Advertisement

ಮತ್ತೆ ಹಸಿರು ವಲಯದತ್ತ ಕೊಪ್ಪಳ?

12:13 PM Jun 02, 2020 | Suhan S |

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಮೂವರು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲಾ ಕೋವಿಡ್‌-19 ಆಸ್ಪತ್ರೆಯಲ್ಲಿ ಓರ್ವ ಸೋಂಕಿತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಾಗಾಗಿ ಜಿಲ್ಲೆಯು ಮತ್ತೆ ಹಸಿರು ವಲಯದತ್ತ ಮುಖ ಮಾಡಲಾರಂಭಿಸಿದೆ. ಆದರೂ ಜಿಲ್ಲಾಡಳಿತ ಪ್ರಾಥಮಿಕ ಸಂಪರ್ಕಿತರ ಮೇಲೆ ಹೆಚ್ಚಿನ ನಿಗಾ ಇರಿಸಿ ಕ್ವಾರೆಂಟೈನ್‌ನಲ್ಲಿ ಇರುವಂತೆ ಸೂಚಿಸಿದೆ.

Advertisement

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೋವಿಡ್‌-19  ಆರ್ಭಟ ಜೋರಾಗಿದ್ದರೂ ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾಡಳಿತ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಸೋಂಕು ಕಾಣಿಸಿಕೊಂಡಿರಲಿಲ್ಲ. ಹೊರ ಜಿಲ್ಲೆಯಿಂದ ಆಗಮಿಸಿದ ಜನರನ್ನು ಗುರುತು ಮಾಡಿ ಅವರನ್ನು ಕ್ವಾರೆಂಟೈನ್‌ನಲ್ಲಿ ಇರಿಸುವುದು, ಅಗತ್ಯವಿದ್ದಲ್ಲಿ ಗಂಟಲು ದ್ರವ ಪಡೆದು ಪ್ರಯೋಗಾಲಯಕ್ಕೆ ರವಾನೆ ಮಾಡಿ ಅವರ ವರದಿಯನ್ನೂ ಪಡೆಯುವ ಕಾರ್ಯದಲ್ಲಿ ತೊಡಗಿತ್ತು. ಮೇ 15ರ ವರೆಗೂ ಜಿಲ್ಲೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿರಲಿಲ್ಲ. ರಾಜ್ಯದ ಬಹುಪಾಲು ಜಿಲ್ಲೆಗಳಲ್ಲಿ ಸೋಂಕು ಬಂದಿದ್ದರೂ, ಕೊಪ್ಪಳ ಹಸಿರು ವಲಯದಲ್ಲಿಯೇ ಎಲ್ಲರ ಗಮನ ಸೆಳೆದಿತ್ತು. ಜಿಲ್ಲೆಗೆ ಗುಳೆ ಹೋಗಿ ಬಂದವರ, ಪ್ರವಾಸ ತೆರಳಿ ಬಂದವರ ಸೇರಿ 36 ಸಾವಿರಕ್ಕೂ ಹೆಚ್ಚು ಜನರು ಜಿಲ್ಲೆಗೆ ಆಗಮಿಸಿದ್ದರು. ಡಿಸಿ ಸುನೀಲ್‌ ಕುಮಾರ, ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆಯ ಕಾರ್ಯ ವೈಖರಿಯಿಂದಲೇ ಜಿಲ್ಲೆಯ ಜನರು ನೆಮ್ಮದಿಯಿಂದ ಜೀವನ ನಡೆಸುವಂತಾಗಿತ್ತು. ಆದರೆ ಮೇ 15ರಂದು ಮಹಾರಾಷ್ಟ್ರ ಮತ್ತು ಚೆನ್ನೈನಿಂದ ಆಗಮಿಸಿದ ಮೂವರಲ್ಲಿ ಕೋವಿಡ್‌-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಗ ಜಿಲ್ಲೆಯು ಹಸಿರು ವಲಯದ ಪಟ್ಟಿಯನ್ನು ಕಳೆದುಕೊಳ್ಳುವಂತಾಯಿತು.

ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಕೋವಿಡ್‌-19 ಸೋಂಕು ನೋಡಿದರೆ ಎರಡು-ಮೂರು ಅಂಕಿ ದಾಟಿವೆ. ಆದರೆ ಕೊಪ್ಪಳ ಈ ವರೆಗೂ ಒಂದಂಕಿಯಲ್ಲಿರುವುದು ನೆಮ್ಮದಿಯ ವಿಚಾರ. ಜಿಲ್ಲೆಯಲ್ಲಿ ಮೇ 15ರಿಂದ ಮೇ 31ರ ಅವ ಧಿಯಲ್ಲಿ ನಾಲ್ವರಿಗೆ ಸೋಂಕು ಕಾಣಿಸಿಕೊಂಡಿದ್ದರಿಂದ ಅವರಿಗೆ ಕೋವಿಡ್‌-19 ಆಸ್ಪತ್ರೆಯಲ್ಲಿ 15 ದಿನಗಳ ಕಾಲ ಚಿಕಿತ್ಸೆ ನೀಡಲಾರಂಭಿಸಿತು. ಇದರಲ್ಲಿ ಮೂವರು ಸೋಂಕಿನಿಂದ ಗುಣಮುಖರಾಗಿದ್ದು, ಅವರ 2ನೇ ವರದಿ ನೆಗಟಿವ್‌ ಬಂದಿದ್ದರಿಂದ ಅವರನ್ನ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅಂದರೆ ಜಿಲ್ಲೆಯಲ್ಲಿ ಒಬ್ಬ ಸೋಂಕಿತನು ಮಾತ್ರ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದರಿಂದಾಗಿ ಜಿಲ್ಲೆಯು ಮತ್ತೆ ಹಸಿರು ವಲಯದತ್ತ ಮುಖ ಮಾಡುತ್ತಿದೆಯೇ ಎನ್ನುವ ಮಾತು ಜನರ ಮನದಲ್ಲಿ ಮೂಡಲಾರಂಭಿಸಿವೆ.  ಇದೊಂದು ನೆಮ್ಮದಿಯ ವಿಚಾರವಾಗಿದ್ದು, ಜನರು ಜಿಲ್ಲಾ ಮಟ್ಟದ ಅಧಿ ಕಾರಿಗಳ ಕಾರ್ಯ ವೈಖರಿ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ.

ವರದಿ ನಿರೀಕ್ಷೆಯಲ್ಲಿ ಜಿಲ್ಲಾಡಳಿತ : ಇನ್ನೂ ನಾಲ್ವರು ಸೋಂಕಿತರಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಬಹುಪಾಲು ಜನರ ಗಂಟಲು ದ್ರವ ಪಡೆದು ಪ್ರಯೋಗಾಲಯಕ್ಕೆ ರವಾನಿಸಿದ್ದು, ಎಲ್ಲರ ವರದಿಯೂ ನೆಗಟಿವ್‌ ಬಂದಿದೆ. ಆದರೆ ಈಚೆಗೆ ಕೊಪ್ಪಳದ ಬಿ.ಟಿ. ಪಾಟೀಲ ನಗರದಿಂದ ಬೆಂಗಳೂರಿಗೆ ಪ್ರಯಾಣ ಮಾಡಿದ ಪಿ-3009 ಎಂಬ ವ್ಯಕ್ತಿಗೆ ನಗರದಲ್ಲಿ 14 ಜನರು ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ. 13 ಜನರು ದ್ವಿತೀಯ ಸಂಪರ್ಕಕ್ಕೆ ಬಂದಿದ್ದಾರೆ. ಅವರ ಗಂಟಲು ದ್ರವ ಪಡೆದು ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದು, ವರದಿ ಬರುವುದು ಬಾಕಿಯಿದೆ. ಇವರ ವರದಿಗೆ ಜಿಲ್ಲಾಡಳಿತ ಸ್ವಲ್ಪ ಒತ್ತಡ ಮಾಡಿಕೊಂಡಿದೆ. ಒಂದು ವೇಳೆ ಇವರೆಲ್ಲರ ವರದಿಯು ನೆಗಟಿವ್‌ ಎಂದು ಬಂದರೆ ಕೊಪ್ಪಳವು ಮತ್ತೆ ಹಸಿರು ಪಟ್ಟಿಯತ್ತ ಮುಖ ಮಾಡಲಿದೆ.

 

Advertisement

– ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next