Advertisement

ಕೊಪ್ಪಳ: ದಾಸೋಹಕ್ಕೆ ಭಕ್ತ ಸಾಗರ- ಗವಿಸಿದ್ದೇಶ್ವರ ಜಾತ್ರೆ ಸಂಪನ್ನ

04:37 PM Feb 10, 2024 | Team Udayavani |

ಉದಯವಾಣಿ ಸಮಾಚಾರ
ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾ ಜಾತ್ರೋತ್ಸವಕ್ಕೆ ಶುಕ್ರವಾರ ಸಂಭ್ರಮದ ತೆರೆ ಕಂಡಿತು. ಭಕ್ತರು ಶ್ರೀಮಠದಲ್ಲಿ ಕರ್ತೃ ಗದ್ದುಗೆ ದರ್ಶನ ಪಡೆದು, ಪ್ರಸಾದ ಸವಿದರು. ಶ್ರೀಮಠದಲ್ಲಿ ಬನದ ಹುಣ್ಣಿಮೆ ದಿನದಿಂದ ಆರಂಭವಾದ ಜಾತ್ರಾ ಧಾರ್ಮಿಕ ಕಾರ್ಯಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿದವು.

Advertisement

ಮಹಾರಥೋತ್ಸವಕ್ಕೆ ಈ ಬಾರಿ  ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಮಹಾ ಸ್ವಾಮೀಜಿ ಚಾಲನೆ ನೀಡಿ ಭಕ್ತಗಣಕ್ಕೆ ಉಪದೇಶ ನೀಡಿದರು. ಗವಿಮಠದ ಕೈಲಾಸ ಮಂಟಪದಲ್ಲಿ ಮೂರು ದಿನಗಳ ಕಾಲ ಭಕ್ತ ಹಿತ ಚಿಂತನಾ ಸಭೆ, ಅನುಭಾವಿಗಳ ಉಪದೇಶಾಮೃತ, ಸಂಗೀತ ಕಾರ್ಯಕ್ರಮಗಳು ನಡೆದವು.

ಸ್ವಚ್ಛತೆಗೆ ಹೆಸರಾದ ಜಾತ್ರೋತ್ಸವ: ಪ್ರತಿ ವರ್ಷದ ಜಾತ್ರೆಗಳಿಗಿಂತ ಈ ವರ್ಷದ ಜಾತ್ರೆ ವಿಭಿನ್ನ ಹಾಗೂ ವಿಶಿಷ್ಟತೆಯನ್ನು ಪಡೆದಿದೆ. ಜಾತ್ರಾ ಮಹೋತ್ಸವದಲ್ಲಿ ಮಠದ ಮೈದಾನ, ಮಹಾ ದಾಸೋಹ ಮಂಟಪ, ಗವಿಮಠದ ಕರ್ತೃ ಗದ್ದುಗೆ, ಕೈಲಾಸ ಮಂಟಪ ಸೇರಿದಂತೆ ಬೆಟ್ಟದ ಪ್ರದೇಶದಲ್ಲಿ, ಜಾತ್ರೆಯಲ್ಲಿನ ಒಳಾಂಗಣದಲ್ಲೂ ಸ್ವಚ್ಛತೆ ಎದ್ದು ಕಾಣುತ್ತಿತ್ತು.

ಸ್ವಯಂ ಪ್ರೇರಿತವಾಗಿ ಭಕ್ತಗಣ ಜಾತ್ರೆಯಲ್ಲಿ ಶಿಸ್ತುಬದ್ಧ ಸೇವೆಯಲ್ಲಿ ತೊಡಗಿದ್ದು ಗಮನ ಸೆಳೆಯಿತು. ಅಲ್ಲದೇ ಮಠದ ಆವರಣದಲ್ಲಿ ತಾವೇ ಸ್ವತ್ಛ ಸೇವಾ ಕಾರ್ಯದಲ್ಲಿ ತೊಡಗಿ ಗಮನ ಸೆಳೆದರು. ಅಲ್ಲದೇ ಜನರಿಗೆ ಜಾಗೃತಿ ಮೂಡಿಸಿ ಹೆಸರಾದರು.

ಕರ್ತೃ ಗದ್ದುಗೆಯಲ್ಲಿ ಲಘು ರಥೋತ್ಸವ:ಪ್ರತಿ ವರ್ಷದ ಪೂರ್ವ ಪರಂಪರೆಯಂತೆ ಜಾತ್ರೆಯ ಸಂಪನ್ನದ ಕೊನೆಯ ದಿನ ಅಮವಾಸ್ಯೆ ದಿನ ಗವಿಮಠದ ಕರ್ತೃ ಗದ್ದುಗೆಯಲ್ಲಿ ಲಘು ರಥೋತ್ಸವ ಸಂಜೆ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಭಕ್ತಗಣವು ಲಘು ರಥೋತ್ಸವದಲ್ಲಿ ಪಾಲ್ಗೊಂಡು ಪುಷ್ಪಗಳ ಸಮರ್ಪಿಸಿ ಶ್ರೀಗವಿಸಿದ್ದೇಶ್ವರನ ನಾಮ ಸ್ಮರಣೆ ಮಾಡಿ ಇಷ್ಟಾರ್ಥ ಕೇಳಿಕೊಂಡರು.

Advertisement

ಮಹಾದಾಸೋಹದಲ್ಲಿ ಜನಸ್ತೋಮ: ಅಮಾವಾಸ್ಯೆ ದಿನವಾದ ಶುಕ್ರವಾರ ಶ್ರೀಮಠಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ಕರ್ತೃ ಗದ್ದುಗೆ, ಮಹಾ ರಥೋತ್ಸವಕ್ಕೆ ಕಾಯಿ, ಕರ್ಪೂ ರ ಅರ್ಪಿಸಿ ಮಹಾದಾಸೋಹ ಮಂಟಪದಲ್ಲಿ ಮಹಾ ಪ್ರಸಾದ ಸವಿಯಿತು. ಮಹಾ ದಾಸೋಹದಲ್ಲಿ ಗೋದಿ ಪಾಯಿಸ, ಅನ್ನ ಸಾಂಬಾರು, ಸಂಡಿಗೆ ಹಪ್ಪಳ, ಉಪ್ಪಿನ ಕಾಯಿ, ಚಟ್ನಿ, ದಾಲ್‌ ಸೇರಿದಂತೆ ರುಚಿಯಾದ ಪ್ರಸಾದ ಸವಿದರು.ಒಟ್ಟಿನಲ್ಲಿ 15-20 ದಿನಗಳ ಕಾಲ ನಡೆದ ಶ್ರೀ ಗವಿಸಿದ್ದೇಶ್ವರ ಮಹಾ ರಥೋತ್ಸವ ಅಮಾವಾಸ್ಯೆ ದಿನದಂದು ಸಂಪನ್ನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next