Advertisement

ಬಗ್ಗುಂಜೆಯಲ್ಲಿ ಪ್ರಾಚೀನ ಜೈನ ಬಸದಿ ಪತ್ತೆ

01:00 PM May 06, 2019 | Naveen |

ಕೊಪ್ಪ: ಹತ್ತು ಹನ್ನೊಂದನೇ ಶತಮಾನದಲ್ಲಿ ಹೊಂಬುಜ ಮತ್ತು ಕಳಸ-ಕಾರ್ಕಳ ಸೀಮೆಯನ್ನಾಳಿದ ಸಾಂತರ ಅರಸರಿಗೆ ಸಂಬಂಧಪಟ್ಟ ಪ್ರಾಚೀನ ಜೈನ ಬಸದಿಯೊಂದು ಮಣ್ಣಿನಲ್ಲಿ ಮುಚ್ಚಿ ಹೋದ ಸ್ಥಿತಿಯಲ್ಲಿ ತಾಲೂಕು ಬಗ್ಗುಂಜಿಯಲ್ಲಿ ಪತ್ತೆಯಾಗಿದೆ.

Advertisement

ಕಲ್ಕೆರೆಯ ಹವ್ಯಾಸಿ ಇತಿಹಾಸ ಸಂಶೋಧಕ ನ.ಸುರೇಶ್‌ ಈ ಕುರಿತು ಮಾಹಿತಿ ನೀಡಿದ್ದು, ಸಾಂತರರು ತಮ್ಮ ಸಾಮ್ರಾಜ್ಯದ ಗಡಿಯ ಗುರುತಿಗಾಗಿ ಕೆಲವೆಡೆ ಬಸದಿಯನ್ನು ನಿರ್ಮಿಸಿದರು. ಇಂತಹ ಬಸದಿಗಳಲ್ಲಿ ಒಂದು ಬಗ್ಗುಂಜಿಯ ಆದಿ ನಾಥಸ್ವಾಮಿ ಬಸದಿ. ಸುಮಾರು ಹನ್ನೊಂದನೇ ಶತಮಾನದಲ್ಲಿ ನಿರ್ಮಿತವಾದುದೆಂದು ಹೇಳಲಾಗುವ ಈ ಬಸದಿ ದಾಖಲೆಗಳಲ್ಲಿ ಗಡಿಬಸದಿ ಎಂದೇ ಉಲ್ಲೇಖವಾಗಿದೆ.

ನಾಲ್ಕು ಕಡೆ ಹದಿನೈದು ಮೀಟರ್‌ ಅಳತೆಯ ಸುಸಜ್ಜಿತ ಕಲ್ಲಿನ ನೆಲಗಟ್ಟಿನ ಮೇಲೆ ಕಟ್ಟಲ್ಪಟ್ಟ ಈ ಬಸದಿ ಮಣ್ಣಿನಡಿ ಹೂತು ಹೋಗಿದ್ದರೂ ಇನ್ನೂ ತನ್ನ ಭವಿತ್ಯವನ್ನು ಉಳಿಸಿಕೊಂಡಿದೆ. ಬಸದಿಯ ಒಳಗೆ ಉತ್ತರ, ದಕ್ಷಿಣ, ಪಶ್ಚಿಮ ದಿಕ್ಕಿನಲ್ಲಿ ಅರವತ್ತಾರು ಸೆಂ.ಮೀ. ಎತ್ತರದ ಮೂರು ಬಲಿಗಂಬಗಳಿವೆ. ಬಸದಿಯ ಮಧ್ಯದಲ್ಲಿ ನಾಲ್ಕು ಮೀಟರ್‌ ಸುತ್ತಳತೆಯ ಸುಂದರ ಪುಷ್ಕರಣಿ ಇದೆ. ಅಲ್ಲದೆ, ಬಸದಿಯ ಒಳಗೆ ಒಂದು ಮೀಟರ್‌ ಸುತ್ತಳತೆಯ ಪುಟ್ಟ ಸುಂದರ ಬಾವಿಯೂ ಇದೆ. ಪುಷ್ಕರಣಿಯಲ್ಲಿ ಹೆಚ್ಚಾದ ನೀರು ಹೊರ ಹೋಗಲು ಪ್ರತ್ಯೇಕವಾದ ಒಳಚರಂಡಿ ವ್ಯವಸ್ಥೆಯಿದೆ.

ಬಸದಿಯ ಮಧ್ಯದಲ್ಲಿ ಸುಂದರವಾದ ಪಾಣಿ ಪೀಠವಿದೆ. ದೇವರಿಗೆ ಅಭಿಷೇಕ ಮಾಡಿದ ನೀರು ಹೊರ ಹೋಗಲು ಈ ಪಾಣಿ ಪೀಠದಲ್ಲಿ ಸುಂದರವಾದ ಪುಟ್ಟ ಕಾಲುವೆಯೂ ಇದೆ. ಶಾಸನದಲ್ಲಿ ಬರೆಯುವ ದೀಪದ ಆಕೃತಿಯ ಕೆತ್ತನೆಯಿಂದ ಎರಡು ಕಲ್ಲುಗಳನ್ನು ಕಾಣಬಹುದಾಗಿದ್ದು, ಬಸದಿಗೆ ಹೋಗುವ ದಾರಿಯ ಎರಡೂ ಪಕ್ಕ ಕಲ್ಲಿನ ಗೋಡೆಯಿದ್ದು ಸೀತಾನದಿಗೆ ಇಳಿದು ಹೋಗಲು ಕಲ್ಲಿನ ಸೋಪಾನಗಳಿವೆ. ಈ ಬಸದಿಯ ನಿತ್ಯಪೂಜೆಗಾಗಿ ಭೈರವರಸರು ಗದ್ದೆಗಳನ್ನು ದತ್ತಿ ನೀಡಿ ಅದರ ಗುರುತಿಗಾಗಿ ಮುಕ್ಕೊಡೆ ಕಲ್ಲುಗಳನ್ನು ನಡೆಸಿದ್ದು ಆ ಜಾಗವನ್ನು ಈಗಲೂ ಬಸ್ತಿಗದ್ದೆ ಎಂದೆ ಕರೆಯುತ್ತಾರೆ ಎಂದು ತಿಳಿಸಿದ್ದಾರೆ.

ಹೊಂಬುಜದಿಂದ ಕಿಗ್ಗಾದವರೆಗೆ ಒಂದು ಸಾವಿರ ಗ್ರಾಮಗಳನ್ನು ಸುಮಾರು ಒಂದು ಸಾವಿರ ವರ್ಷ ಕಾಲ ಆಳಿದ ಹುಂಚದ ಸಾಂತರರು, ಸಾಸಿರ ಸಾವಿರ ನಾಡಿನ ಅರಸರೆಂದೇ ಪ್ರಸಿದ್ಧರಾದವರು. ಪ್ರಾರಂಭದಲ್ಲಿ ಗಂಗರು, ರಾಷ್ಟ್ರಕೂಟರು, ಚಾಲುಕ್ಯರಿಗೆ ಸಾಮಂತರಾಗಿದ್ದ ಸಾಂತರರು 12ನೇ ಶತಮಾನದಲ್ಲಿ ಹೊಯ್ಸಳರಿಗೆ ಸಾಮಂತರಾಗಿದ್ದರೆ, ನಂತರ ವಿಜಯನಗರದ ಸಾಮಂತರಾದರು. ಏಳನೇ ಶತಮಾನದಿಂದ ಹನ್ನೊಂದನೇ ಶತಮಾನದವರೆಗೆ ಹುಂಚದಿಂದ ಆಳಿದರೆ, ಹನ್ನೆರಡನೇ ಶತಮಾನದ ನಂತರ ಕಳಸ-ಕಾರ್ಕಳದಿಂದ ಆಳಿದರು. ಸಾಂತರರು ತಮ್ಮ ಸಾಮ್ರಾಜ್ಯದ ಗಡಿಯ ಗುರುತಿಗಾಗಿ ಕೆಲವೆಡೆ ಬಸದಿಯನ್ನು ನಿರ್ಮಿಸಿದರು. ಇಂತಹ ಬಸದಿಗಳಲ್ಲಿ ಒಂದು ಬಗ್ಗುಂಜಿಯ ಆದಿ ನಾಥಸ್ವಾಮಿ ಬಸದಿಯೂ ಒಂದಾಗಿದೆ ಎಂದು ವಿವರಣೆ ನೀಡಿದ್ದಾರೆ.

Advertisement

ಸೀತಾನದಿಯ ದಂಡೆಯ ಮೇಲೆ ಸುಂದರ ಪ್ರಕೃತಿಯ ಮಡಿಲಲ್ಲಿ ಭವ್ಯವಾಗಿ ಕಂಗೊಳಿಸಿದ್ದ ಈ ಬಸದಿ ಈಗ ಮಣ್ಣಿನ ರಾಶಿಯಾಗಿ ಬಿದ್ದಿದೆ. ಇದಕ್ಕೆ ಭವ್ಯ ಬಸದಿ ಎಂದು ಕರೆಯಲಾಗುತ್ತಿತ್ತು. ಕ್ರಿ.ಶ. 1544ರಲ್ಲಿ ಅನಿಮಯ್ಯ ಎಂಬುವವರು ಈ ಬಸದಿಗೆ ಲೋಹದ ಆದಿನಾಥ ಸ್ವಾಮಿಯ ಮೂರ್ತಿಯನ್ನು ಮಾಡಿಸಿಕೊಟ್ಟರೆಂಬುದಾಗಿ ಪಟ್ಟಿಕಾ ಶಾಸನವೊಂದು ತಿಳಿಸುತ್ತದೆ. 12 ರಿಂದ 16ನೇ ಶತಮಾನದವರೆಗೆ ಕಳಸ-ಕಾರ್ಕಳ ಭೈರವರಸರು ಮತ್ತು ಬಗ್ಗುಂಜಿ ರಾಣಿ ಕಾಳಲದೇವಿಯ ಆಡಳಿತದಲ್ಲಿ ಜೈನ ಕ್ಷೇತ್ರವಾಗಿದ್ದ ಭವ್ಯ ಬಸದಿ ಹದಿನೆಂಟನೇ ಶತಮಾನದಲ್ಲಿ ಶತ್ರುಗಳ ದಂಡಿನ ದಾಳಿಗೆ ತುತ್ತಾಗಿ ಸಂಪೂರ್ಣ ನೆಲಸಮವಾಯಿತು. ನಿತ್ಯ ಪೂಜಿಸುತ್ತಿದ್ದ ಆದಿನಾಥ ಸ್ವಾಮಿಯ ವಿಗ್ರಹವೂ ಬೇರೆಡೆ ಸ್ಥಳಾಂತರಗೊಂಡಿತು. ಪಂಚ ಬಸದಿಯ ಬೀಡಾಗಿ, ಜೈನರ ಪವಿತ್ರ ತೀರ್ಥಕ್ಷೇತ್ರವಾಗಿದ್ದ ಉತ್ತಮೇಶ್ವರ ಮತ್ತು ಬಗ್ಗುಂಜಿಗಳು ಅವನತಿಯತ್ತ ಸಾಗಿದವು.

ಮಣ್ಣಿನ ಗೋಡೆಯಿಂದ ನಿರ್ಮಿಸಲ್ಪಟ್ಟಿದ್ದ ಈ ಬಸದಿ ದಂಡಿನ ದಾಳಿ ಮತ್ತು ಕಾಲನ ಹೊಡೆತಕ್ಕೆ ಸಿಕ್ಕಿ ಸಂಪೂರ್ಣ ನಾಶವಾಗಿ ಮಣ್ಣಿನಲ್ಲಿ ಹೂತೇ ಹೋಗಿ ಕಣ್ಮರೆಯಾಯಿತು. ಮಣ್ಣಿನ ರಾಶಿಯಾಗಿ ಎರಡುನೂರ ಐವತ್ತು ವರ್ಷಗಳಿಂದ ಜನರ ಮನದಿಂದಲೂ ಮರೆಯಾಯಿತು. ಇತಿಹಾಸವನ್ನು ಹುಡುಕುತ್ತಾ ಹೋದಾಗ ಮಣ್ಣಿನರಾಶಿಯ ಅವಶೇಷವನ್ನು ಅಧ್ಯಯನ ಮಾಡಿದಾಗ ಕಳಸ ಅರಸರ, ಸಾಂತರರ ಗಡಿ ಬಸದಿ ಇರುವುದು ಪತ್ತೆಯಾಯಿತು.

ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಈ ಪ್ರಾಚೀನ ಬಸದಿಯ ಅವಶೇಷಗಳ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಿದರೆ ಕಳಸ ಭೈರವರಸರು ಮತ್ತು ಬಗ್ಗುಂಜಿ ರಾಣಿಯ ಬಗ್ಗೆ ಹೊಸ ವಿಷಯಗಳು ಬೆಳಕಿಗೆ ಬರಲಿವೆ ಎಂದು ನ.ಸುರೇಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next