ಕೆ ಪೊಲೀಸ್ ಇಲಾಖೆ ಎಸ್ಕಾರ್ಟ್ ವ್ಯವಸ್ಥೆ ಕಲ್ಪಿಸುವ ಮೂಲಕ ಬಿಗಿ ಭದ್ರತೆ ಒದಗಿಸಿದೆ.
ಕಳೆದ ನಾಲ್ಕು ದಿನದಿಂದ ಸಾರಿಗೆ ನೌಕರರು ರೈತ ಸಂಘಟನೆಗಳ ನೇತೃತ್ವದಲ್ಲಿ ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂದು ಮುಷ್ಕರ ಆರಂಭಿಸಿದ್ದಾರೆ. ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ಸಂಧಾನ ಸಫಲತೆ ಕಾಣುತ್ತಿಲ್ಲ. ಹಾಗಾಗಿ ಸಾರಿಗೆ ನೌಕರರು ತಮ್ಮ ಮುಷ್ಕರವನ್ನು ಮುಂದುವರೆಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಮೂರು ದಿನ ಮುಷ್ಕರ ಯಶಸ್ವಿಯಾಗಿದ್ದರೆ, ಇಂದು ಬೆಳಗ್ಗೆಯಿಂದ ಕೆಲವೊಂದು ಬಸ್ ರಸ್ತೆಗಿಳಿಯುತ್ತಿವೆ. ಸಂಚಾರ ಆರಂಭಿಸಿದ ಬಸ್ ಗಳಿಗೆ ಪೊಲೀಸ್ ಇಲಾಖೆ ವಿವಿಧೆಡೆ ಎಸ್ಕಾರ್ಟ್ ವ್ಯವಸ್ಥೆ ಮಾಡಿದೆ. ಬಸ್ ಸಂಚಾರಕ್ಕೆ ಅಡ್ಡಿಪಡಿಸುವ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನ ನೀಡಿದೆ.
ಕೊಪ್ಪಳ- ಹೊಸಪೇಟೆ ಮಾರ್ಗವಾಗಿ ಸಂಚಾರಕ್ಕೆ ಬಿಗಿ ಭದ್ರತೆ ಕಲ್ಪಿಸಿದೆ. ಸದ್ಯ 8 ಬಸ್ ಗಳು ಮಾತ್ರ ಓಡಾಟ ಆರಂಭಿಸಿವೆ. ಬಸ್ ಸಂಚಾರಕ್ಕೆ ಅಡ್ಡಿಪಡಿಸುವ ಜನರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಎಸ್ಪಿ ಶ್ರೀಧರ ಉದಯವಾಣಿ ಗೆ ತಿಳಿಸಿದ್ದಾರೆ.