ಕೊಪ್ಪಳ: ಕೋವಿಡ್ ಮಹಾಮಾರಿ ಎಲ್ಲವನ್ನೂ ಪಾಸಿಟಿವ್ ಮಾಡಿದೆ. ಇದಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶವೂ ಹೊರತಾಗಿಲ್ಲ. ಪ್ರಸಕ್ತ ಸಾಲಿನ ಜಿಲ್ಲೆಯ ಪಿಯು ಫಲಿತಾಂಶ ಶೇ.100ರಷ್ಟು ಬಂದಿದೆ. ಒಟ್ಟು 13429 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಅವರೆಲ್ಲರೂ ಉತ್ತೀರ್ಣರಾಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ಇಡೀ ಜಗತ್ತಿನಲ್ಲಿ ಕೊರೊನಾ ಮಹಾಮಾರಿಯು ಎಲ್ಲ ಕ್ಷೇತ್ರವನ್ನು ತಲ್ಲಣ ಗೊಳಿಸಿದೆ. ಇದಕ್ಕೆ ಶಿಕ್ಷಣ ಕ್ಷೇತ್ರವೂ ಹೊರತಾಗಿಲ್ಲ. ಶಾಲೆ ಆರಂಭವಾಗದೇ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುವ ಹಂತಕ್ಕೂ ಸರ್ಕಾರ ನಿರ್ಧಾರ ಕೈಗೊಂಡಿದ್ದು ಅನಿವಾರ್ಯತೆಯೂ ಆಗಿದೆ. ಕೋವಿಡ್ ಎಫೆಕ್ಟ್ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿಗೆ ನೋಂದಾಯಿಸಿಕೊಂಡಿದ್ದ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿದೆ. ಈ ಹಿಂದಿನ ಅಂಕಗಳ ಆಧಾರದ ಮೇಲೆಯೇ ಈ ಬಾರಿಯ ಫಲಿತಾಂಶ ಪ್ರಕಟ ಮಾಡಲಾಗಿದೆ.
13,429 ವಿದ್ಯಾರ್ಥಿಗಳೂ ಉತ್ತೀರ್ಣ: ಕೊರೊನಾ ಅಬ್ಬರದ ಮಧ್ಯೆಯೂ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 100 ಪಿಯು ಕಾಲೇಜುಗಳಲ್ಲಿ ಒಟ್ಟು 13,429 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದರು. ಅವರೆಲ್ಲರನ್ನೂ ಸರ್ಕಾರವು ಉತ್ತೀರ್ಣ ಮಾಡಿದೆ. ಇವರಲ್ಲಿ 11483 ವಿದ್ಯಾರ್ಥಿಗಳು ರೆಗ್ಯುಲರ್ ವಿದ್ಯಾರ್ಥಿಗಳಾಗಿದ್ದರು. ಉಳಿದವರು ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದರು. ಅವರೆಲ್ಲ ಈ ಬಾರಿ ಪಾಸ್ ಆಗಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಕಲಾ ವಿಭಾಗದಲ್ಲಿ 7104 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 5938 ರೆಗ್ಯುಲರ್ ವಿದ್ಯಾರ್ಥಿಗಳು. ವಾಣಿಜ್ಯ ವಿಭಾಗದಲ್ಲಿ 3198 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರೆ ಅದರಲ್ಲಿ 2760 ರೆಗ್ಯುಲರ್. ವಿಜ್ಞಾನ ವಿಭಾಗದಲ್ಲಿ 3,127 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರೆ ಇದರಲ್ಲಿ 2785 ವಿದ್ಯಾರ್ಥಿಗಳು ರೆಗ್ಯುಲರ್ ಆಗಿದ್ದರು. ಇನ್ನೂ ಜಿಲ್ಲೆಯಲ್ಲಿ ನಗರ ಪ್ರದೇಶದಲ್ಲಿ ಒಟ್ಟು 9271 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರೆ, ಗ್ರಾಮೀಣ ಪ್ರದೇಶದಲ್ಲಿ 4158 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಎಲ್ಲ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಉತ್ತೀರ್ಣರಾದ ಹಿನ್ನೆಲೆಯಲ್ಲಿ ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶವು ಶೇ.100 ಬಂದಿದೆ.
ಪರೀಕ್ಷೆ ಬರೆಯದೇ ಬಂಪರ್ ಅಂಕ: ಜಿಲ್ಲೆಯಲ್ಲಿ ಈ ಬಾರಿ ದ್ವಿತೀಯ ಪಿಯು ಪರೀಕ್ಷೆಯನ್ನು ಬರೆಯದೇ ಬಹುಪಾಲು ವಿದ್ಯಾರ್ಥಿಗಳು ಬಂಪರ್ ಅಂಕ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಪ್ರಥಮ ಪಿಯು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಈ ಬಾರಿ ಅಂಕಗಳನ್ನು ನಿಗ ದಿ ಮಾಡಿ ಪ್ರಕಟಿಸಿದ್ದರಿಂದ ಹಿಂದಿನ ಶ್ರಮವೂ ಈಗ ಪ್ರತಿಫಲ ಕೊಟ್ಟಂತಾಗಿದೆ. ಕೆಲವು ವಿದ್ಯಾರ್ಥಿಗಳು ಬಯಸದೇ ಬಂದ ಭಾಗ್ಯ ಎನ್ನುವಂತೆ ಉತ್ತೀರ್ಣರಾಗಿದ್ದಾರೆ.
100ಕ್ಕೆ ನೂರು ಅಂಕ ಪಡೆದವರು: ಜಿಲ್ಲೆಯಲ್ಲಿ ಈ ಬಾರಿಯ ಫಲಿತಾಂಶದಲ್ಲಿ ನೂರಕ್ಕೆ ನೂರು ಅಂಕ ಪಡೆದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗಂಗಾವತಿ ನಗರದಲ್ಲಿನ ವಿದ್ಯಾನಿಕೇತನ ಪಿಯು ಕಾಲೇಜಿನ ಆರೀಫ್, ಭೂಮಿಕಾ ಕಳಸರಡ್ಡಿ, ಲೋಹಿತ್, ಎಂ.ಸತೀಶ್, ಮೇಘನಾ, ನವನೀತ್, ಪ್ರಕೃತಿ, ಸಾಗರ ದರೋಜಿ, ಟಿ.ಸ್ನೇಹ, ವಿಜಯಲಕ್ಷ್ಮೀ, ಶ್ರೀರಾಮನಗರದ ವಿದ್ಯಾನಿಕೇತನ ಪಿಯು ಕಾಲೇಜಿನ ದಿಲೀಪ್, ಜಿ. ಗಾಯತ್ರಿ, ಸಮರ್ಥ, ಶ್ರೀಪ್ರಿಯ ಅವರು 600ಕ್ಕೆ 600 ಅಂಕ ಪಡೆದಿದ್ದಾರೆ. ಇದು ಕೇವಲ ಎರಡು ಕಾಲೇಜಿನ ವಿದ್ಯಾರ್ಥಿಗಳ ಅಂಕವಾಗಿದ್ದು, ಇನ್ನೂ 98 ಕಾಲೇಜಿನಲ್ಲಿ ಕೆಲವು ಜನರು 600ಕ್ಕೆ 600 ಅಂಕ ಪಡೆದವರಿದ್ದು ನಿಖರ ಮಾಹಿತಿಯನ್ನು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯು ಜು.21ರಂದು ಬಿಡುಗಡೆ ಮಾಡಲಿದೆ.