ಕೊಪ್ಪಳ: 35 ವರ್ಷಗಳಿಂದ ಬಾಕಿ ಇರುವ ಬೆಳೆ ನಷ್ಟ ಪರಿಹಾರ ಕೊಡುವಂತೆ ಒತ್ತಾಯಿಸಿ ಕಣ್ಣೀರಿಡುತ್ತಲೇ ರೈತ ಮಂಜುನಾಥ ಪುರದ್ ಡಿಸಿಎಂ ಲಕ್ಷ್ಮಣ್ ಸವದಿ ಮುಂದೆ ಕಾಲಿಗೆರಗಿ ಬೇಡಿದ ಪ್ರಸಂಗ ಶುಕ್ರವಾರ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿದ ಬಳಿಕ ಡಿಸಿಎಂ ಲಕ್ಷ್ಮಣ್ ಸವದಿ ಸಾರ್ವಜನಿಕರ ಅಹವಾಲು ಸ್ವೀಕರಿಸುವ ವೇಳೆ ಈ ಪ್ರಸಂಗ ನಡೆದಿದೆ.
ಜಿಲ್ಲೆಯ ಹುಲಿಯಾಪುರ ಗ್ರಾಮದಲ್ಲಿ ಜಿಲ್ಲಾಡಳಿತ ಕೆರೆಯ ನಿರ್ಮಾಣಕ್ಕಾಗಿ ರೈತರ ಭೂಮಿಯನ್ನು 1985 ರಲ್ಲೆ ಸ್ವಾಧೀನ ಮಾಡಿಕೊಂಡಿದೆ. ಅದಕ್ಕೆ ಭೂಮಿ ಸ್ವಾಧೀನ ಪರಿಹಾರವನ್ನು ಕೂಡ ನೀಡಿದೆ. ಆದರೆ ಕೆರೆಯ ನೀರಿನಿಂದ ಬೆಳೆಗೆ ಅಪಾರ ಪ್ರಮಾಣದ ನಷ್ಟವಾಗಿದ್ದು, ಆಗಿನಿಂದಲೂ ನಾವು ಪರಿಹಾರ ಕೇಳುತ್ತಾ ಬಂದಿದ್ದೇವೆ. 45 ರೈತರ ಬೆಳೆ ನಷ್ಟವಾಗಿದ್ದು ಇನ್ನೂ ಪರಿಹಾರ ನೀಡಿಲ್ಲ.
ಧಾರವಾಡ ಹೈಕೋರ್ಟ್ ಸಹಿತ ಬೆಳೆ ನಷ್ಟ ಪರಿಹಾರ ಕೊಡುವಂತೆ ಆದೇಶ ಮಾಡಿದೆ. ಆದರೆ ಜಿಲ್ಲಾಡಳಿತ ಬೆಳೆ ನಷ್ಟ ಪರಿಹಾರ ಕೊಡುತ್ತಿಲ್ಲ. ಕಳೆದ 55 ವರ್ಷದಿಂದ ಕೋರ್ಟ್ ನಲ್ಲಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಕೂಡಲೇ ನಮಗೆ ಬೆಳೆ ನಷ್ಟ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತ ಎಂದು ರೈತ ಮಂಜುನಾಥ ಪುರದ್ ಡಿಸಿಎಂ ಲಕ್ಷ್ಮಣ್ ಸವದು ಕಾಲಿಗೆ ಬಿದ್ದು ಕಣ್ಣೀರಿಟ್ಟರು.
ಆ ವೇಳೆ ಪೊಲೀಸರು ರೈತನನ್ನು ಬೇರೆಡೆ ಕರೆದೊಯ್ಯುವ ಪ್ರಯತ್ನ ನಡೆಸಿದರು. ಬಳಿಕ ಸವದಿ ರೈತನಿಗೆ ಸಮಾಧಾನ ಹೇಳಿ ನಿನಗೆ ಪ್ರಚಾರ ಬೇಕೋ, ಪರಿಹಾರ ಬೇಕೋ ಎನ್ನುತ್ತಲೆ ಪರಿಹಾರ ಕೊಡಿಸುವ ಪ್ರಯತ್ನ ಮಾಡುವೆ ಎಂದು ಅಲ್ಲಿಂದ ತೆರಳಿದ್ದಾರೆ