Advertisement

ಕೊಪ್ಪಳದ ಅದ್ಭುತ ಶಿಲ್ಪಿ ವೆಂಕಣ್ಣ ಚಿತ್ರಗಾರಗೆ ಸಂದ ರಾಜ್ಯೋತ್ಸವದ ಗೌರವ

07:15 PM Oct 31, 2021 | Team Udayavani |

ಕೊಪ್ಪಳ: ಕಳೆದ 50 ವರ್ಷಗಳಿಂದ ಶಿಲ್ಪ ಕಲೆಯನ್ನು ನಂಬಿ ಜೀವನ ನಡೆಸಿ ನಾಡಿನುದ್ದಕ್ಕೂ ಕಟ್ಟಿಗೆಯಲ್ಲಿ ರಥಗಳು, ಪಲ್ಲಕ್ಕಿ, ಮಂಟಪ, ಮೂರ್ತಿಗಳು, ದೇವತಾ ಮೂರ್ತಿಗಳು ಸೇರಿದಂತೆ ಹಲವಾರು ವರ್ಣ ಚಿತ್ರಗಳನ್ನು ಕೆತ್ತನೆ ಮಾಡಿರುವ ೭೦ರ ಇಳಿ ವಯಸ್ಸಿನ ಶಿಲ್ಪಿ ವೆಂಕಣ್ಣ ಚಿತ್ರಗಾರ ಅವರಿಗೆ ರಾಜ್ಯ ಸರ್ಕಾರ 2020-21ನೇ ಸಾಲಿಗೆ ಶಿಲ್ಪಕಲೆ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.

Advertisement

ವೆಂಕಣ್ಣ ಚಿತ್ರಗಾರ ಅವರು ಮೂಲತಃ ಗಂಗಾವತಿ ನಿವಾಸಿಯಾಗಿದ್ದು, ಹನುಮಂತಪ್ಪ ಹಾಗೂ ಮೀನಾಕ್ಷಮ್ಮ ದಂಪತಿಗೆ 01-05-1950 ರಲ್ಲಿ ಜನಿಸಿದ ಇವರು, 5 ದಶಕದಿಂದ ಶಿಲ್ಪಕಲೆಯನ್ನೇ ಜೀವಾಳವಾಗಿಸಿಕೊಂಡು ಬಂದಿದ್ದಾರೆ. 4ನೇ ತರಗತಿ ಶಿಕ್ಷಣ ಪಡೆದ ಚಿತ್ರಗಾರ ಅವರು ವಂಶ ಪಾರಂಪರ‍್ಯದಿಂದ ಶಿಲ್ಪಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. 7 ರಿಂದ 45 ಅಡಿ ಎತ್ತರದ ಕಟ್ಟಿಗೆಯ 100 ರಥಗಳ ಕೆತ್ತನೆ, 5 ಸಾವಿರ ಮೂರ್ತಿಗಳ ದೇವತಾ ಮೂರ್ತಿಗಳ ಕೆತ್ತನೆ ಮಾಡಿದ್ದಾರೆ.

ವಿಜಯನಗರ ಶೈಲಿಯ, ವಾಸ್ತು ಪ್ರಕಾರದ ಚಿತ್ರಕಲೆ, ಸಾಗವಾನಿ, ಬೇವಿನ ಕಟ್ಟಿಗೆ, ಸಾಗುವಾನಿ ಕಟ್ಟಿಗೆ, ಮತ್ತಿ ಕಟ್ಟಿಗೆ ಸೇರಿದಂತೆ ವಿವಿಧ ಬಗೆ ಕಟ್ಟಿಗೆಗಳಲ್ಲಿ ಗ್ರಾಮ ದೇವತಾ ಮೂರ್ತಿಗಳು, ಪಲ್ಲಕ್ಕಿ, ಮಂಟಪ, ದೇವರ ತೊಟ್ಟಿಲು ಸೇರಿ ನಾನಾ ಬಗೆಯ ವರ್ಣ ಚಿತ್ತಾರಗಳನ್ನು ಕೈಯಿಂದಲೇ ಬಿಡಿಸಿ ಎಲ್ಲರ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಇವರ ಚಿತ್ರಗಳಲ್ಲಿ ಆನೆ ಸಾಲು, ರಾವಣನ ಸನ್ನಿವೇಶ, ಅಷ್ಟ ದಿಕ್ಪಾಲಕರು, ಶಿವ, ವಿಷ್ಣು, ಹನುಮಂತನ ಅವತಾರ, ನವಿಲು, ಗಜವಾಹನ, ಸಿಂಹವಾಹನ ಸೇರಿ ಹಲವು ಆಸನಗಳಲ್ಲಿನ ಚಿತ್ರಗಳು ಕಣ್ಣಲ್ಲಿ ಕಟ್ಟಿದಂತೆ ಕಾಣುತ್ತವೆ. ಇವರ ಕಲಕುಷರಿ ನಾಡಿನ ಗಮನ ಸೆಳೆದಿದೆ.

ಇಳಿ ವಯಸ್ಸಿನಲ್ಲಿಯೂ ತಮ್ಮ ಕಾಯಕ ಸೇವೆ ಮುಂದುವರೆಸಿದ್ದಾರೆ. ಇವರ ಸೇವೆ ಪರಿಗಣಿಸಿ ಸನ್ಮಾನ, ಗೌರವಗಳು ಲಭಿಸಿವೆ. ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ತಂದೆಯ ಹಾದಿಯಲ್ಲಿಯೇ ಪುತ್ರರು ಶಿಲ್ಪಕಲೆಯ ಸೇವೆ ಮುಂದುವರೆಸಿದ್ದಾರೆ. ರಾಜ್ಯ ಸರಕಾರವು ಇವರ ಸೇವೆ ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಇವರ ಸೇವೆ ಗೌರವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next