ಕೊಪ್ಪಳ: ಚುನಾವಣೆ ವೇಳೆ ಕ್ಷೇತ್ರದ ಜನತೆಗೆ ನೀಡಿದ ಆಶ್ವಾಸನೆಯನ್ನು ಪ್ರಾಮಾಣಿಕವಾಗಿ ಈಡೇರಿಸುವ ಮೂಲಕ ಕೊಪ್ಪಳವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ನಿರ್ಮಾಣ ಮಾಡುವೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಭರವಸೆ ನೀಡಿದರು.
ನಗರದ ಸಮೀಪದ ಭಾಗ್ಯನಗರದ ಗಂಗಮ್ಮ ಲಕ್ಷ್ಮಣಸಾ ಖೋಡೆ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಶಾಸಕರಿಗೆ ಸನ್ಮಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನಗರದಲ್ಲಿ 168 ಕೋಟಿ ರೂ. ವೆಚ್ಚದಲ್ಲಿ 450 ಬೆಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಪ್ರಗತಿ ಹಂತದಲ್ಲಿದೆ. ಮಲ್ಟಿ ಸ್ಪೆಷಾಲಿಟಿ
ಆಸ್ಪತ್ರೆಗೆ ಅಗತ್ಯವಿರುವ ಪೀಠೊಪಕರಣಗಳು, ವೈದ್ಯರು, ಸಿಬ್ಬಂದಿ ಹಾಗೂ ಸೌಲಭ್ಯ ನೀಡಲು ಸರಕಾರ ಮಟ್ಟದಲ್ಲಿ ತೀರ್ಮಾನಿಸಿ ಶೀಘ್ರವೇ ಪ್ರಾರಂಭಿಸಲಾಗುವುದು. ಅಲ್ಲದೇ ಕ್ಷೇತ್ರದ ಜನರ ಆರೋಗ್ಯದ ಹಿತದೃಷ್ಟಿಯಿಂದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು 1000 ಹಾಸಿಗೆಗೆ ಹೆಚ್ಚಿಸಲಾಗುವುದು ಎಂದರು.
ಕ್ಷೇತ್ರದಲ್ಲಿ ಸಿಂಗಟಾಲೂರು, ಅಳವಂಡಿ-ಬೆಟಗೇರಿ, ಬಹದ್ದೂರಬಂಡಿ ಸೇರಿದಂತೆ ಅಪೂರ್ಣಗೊಂಡಿರುವ ಏತ ನೀರಾವರಿ
ಯೋಜನೆಗಳನ್ನು ಜಾರಿಗೊಳಿಸಿ, ರೈತರಿಗೆ ವರವಾಗುವ ನಿಟ್ಟಿನಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನೀರಾವರಿ ಯೋಜನೆಗೆ ನಯಾಪೈಸೆ ಅನುದಾನ ನೀಡದೇ ತಾರತಮ್ಯ ಮಾಡಿದರು.
Related Articles
ಇದರಿಂದ ನೀರಾವರಿ ಯೋಜನೆಗಳು ಕುಂಠಿತಗೊಂಡಿತು. ಹೀಗಾಗಿ ಈ ಬಾರಿಯ ಕಾಂಗ್ರೆಸ್ ಸರಕಾರದ ಅವಧಿ ಯಲ್ಲಿ ಕ್ಷೇತ್ರದ ಎಲ್ಲ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ, ರೈತರ ಜಮೀನಿಗೆ ನೀರು ಹರಿಸುತ್ತೇನೆ ಎಂದರು. ಭಾಗ್ಯನಗರ ಪಟ್ಟಣಕ್ಕೆ ಸಂಪರ್ಕವಾಗಿ ಮೇಲ್ಸೆತುವೆಯಾಗಿದೆ. ಬರುವ ದಿನಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಮಾಡಲಾಗುವುದು.
ಫಾರಂ ನಂ-3ಗೆ ಸಂಬಂಧಿಸಿದಂತೆ ತ್ವರಿತಗತಿಯಲ್ಲಿ ವಿತರಣೆಗೆ ನಾವು ಕ್ರಮ ಕೈಗೊಳ್ಳಲಿದ್ದೇವೆ. ನಗರಕ್ಕೆ ವಿಮಾನ ನಿಲ್ದಾಣಕ್ಕಾಗಿ, ನ್ಯಾಯಾಲಯ ಸಂಕೀರ್ಣಕ್ಕಾಗಿ ಸ್ಥಳ ನಿಗ ಪಡಿಸಿ ಕಾರ್ಯರೂಪಕ್ಕೆ ತರವಂತ ಯತ್ನ ಮಾಡುತ್ತೇನೆ. ಈಗ ನಮ್ಮ ಸರಕಾರ ರಚನೆಯಾಗಿದ್ದು, ನಗರಾಭಿವೃದ್ಧಿಗಾಗಿ ಡಿಪಿಆರ್ ಮಾಡಿಸಿ 168 ಕೋಟಿ ರೂ. ವೆಚ್ಚದಲ್ಲಿ ಭಾಗ್ಯನಗರ ಹಾಗೂ ಕೊಪ್ಪಳ ನಗರಕ್ಕೆ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ಯುವಕರ ಬೇಡಿಕೆಯಂತೆ ಇ-ಲೈಬ್ರರಿ, ಇಂಟರ್ ನ್ಯಾಷನಲ್ ಶಾಲೆ ನಿರ್ಮಾಣಕ್ಕೆ ಕ್ರಮ ಕೈಗೊಂಡು, ಹೆಚ್ಚು ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಜುಲ್ಲು ಖಾದ್ರಿ, ಹಿರಿಯ ವಕೀಲ ಆಸೀಫ್ ಅಲಿ, ಗೂಳಪ್ಪ ಹಲಿಗೇರಿ, ಕಾಟನ್ ಪಾಷಾ, ಕೃಷ್ಣಾರಡ್ಡಿ ಗಲಬಿ, ಶ್ರೀನಿವಾಸ್ ಗುಪ್ತಾ, ರಾಘವೇಂದ್ರ ಪಾನಘಂಟಿ, ಯಮನೂರಪ್ಪ ಕಬ್ಬೆರ್, ಸರಸ್ವತಿ ಇಟ್ಟಂಗಿ ಇದ್ದರು.