Advertisement

ಕೊಪ್ಪ ತಾಲೂಕಲ್ಲಿ 654 ಬಿಪಿಎಲ್‌ ಕಾರ್ಡ್‌ ರದ್ದು

04:15 PM Mar 07, 2020 | Naveen |

ಕೊಪ್ಪ: ತಾಲೂಕಿನಲ್ಲಿ ಕಳೆದ ಒಂದು ವರ್ಷದಿಂದ ವಿವಿಧ ಕಾರಣಕ್ಕಾಗಿ 654 ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ ಎಂದು ಆಹಾರ ಇಲಾಖೆ ನಿರೀಕ್ಷಕ ಶ್ರೀಕಾಂತ್‌ ತಿಳಿಸಿದರು.

Advertisement

ಬಾಳಗಡಿಯಲ್ಲಿರುವ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಜಯಂತಿ ನಾಗರಾಜ್‌ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.

ಮೋಟಾರು ವಾಹನ ಹೊಂದಿದವರು, ಹೆಚ್ಚು ಆದಾಯದವರು ಸೇರಿದಂತೆ ವಿವಿಧ ಕಾರಣಗಳಿಂದ ಕೆಲವು ಬಿಪಿಎಲ್‌ ಕಾರ್ಡ್ ಗಳನ್ನು ಅನರ್ಹಗೊಳಿಸಲಾಗಿದೆ. ಇನ್ನೂ ಕೆಲವರು ಇಲಾಖೆಗೆ ಬಂದು ಬಿಪಿಎಲ್‌ ಕಾರ್ಡ್‌ ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ಹಾಗಾಗಿ, ತಾಲೂಕಿನಲ್ಲಿ ಒಟ್ಟು 654 ಜನರ ಬಿಪಿಎಲ್‌ ಕಾರ್ಡ್‌ಗಳನ್ನು ಅನರ್ಹಗೊಳಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಮೇಗುಂದ ಹೋಬಳಿಯ ಕಲ್ಲುಗುಡ್ಡೆ ಮತ್ತು ಗಣಪತಿಕಟ್ಟೆಯಲ್ಲಿರುವ ಅಂಗನವಾಡಿಗೆ ಅನುಮತಿ ಪಡೆಯದೇ ಎರಡು ದಿನ ರಜೆ ನೀಡಲಾಗಿತ್ತು. ಈ ಸಂಬಂಧ ಅಂಗನವಾಡಿ ಸಹಾಯಕಿಯ ಮೇಲೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ತಾಪಂ ಉಪಾಧ್ಯಕ್ಷೆ ಲಲಿತಾ ಸಿಡಿಪಿಒ ಮೋಹಿನಿ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪತ್ರಿಕ್ರಿಯಿಸಿದ ಸಿಡಿಪಿಒ, ಜಾತ್ರೆಯ ನಿಮಿತ್ತ ರಜೆ ನೀಡಿದ್ದಾರೆ ಹಾಗೂ ಯಾವುದೇ ಅನುಮತಿ ಪಡೆಯದೆ ಅಂಗನವಾಡಿ ತೆರೆದಿಲ್ಲ. ಈ ಬಗ್ಗೆ ಉನ್ನತ ಅಧಿಕಾರಿಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.

ತಾಲೂಕು ವೈದ್ಯಾಧಿಕಾರಿ ಮಹೇಂದ್ರ ಕಿರಿಠಿ ಮಾತನಾಡಿ, ಜಯಪುರ ಆಸ್ಪತ್ರೆಯ ಆ್ಯಂಬುಲೆನ್ಸ್‌ ಚಾಲಕ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಹಿಂದೆಯೂ ಕೆಡಿಪಿ ಸಭೆಯಲ್ಲಿ ಚರ್ಚಿಸಲಾಗಿತ್ತು. ಬಸರೀಕಟ್ಟೆಯಲ್ಲಿಯೇ ಆ್ಯಂಬುಲೆನ್ಸ್‌ ಇರಿಸಿಕೊಂಡು ದಿನ ಕಳೆಯುತ್ತಾನೆ. ಕೇವಲ ಹಾಜರಾತಿ ನೀಡಲು ಜಯಪುರಕ್ಕೆ ಬರುತ್ತಾನೆ ಎಂದು ದೂರಿದರು. ಆಗ ತಾಪಂ ಅಧ್ಯಕ್ಷೆ ಜಯಂತಿ ನಾಗರಾಜ್‌ ಮಾತನಾಡಿ, ಆತನ ಸಂಬಳ ತಡೆಹಿಡಿಯಿರಿ. ಆಗ ಬುದ್ದಿ ಕಲಿಯುತ್ತಾನೆ ಎಂದು ವೈದ್ಯಾಧಿಕಾರಿಗೆ ಸೂಚಿಸಿದರು.

Advertisement

ಹರಿಹರಪುರ, ಅಸಗೋಡು, ಶಾನುವಳ್ಳಿ ಗ್ರಾಪಂಗಳ ಆಶ್ರಯ ನಿವೇಶನಕ್ಕೆ ಗುರುತಿಸಿದ್ದ ಜಾಗಗಳು ಸೆಕ್ಷನ್‌ 4ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ಸಂಬಂಧ ಅರಣ್ಯ ಇಲಾಖೆ, ಪಿಡಿಒ, ಗ್ರಾಮ ಲೆಕ್ಕಾ ಧಿಕಾರಿಗೆ ಪತ್ರ ಬರೆದು ಸರ್ವೆ ನಡೆಸುವಂತೆ ಶೀಘ್ರದಲ್ಲಿ ಸೂಚಿಸಲಾಗುತ್ತದೆ ಎಂದು ಶಿರಸ್ತೇದಾರ್‌ ಶೇಷಮೂರ್ತಿ ಮಾಹಿತಿ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಸುಧಾಕರ್‌ 94ಸಿ ಅಡಿ ಬ್ಯಾಂಕ್‌ಗೆ ಹಣ ಕಟ್ಟಿದವರಿಗೆ ಯಾಕೆ ಇನ್ನೂ ಹಕ್ಕುಪತ್ರ ವಿತರಣೆ ಮಾಡಿಲ್ಲ ಎಂದು ಶಿರಸ್ತೇದಾರ್‌ರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿರಸ್ತೇದಾರ್‌, ಇನ್ನೂ 110 ಹಕ್ಕುಪತ್ರ ವಿತರಿಸಲು ಬಾಕಿಯಿದೆ. ಅದು ಸೆಕ್ಷನ್‌ 4 ಮತ್ತು ಗೋಮಾಳ ಪ್ರದೇಶದಲ್ಲಿ ಬಂದರೆ ವಿತರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಡಿಪಿ ಸಭೆಗೆ ಪ್ರತಿ ಬಾರಿಯೂ ಅರಣ್ಯ ಇಲಾಖೆಯಿಂದ ಹಿರಿಯ ಅಧಿಕಾರಿಗಳು
ಬರುವುದಿಲ್ಲ. ಅಧಿಕಾರಿಗಳನ್ನು ಸಭೆಗೆ ಕಳುಹಿಸಿ ಅಸಮರ್ಪಕ ಮಾಹಿತಿ ನೀಡುತ್ತಾರೆ. ಅರಣ್ಯ ಇಲಾಖೆಯ ಈ ನಡೆ ಸರಿಯಲ್ಲ ಎಂದು ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಸದಸ್ಯೆ ದಿವ್ಯಾ ದಿನೇಶ್‌, ಬಿಜೆಪಿ ತಾಲೂಕು ಅಧ್ಯಕ್ಷ ಅದ್ದಡ ಸತೀಶ್‌, ದಿನೇಶ್‌ ಹೊಸೂರು, ಪೂರ್ಣಚಂದ್ರ, ಎಚ್‌.ಆರ್‌.ಜಗದೀಶ್‌ ಮುಂತಾದವರಿದ್ದರು. ಕೆಡಿಪಿ ಸಭೆಯಲ್ಲಿ ಇಒ ನವೀನ್‌ ಕುಮಾರ್‌, ತಾಪಂ ಸದಸ್ಯರಾದ ಪ್ರವೀಣ್‌ ಕುಮಾರ್‌, ಮಧುರ ಶಾಂತಪ್ಪ, ಕೃಷ್ಣಯ್ಯ ಶೆಟ್ಟಿ, ಮಂಜುಳಾ ಮಂಜುನಾಥ್‌ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next