ಕೊಪ್ಪ: ಮೆಸ್ಕಾಂ ಅ ಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಶುಕ್ರವಾರ ಬಾಳಗಡಿಯ ಮೆಸ್ಕಾಂ ಕಚೇರಿಯಲ್ಲಿ ಮೆಸ್ಕಾಂ ಹಮ್ಮಿಕೊಂಡಿದ್ದ ತ್ರೆ„ಮಾಸಿಕ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇಲ್ಲಿನ ಮೆಸ್ಕಾಂ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸದ ಕಾರಣ ಆಗಬೇಕಾದ ಕೆಲಸ ಕುಂಠಿತವಾಗುತ್ತಿದೆ. ಮೂರು ತಿಂಗಳಿಗೊಮ್ಮೆ ನಡೆಯುವ ಜನಸಂಪರ್ಕ ಸಭೆಯಲ್ಲಿ ಜನರಿಗೆ ಮಾಹಿತಿ ನೀಡದೆ ಕಾಟಾಚಾರಕ್ಕೆ ನಡೆಸುತ್ತಿದ್ದಾರೆ ಎಂದು ಗ್ರಾಹಕರು ದೂರಿದರು.
ಸಭೆಯಲ್ಲಿ ರೈತಸಂಘದ ಅಧ್ಯಕ್ಷ ನವೀನ್ ಕರುವಾನೆ ಮಾತನಾಡಿ, ಮೆಸ್ಕಾಂ ಇಲಾಖೆಯಲ್ಲಿ ಜನರಿಗೆ ಅಗತ್ಯವಿರುವ ಕೆಲಸಗಳು ತಕ್ಷಣಕ್ಕೆ ಆಗುವುದಿಲ್ಲ. ಇಲ್ಲಿನ ಅಧಿಕಾರಿಗಳ ಉದಾಸೀನಕ್ಕೆ ಜನರು ಹೈರಾಣಾಗುತ್ತಿದ್ದಾರೆ. ಕನಿಷ್ಠ ಮೂರು ತಿಂಗಳಿಗೊಮ್ಮೆ ನಡೆಯುವ ಜನಸಂಪರ್ಕ ಸಭೆಯ ಬಗ್ಗೆ ಜನರಿಗೆ ಮಾಹಿತಿ ನೀಡದೆ ಕದ್ದು ಮುಚ್ಚಿ ನಡೆಸುತ್ತಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಸಭೆಯಲ್ಲಿ ಸರಿಯಾದ ಮಾಹಿತಿ ನೀಡುವಂತೆ ಇಲಾಖೆ ಉಪ ವಿಭಾಗಾಧಿಕಾರಿ ಯೊಗೇಶ್ ಬಿ.ಆರ್. ಅವರಿಗೆ ಒತ್ತಾಯಿಸಿ ಪ್ರತಿಭಟಿಸಲು ಮುಂದಾದರು. ಆಗ ಯೊಗೇಶ್ ತಮ್ಮ ಸಿಬ್ಬಂದಿಯಿಂದ ಮಾಹಿತಿ ತರಿಸಿಕೊಂಡು ಸಭೆಗೆ ನೀಡಿದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಮಡಬಳ್ಳಿ ಮಾತನಾಡಿ, ಛಾವಲ್ಮಾನೆ ಗ್ರಾಪಂ ವ್ಯಾಪ್ತಿಯಲ್ಲಿ ಬೆಳಮುಡಿ ಸಮೀಪ ಜಗದೀಶ್, ಮಂಜುನಾಥ್ ಎಂಬ ರೈತರು ತಮ್ಮ ಜಮೀನಿನ ಪಂಪ್‌ಸೆಟ್‌ಗೆ ಹಾಕಿದ್ದ ವಿದ್ಯುತ್ ಕಂಬ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಳೆಗೆ ಹೊಳೆಯಲ್ಲಿ ಕೊಚ್ಚಿ ಹೋಗಿದ್ದವು. ಇದುವರೆಗೂ ಕೆಲಸ ಮಾಡಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎ.ಇ.ಇ. ಚಂದ್ರಶೇಖರ್, ಕೆಲಸದ ಅನುಮೋದನೆ ದೊರಕಿಲ್ಲ. ನೆರೆ ಹಾನಿಗೆ ಒಂದು ಕೋಟಿ ರೂ. ಬಂದಿದ್ದು. 60 ಲಕ್ಷ ರೂ. ಕೆಲಸವಾಗಿದೆ ಎಂದು ತಿಳಿಸಿದರು.
ಹಸಿರು ಸೇನೆಯ ಚಿಂತನ್ ಬೆಳಗೊಳ ಮಾತನಾಡಿ, ಜಂಗಲ್ ಕಟ್ಟಿಂಗ್ ಕಾಟಚಾರಕ್ಕೆ ಮಾಡುತ್ತೀರಾ? ಮಳೆ ಪ್ರಾರಂಭವಾಗುವ ಮುನ್ನ ಜಂಗಲ್ ಕಟಿಂಗ ಮಾಡಬೇಕು. ಅದರೇ ಇಲ್ಲಿ ಮಳೆ ಮುಗಿದ ನಂತರ ಕಟ್ಟಿಂಗ್ ಮಾಡಲಾಗುತ್ತದೆ. ಇದರಿಂದ ಯಾರಿಗೆ ಲಾಭ ಎಂದು ಪ್ರಶ್ನೆ ಮಾಡಿದರು. ದೀನ್‌ದಯಾಳ್ ಯೋಜನೆಯಲ್ಲಿ ಗುತ್ತಿಗೆ ಪಡೆದವರು ಕೆಲಸ ಸರಿಯಾಗಿ ಮಾಡದೇ ಫಲಾನುಭವಿಗಳು ವಿದ್ಯುತ್ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು. ಜನಸಂಪರ್ಕ ಸಭೆಯಲ್ಲಿಅಧೀಕ್ಷಕ ಇಂಜಿನಿಯರ್ ಉಮೇಶ್ ಚಂದ್ರ, ಹರಂದೂರು ಗ್ರಾಪಂ ಸದಸ್ಯ ಸೃಜನ್ ಮುಂತಾದವರಿದ್ದರು.