Advertisement
ಅವಿರತ ಪರಿಶ್ರಮಶಾಲೆಯ ಉಳಿವಿಗಾಗಿ ಶಿಕ್ಷಕರು ರಜೆ ಮರೆತು ಸ್ಥಳೀಯರೊಡಗೂಡಿ ಮನೆ ಮನೆ ಭೇಟಿ ನೀಡಿ ಮಕ್ಕಳ ದಾಖಲಾತಿ ಹೆಚ್ಚಿಸುವಲ್ಲಿ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಇದರ ಫಲವಾಗಿ 2018-19ರ ಸಾಲಿನಲ್ಲಿದ್ದ 46 ಮಕ್ಕಳ ಸಂಖ್ಯೆ ಈ ಬಾರಿ 1ರಿಂದ 8ನೇ ತರಗತಿವರೆಗೆ 70ಕ್ಕೆ ಏರಿಕೆಯಾಗಿದೆ. ಖಾಸಗಿ ಶಾಲೆಗೆ ದಾಖಲಿಸುವ ಇಂಗಿತ ಹೊಂದಿದ್ದ ಹೆಚ್ಚಿನ ಹೆತ್ತವರು ಸರಕಾರಿ ಶಾಲೆ ಉಳಿಸುವ ದೃಷ್ಟಿಯಿಂದ ಮನಸ್ಸು ಬದಲಿಸಿದ್ದಾರೆ. ಇದರಿಂದ ಈ ಬಾರಿ ಒಂದನೇ ತರಗತಿಗೆ 12 ಮಕ್ಕಳು ದಾಖಲಾಗಿದ್ದಾರೆ.
ಇಲ್ಲಿನ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದಲ್ಲಿ 20ಕ್ಕೂ ಹೆಚ್ಚು ಪ್ರತಿಭಾ ಪುರಸ್ಕಾರ ಪಡೆದು ಖಾಸಗಿ ಶಿಕ್ಷಣಕ್ಕೆ ಸೆಡ್ಡು ಹೊಡೆಯುವ ಸಾಧನೆ ತೋರಿದ್ದಾರೆ. 8ನೇ ತರಗತಿ ವಿದ್ಯಾರ್ಥಿನಿ ಸುನಿತಾ ಎನ್‌ಎಂಎಂಎಸ್ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ 4 ವರ್ಷಗಳ ಅವಧಿಗೆ ಮಾಸಿಕ 500ರಂತೆ ವಿದ್ಯಾರ್ಥಿವೇತನ ಪಡೆಯುತ್ತಿದ್ದಾಳೆ. ಕಾರ್ತಿಕ್ ದೇವಾಡಿಗ ಸ್ವಯಂಚಾಲಿತ ದಾರಿದೀಪ ಅಳವಡಿಸುವ ವಿಧಾನದಲ್ಲಿ ಜಿಲ್ಲಾಮಟ್ಟದ ಇನ್ಸ್‌ಪಯರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲದೆಯೇ ಕ್ರೀಡಾ ಚಟುವಟಿಕೆಯಲ್ಲಿ ಮಕ್ಕಳು ಸಾಧನೆ ತೊರುತ್ತಿರುವುದು ಕಲಿಕೆಗೆ ಆಸಕ್ತಿ ಮುಖ್ಯ ಎಂಬುದನ್ನು ರುಜುವಾತುಪಡಿಸಿದ್ದಾರೆ.
Related Articles
Advertisement
ಶಾಲೆಗೆ ಅನುದಾನ ಮೀಸಲುಶಾಸಕ ಹರೀಶ್ ಪೂಂಜ ಅವರ ಅನುದಾನದಲ್ಲಿ ಶಾಲೆ ಮೂಲ ಸೌಕರ್ಯಕ್ಕೆ 4 ಲಕ್ಷ ರೂ. ನೀಡಲಾಗಿದೆ. ಅದರಂತೆ ಕಟ್ಟಡ ದುರಸ್ತಿ, ಶಾಲೆಗೆ ಬಣ್ಣ ಬಳಿಯುವ ಕೆಲಸ ಸಹಿತ ನೆಲ, ಮಹಡಿ ದುರಸ್ತಿ ಕಾರ್ಯ ನಡೆಯುತ್ತಿದೆ. ಸಂಸದರ ನಿಧಿಯಿಂದ ಗ್ರಾಮದ ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂ. ಅನುದಾನ ಮೀಸಲಿರಿಸುವ ಭರವಸೆ ನೀಡಲಾಗಿದೆ. ಈಗಾಗಲೇ ಶಾಲೆಗೆ ಆವರಣ ಗೋಡೆ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಜಿ.ಪಂ. ಸಿಇಒ ಡಾ| ಸೆಲ್ವಮಣಿ ಆರ್. ಗ್ರಾ.ಪಂ. ಅನುದಾನದಿಂದ 5 ಲಕ್ಷ ರೂ. ಮೀಸಲಿರಿಸಿದ್ದಾರೆ.
ನರೇಗಾ ಯೋಜನೆಯಲ್ಲಿ ಶಾಲೆಗೆ ತೆರೆದ ಬಾವಿ ನಿರ್ಮಿಸಲು 3 ಲಕ್ಷ ರೂ. ಮೀಸಲಿರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ವಿಧಾನ ಪರಿಷತ್ ಸದಸ್ಯರ ಅನುದಾನದ ಮೂಲಕ 5 ಲಕ್ಷ ರೂ. ಅನುದಾನ ಮೀಸಲಿರಿಸುವುದಾಗಿಯೂ ಭರವಸೆ ನೀಡಿದ್ದಾರೆ. ಸರ್ವರ ಸಹಕಾರ
ಶಾಲೆ ಉಳಿವಿಗೆ ಶಿಕ್ಷಕರು, ಊರವರು ಹಾಗೂ ಹೆತ್ತವರು ಸಹಕಾರ ತೊರಿದ್ದಾರೆ. ನಮ್ಮ ಶಾಲೆ ಅಭಿಮಾನದಿಂದ ಶಾಲೆಗೆ ಮಕ್ಕಳನ್ನು ದಾಖಲಿಸಿದ್ದಾರೆ. ಮಕ್ಕಳ ಅನುಕೂಲಕ್ಕಾಗಿ ರಾಮಚಂದ್ರ ಭಟ್ ಹಾಗೂ ಸಂತೋಷ್ ವಾಹನದ ವ್ಯವಸ್ಥೆಯನ್ನೂ ಕಲ್ಪಿಸಿದ್ದಾರೆ.
– ಪ್ರಭಾಕರ್ ದೇವಾಡಿಗ, ಎಸ್‌ಡಿ.ಎಂ.ಸಿ. ಅಧ್ಯಕ್ಷರು -ಚೈತ್ರೇಶ್ ಇಳಂತಿಲ