Advertisement

ಅರಣ್ಯ ಇಲಾಖೆಯಿಂದ ತೊಂದರೆ

05:57 PM Sep 07, 2019 | Team Udayavani |

ಕೊಪ್ಪ: ತಾಲೂಕಿನ ವಿವಿಧೆಡೆ ಅರಣ್ಯ ಇಲಾಖೆ ಮನೆ ಬಳಿ ಯಾವುದೇ ಸೂಚನೆ ನೀಡದೆ ಟ್ರಂಚ್ ನಿರ್ಮಿಸುತ್ತಿರುವುದರಿಂದ ಮಳೆ ನೀರು ಮನೆಯೊಳಗೆ ಶೇಖರಣೆಯಾಗಿ ತೊಂದರೆಯಾಗುತ್ತಿದೆ. ಪ್ರಶ್ನೆ ಮಾಡಲು ಜನ ಮುಂದೆ ಬಂದರೆ ದಬ್ಟಾಳಿಕೆ ಮಾಡುತ್ತೀರಾ ಎಂದು ಗದರಿಸುತ್ತಾರೆ ಎಂದು ತಾಪಂ ಸದಸ್ಯ ಎನ್‌.ಕೆ.ಉದಯ್‌ ಆರೋಪಿಸಿದರು.

Advertisement

ಶುಕ್ರವಾರ ಬಾಳಗಡಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಜಯಂತಿ ನಾಗರಾಜ್‌ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಮಾಸಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಟ್ರಂಚ್ ನಿರ್ಮಾಣದ ವೇಳೆ ಮೇಲಿನಿಂದ ಹರಿದು ಬರುವ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಕಾಲುವೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಆಗ್ರಹಿಸಿದರು.

ಜನಸಾಮಾನ್ಯರು ಮರ ಕಡಿದರೆ ಕೇಸು ಹಾಕುವ ಅರಣ್ಯ ಇಲಾಖೆ ಅಧಿಕಾರಿಗಳು, ಟ್ರಂಚ್ ನಿರ್ಮಾಣದ ವೇಳೆ ಬೆಳೆದುನಿಂತ ಮರಗಳನ್ನೇ ಧರೆಗುರುಳಿಸುತ್ತಿದೆ ಎಂದು ಆಪಾದಿಸಿದರು. ಅರಣ್ಯ ಇಲಾಖೆ ಅಧಿಕಾರಿ ಪ್ರವೀಣ ಕುಮಾರ್‌ ಮಾತನಾಡಿ, ಟ್ರಂಚ್ನಿಂದ ಉಂಟಾಗುತ್ತಿರುವ ಸಮಸ್ಯೆಗಳು ಗಮನಕ್ಕೆ ಬಂದಿವೆ. ಮುಂದಿನ ದಿನಗಳಲ್ಲಿ ಸಿಮೆಂಟ್ ಕಂಬಗಳನ್ನು ನೆಡುವ ಬಗ್ಗೆ ಇಲಾಖೆ ಚಿಂತಿಸಿದೆ ಎಂದು ತಿಳಿಸಿದರು.

ಜಯಪುರ ಜಲದುರ್ಗ ರಸ್ತೆ ದುರಸ್ತಿ ವೇಳೆ ರಸ್ತೆ ಬದಿಯಲ್ಲಿ ಬೆಳೆದು ನಿಂತ ಮರಗಳ ಬುಡದಿಂದ ಮಣ್ಣನ್ನು ತೆಗೆಯಲಾಗುತ್ತಿದೆ. ಆಕಸ್ಮಿಕವಾಗಿ ಮರಗಳು ಬಿದ್ದರೆ ಸುತ್ತಮುತ್ತ ಇರುವ ಮನೆಗಳಿಗೆ ಹಾನಿಯಾಗುತ್ತದೆ. ಇದರಿಂದ ಮಣ್ಣು ತೆಗೆಯುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ವಹಿಸುವಂತೆ ಅಧ್ಯಕ್ಷೆ ಜಯಂತಿ ನಾಗರಾಜ್‌ ಅರಣ್ಯಾಧಿಕಾರಿಗಳಿಗೆ ತಿಳಿಸಿದರು.

Advertisement

ಕೊಪ್ಪ ತಾಲೂಕಿನಲ್ಲಿ ಆಶ್ರಯ ನಿವೇಶನಕ್ಕಾಗಿ ಮಂಜೂರಾದ ಜಾಗ ಹೊರತು ಪಡಿಸಿ ಹಂಚಿಕೆಯಾಗದೆ ಉಳಿದಿರುವ ಜಾಗದ ದಾಖಲೆ ನೀಡುವಂತೆ ಸಭೆಯಲ್ಲಿ ಕಂದಾಯ ಇಲಾಖೆಗೆ ತಿಳಿಸಲಾಯಿತು. ಅಸಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಸುಬ್ರಹ್ಮಣ್ಯ ಭಟ್ ಎಂಬುವವರ ಮನೆಯ ಬಳಿ ಮರ ಬಿದ್ದಿದ್ದು, ಅದನ್ನು ತೆರವುಗೊಳಿಸುವ ವೇಳೆ ಕಮಲಾಕರ್‌ ಎಂಬ ಗಾರ್ಡ್‌ ಒಬ್ಬರು ಅವಾಚ್ಯ ಪದಗಳನ್ನು ಬಳಸಿ ನಿಂದಿಸಿರುವ ಬಗ್ಗೆ ಆರೋಪವಿದೆ. ಸೌಜನ್ಯಯುತವಾಗಿ ಮಾತನಾಡಲು ಆತನಿಗೆ ತಿಳಿಸುವಂತೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಕಿರಣ್‌ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.

ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ಅವಧಿ ಮುಗಿಯುತ್ತಾ ಬಂದರೂ ಸೆಕ್ಷನ್‌ 4 ಕಾರಣದಿಂದ ಮನೆಯಿಲ್ಲದವರಿಗೆ ಮನೆ ನೀಡಲು ಸಾಧ್ಯವಾಗುತ್ತಿಲ್ಲ. ಅರಣ್ಯ ಮತ್ತು ಕಂದಾಯ ಇಲಾಖೆಯವರು ಜಂಟಿ ಸರ್ವೆ ನಡೆಸಿ ಕೂಡಲೇ ಜಾಗ ಗುರುತಿಸಿಕೊಟ್ಟಲ್ಲಿ ಬಡವರಿಗೆ ನಿವೇಶನ ನೀಡಲು ಅನುಕೂಲವಾಗುತ್ತದೆ. ಈ ಬಗ್ಗೆ ಕೂಡಲೇ ಗಮನ ಹರಿಸುವಂತೆ ವಿನಂತಿಸಿದರು.

ತಾಲೂಕಿನ ತುಳುವಿನಕೊಪ್ಪ ಗ್ರಾಪಂ ವ್ಯಾಪ್ತಿಯ ತೆಂಗಿನಮನೆ ನಿವಾಸಿಯಾದ ಕೂಸು ದೇವಾಡಿಗ ಅವರ ಮನೆಯಲ್ಲಿ ಅಳವಡಿಸಿದ್ದ ದೀನ್‌ದಯಾಳ್‌ ಯೋಜಯ ವಿದ್ಯುತ್‌ ದೀಪವನ್ನು ಸ್ಥಳೀಯ ಲೈನ್‌ಮನ್‌ ಒಬ್ಬ ಏಕಾಏಕಿ ಕಿತ್ತು ಹಾಕಿಹೋದ ಘಟನೆಯ ಬಗ್ಗೆ ಮೆಸ್ಕಾಂ ಎಇಇ ಚಂದ್ರಶೇಖರ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ತಾಪಂ ಇಒ ನವೀನ್‌ ಕುಮಾರ್‌, ಉಪಾಧ್ಯಕ್ಷೆ ಜೆ.ಎಸ್‌.ಲಲಿತಾ, ಮಂಜುಳಾ, ಕೃಷ್ಣಯ್ಯ ಶೆಟ್ಟಿ, ಕೃಷಿ ಇಲಾಖೆ ಅಧಿಕಾರಿ ಚಂದನ, ತೋಟಗಾರಿಕೆ ಇಲಾಖೆ ಅಧಿಕಾರಿ ಅಕ್ಷಯ್‌, ಕ್ಷೇತ್ರ ಶಿಕ್ಷಣಾಧಿಕಾರಿ ಗಣಪತಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next