ಕೊಪ್ಪಳ: ವೀರರಾಣಿ ಕಿತ್ತೂರಿನ ಚನ್ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮೊದಲ ಮಹಿಳಾ ಸ್ವಾತಂತ್ರ್ಯಗಾರ್ತಿ ಎಂದೆನಿಸಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. ಚನ್ನಮ್ಮಳ ಹೋರಾಟ ಈ ಜಗತ್ತಿಗೆ ಮಾದರಿಯಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಅವರು ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶದ ಉಳಿವಿಗಾಗಿ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಚನ್ನಮ್ಮ ಇಡೀ
ಜೀವನವನ್ನು ಮುಡಿಪಾಗಿಟ್ಟು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರು. ಪಂಚಮಸಾಲಿ ಸಮಾಜ ಇತರೆ ಸಮಾಜಗಳ ಬೆಳವಣಿಗೆಯ ತುಲನೆ ಮಾಡಿ ಬೆಳವಣಿಗೆಯತ್ತ ಹೆಜ್ಜೆ ಹಾಕಬೇಕು. ಸಮಾಜದ ಅಭಿವೃದ್ಧಿಯ ಜೊತೆಗೆ ಚನ್ನಮ್ಮಳ ಆದರ್ಶಗಳನ್ನು ಇಂದಿನ ಯುವ ಸಮೂಹಕ್ಕೆ ತಿಳಿಸಿ ಅವುಗಳ ಪಾಲನೆ ಆಗಬೇಕಿದೆ ಎಂದರು.
ಸಮಾರಂಭಕ್ಕೂ ಮುನ್ನ ಚನ್ನಮ್ಮ ವೃತ್ತದಿಂದ ಸಾಹಿತ್ಯ ಭವನದವರೆಗೂ ವೀರರಾಣಿ ಚನ್ನಮ್ಮಳ ಭಾವಚಿತ್ರದ ಮೆರವಣಿಗೆ ಸಂಭ್ರಮ, ಸಡಗರದಿಂದ ನಡೆಯಿತು. ಮೆರವಣಿಗೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಸಾಹಿತ್ಯ ಭವನದಲ್ಲಿ ಜಯಂತಿ ಆಚರಣೆ ಬಳಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಶ್ರೀ ಗವಿಸಿದ್ದೇಶ್ವರ ಕಾಲೇಜಿನ ಉಪನ್ಯಾಸಕ ಶರಣಬಸಪ್ಪ ಬಿಳೆಎಲೆ ಅವರು ಉಪನ್ಯಾಸ ನೀಡಿದರು. ಎಡಿಸಿ ಸಾವಿತ್ರಿ ಕಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಸನಗೌಡ ತೊಂಡಿಹಾಳ, ತಾಲೂಕು ಅಧ್ಯಕ್ಷ ಕರಿಯಪ್ಪ ಮೇಟಿ, ಪ್ರಧಾನ ಕಾರ್ಯದರ್ಶಿ ದೇವರಾಜ ಹಾಲಸಮುದ್ರ, ಮುಖಂಡೆ ಮಂಜುಳಾ ಕರಡಿ, ನಿಂಗಮ್ಮ ಸಂಗಣ್ಣ ಕರಡಿ, ನಗರಸಭೆ ಸದಸ್ಯ ಲತಾ ಗವಿಸಿದ್ಧಪ್ಪ ಚಿನ್ನೂರು, ಬಸವರಾಜ ಪಲ್ಲೇದ, ಸುಮಂಗಲಾ ಹಂಚಿನಾಳ, ಸರ್ವೇಶಗೌಡ ಬನ್ನಿಕೊಪ್ಪ, ಪ್ರತಿಮಾ ಪಟ್ಟಣಶೆಟ್ಟಿ ಇತರರು ಪಾಲ್ಗೊಂಡಿದ್ದರು.