Advertisement

18 ವರ್ಷದಲ್ಲಿ 12 ವರ್ಷ ಬರಗಾಲ ಕಂಡ ಕೊಪ್ಪಳ!

05:08 PM Oct 12, 2018 | |

ಕೊಪ್ಪಳ: ಬರಗಾಲ ಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಕೊಪ್ಪಳ ಜಿಲ್ಲೆಗೆ ಕಾಯಂ ಸ್ಥಾನ! ಕಳೆದ 18 ವರ್ಷಗಳಲ್ಲಿ ಬರೊಬ್ಬರಿ 12 ವರ್ಷಗಳ ಕಾಲ ಬರ ಕಂಡಿದ್ದೇ ಇದಕ್ಕೆ ಸಾಕ್ಷಿ. ಬರದ ಭೀಕರತೆಗೆ ಜಿಲ್ಲೆಯ ಜನರು ನೊಂದು ಬೆಂದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಕೆಲವೆಡೆ ಊರು ಬಿಟ್ಟು ಹೋಗಿದ್ದಾರೆ. ಇಂಥ ದುಸ್ಥಿತಿ ಇದ್ದರೂ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ.

Advertisement

ಹಿಂದುಳಿದ ಜಿಲ್ಲೆ ಎಂದೇ ಹೆಸರುವಾಸಿಯಾದ ಕೊಪ್ಪಳ ಜಿಲ್ಲೆ ಈಗ ಬರದ ನಾಡು ಎಂಬ ಬಿರುದನ್ನೂ ಇತ್ತೀಚಿನ ವರ್ಷಗಳಲ್ಲಿ ಅಂಟಿಸಿಕೊಂಡಿದೆ. ಒಂದು ವರ್ಷ ಮಳೆಯಾದರೆ, ಮತ್ತೆ ಎರಡು ವರ್ಷ ಬರಕ್ಕೆ ತುತ್ತಾಗಿ ಅನ್ನದಾತ ನರಳುವಂತಾಗಿದೆ. 2001ರಿಂದ 2018ರವರೆಗೂ ಜಿಲ್ಲೆಯೂ ಬರೊಬ್ಬರಿ 11 ವರ್ಷ ಬರ ಕಂಡಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ)ವೇ ಖಚಿಪಡಿಸಿದೆ. ಪ್ರಸಕ್ತವೂ ಜಿಲ್ಲೆಯಲ್ಲಿ ಬರವೆಂಬ ಪೆಡಂಭೂತ ಆವರಿಸಿ ರೈತರ ಜೀವ ಹಿಂಡುತ್ತಿದೆ. ರಾಜ್ಯ ಸರ್ಕಾರ ಮತ್ತೆ ಜಿಲ್ಲೆಯ 7 ತಾಲೂಕು ಬರ ಪೀಡಿತ ಎಂದು ಘೋಷಣೆ ಮಾಡಿದೆ.

ಕೆಎಸ್‌ಎನ್‌ಡಿಎಂಸಿ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 2001ರಲ್ಲಿ ಮಳೆಯಾಗಿದ್ದರೆ, 2002ರಿಂದ ಸತತ 3 ವರ್ಷಗಳ ಕಾಲ ಬರ ಆವರಿಸಿತ್ತು. 2005ರಲ್ಲಿ ಮಳೆಯಾದರೆ, 2006ರಲ್ಲಿ ಬರ ಆವರಿಸಿತ್ತು. 2008 ಹಾಗೂ 2009ರಲ್ಲಿ ಬರ ಕಂಡಿದೆ. 2010ರಲ್ಲಿ ಮಳೆಯಾದರೆ, 2011ರಿಂದ 2013ರವರೆಗೂ ಸತತ 3 ವರ್ಷ ಬರ ರುದ್ರನರ್ತನ ಮಾಡಿದೆ. 2014ರಲ್ಲಿ ಮತ್ತೆ ಮಳೆಯಾದರೆ, 2015 ಹಾಗೂ 2016ರಲ್ಲಿ ಬರ ಆವರಿಸಿತ್ತು. 2017ರಲ್ಲಿ ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆಯಾಗಿದ್ದರೆ, ಪ್ರಸಕ್ತ ವರ್ಷ ಮುಂಗಾರಿನಲ್ಲಿ ಮಳೆಯ ಆರ್ಭಟ ಕಾಣಿಸಿದರೂ ಮುಂಗಾರು ಸಂಪೂರ್ಣ ವಿಫಲವಾಗಿ ರಾಜ್ಯ ಸರ್ಕಾರ ಜಿಲ್ಲೆಯ 7 ತಾಲೂಕು ಬರ ಪೀಡಿತ ಎಂದು ಘೋಷಣೆ ಮಾಡಿದೆ.

ನೀರಾವರಿಯಿಲ್ಲ: ಜಿಲ್ಲೆಯಲ್ಲಿಯೇ ತುಂಗಭದ್ರಾ ಜಲಾಶಯವಿದೆ. ಆದರೂ ದೀಪದ ಕೆಳಗೆ ಕತ್ತಲು ಎಂಬಂತೆ ಈ ಭಾಗದ ಜನರಿಗೆ ನೀರಾವರಿ ಯೋಜನೆಗಳಿಲ್ಲ. ಬರದ ಸ್ಥಿತಿಗೆ ಬೆಂದಿರುವ ರೈತ ಸಮೂಹ ತುತ್ತಿನ ದುಡಿಮೆಗಾಗಿ ದೂರದ ಊರುಗಳಿಗೆ ಗುಳೆ ಹೋಗುವಂತಾಗಿದೆ. 12 ವರ್ಷ ಬರ ರುದ್ರನರ್ತನ ಮಾಡಿದರೂ ಸರ್ಕಾರಗಳು ರೈತರಿಗೆ ಪುಡಿಗಾಸು ನೀಡಿ ಕೈ ತೊಳೆದುಕೊಂಡಿವೆ. ಆದರೆ ಇಲ್ಲಿನ ಜನರ ನೋವು, ಗೋಳಾಟ, ಕಣ್ಣೀರಿನ ಕಥೆಯನ್ನು ಯಾರೂ ಆಲಿಸಿಲ್ಲ. ರಾಜ್ಯ ಸರ್ಕಾರಕ್ಕೆ ಬರಪೀಡಿತ ಜಿಲ್ಲೆಗಳ ಮಾಹಿತಿ ಇದ್ದರೂ ಈ ಭಾಗದ ಕೃಷಿ ಬದುಕಿಗೆ, ರೈತರ ಸಬಲೀಕರಣಕ್ಕೆ ವಿಶೇಷ ಪ್ಯಾಕೆಜ್‌ ಘೋಷಣೆ ಮಾಡುತ್ತಿಲ್ಲ. ಪ್ರತಿ ಬಾರಿ ಹೆಕ್ಟೇರ್‌ ಲೆಕ್ಕದಲ್ಲಿ ಸಾವಿರ, ಎರಡು ಸಾವಿರ ರೂ. ಬೆಳೆ ಹಾನಿ ಪರಿಹಾರ ಕೊಟ್ಟು ಕೈ ಚೆಲ್ಲುತ್ತಿದೆ. 

ಪರ್ಯಾಯವೇನು?
ಬರದ ಪರಿಸ್ಥಿತಿ ಎದುರಿಸಲು ಸಿದ್ಧತೆಯ ಕೊರತೆ ಇದೆ. ಪರ್ಯಾಯ ಮಾರ್ಗೋಪಾಯ ಕಂಡುಕೊಳ್ಳುತ್ತಿಲ್ಲ. ಹಸಿರೀಕರಣ ನಡೆಯುತ್ತಿಲ್ಲ. ಅರಣ್ಯ ಇಲಾಖೆ ಕಾಟಾಚಾರಕ್ಕೆ ಎಂಬಂತೆ ಲೆಕ್ಕಕ್ಕೆ ಬೇಕಾದಷ್ಟು ಸಸಿ ನೆಟ್ಟು ಕೈ ತೊಳೆದುಕೊಳ್ಳುತ್ತಿದೆ. ಜಲ ಸಂರಕ್ಷಣೆ ಮಾತನ್ನಾಡುತ್ತಿಲ್ಲ. ಹನಿ ನೀರಾವರಿ ಪ್ರದೇಶವನ್ನು ವಿಸ್ತಾರ ಮಾಡುತ್ತಿಲ್ಲ. ಅತ್ಯುತ್ತಮ ಮಣ್ಣಿನ ಫಲವತ್ತತೆ ಹೊಂದಿರುವ ಈ ನೆಲದಲ್ಲಿ ಇಸ್ರೇಲ್‌ ಮಾದರಿ ಕೃಷಿಗೆ ಮುಖ್ಯಮಂತ್ರಿಗಳು ಮನಸ್ಸು ಮಾಡಿದ್ದು ಉತ್ತಮ ಬೆಳವಣಿಗೆ.

Advertisement

ಕೊಪ್ಪಳ ಜಿಲ್ಲೆಯಲ್ಲಿ ಪದೇ ಪದೇ ಬರದ ಪರಿಸ್ಥಿತಿಗೆ ನೀರು ಮತ್ತು ಮಣ್ಣಿನ ದುರುಪಯೋಗ, ವಾತಾವರಣದ ಬದಲಾವಣೆ ಕಾರಣ. ಪ್ರಾಕೃತಿಕ ಸಂಪನ್ಮೂಲ ಹಾಳು ಮಾಡುತ್ತಿರುವುದು ಸೇರಿದಂತೆ ಹಲವು ವೈಪರೀತ್ಯಗಳಿಂದ ಬರ ಆವರಿಸುತ್ತಿದೆ.
 ಡಾ.ಎಂ.ಬಿ. ಪಾಟೀಲ, ಕೃಷಿ ವಿಜ್ಞಾನಿ

ಕೊಪ್ಪಳ ಜಿಲ್ಲೆ ಪದೇ ಪದೇ ಬರಕ್ಕೆ ತುತ್ತಾಗುತ್ತಿದೆ. ಈ ಕುರಿತು ಅಂಕಿ-ಅಂಶಗಳೇ ಹೇಳುತ್ತಿವೆ. ಈ ಭಾಗದಲ್ಲಿನ ರೈತರು ಹನಿ ನೀರಾವರಿಗೆ ಒತ್ತು ನೀಡುವ ಜೊತೆಗೆ ಮಳೆ ಬಂದಾಗ ನೀರು ನಿಲ್ಲಿಸಿ ಇಂಗಿಸುವ ಪ್ರಯತ್ನ ಮಾಡಬೇಕು. ಬದುವು ನಿರ್ಮಿಸಿ ಓಡುವ ನೀರು ನಿಲ್ಲಿಸಬೇಕು.
ಶಬಾನಾ, ಕೃಷಿ ಜಂಟಿ ನಿರ್ದೇಶಕಿ

„ದತ್ತು ಕಮ್ಮಾರ 

Advertisement

Udayavani is now on Telegram. Click here to join our channel and stay updated with the latest news.

Next