Advertisement
ನೋಡಿ, ಇವರು ನಮಗೆ ಸಿಗುವುದೇ ಅಪರೂಪ. ಒಂದು ವಾರ ಬೆಂಗಳೂರಿನಲ್ಲಿಯೇ ಇದ್ದವರು ನಿನ್ನೆ ರಾತ್ರಿಯಷ್ಟೇ ಬಂದರು. ಇವರು ಮನೆಯಲ್ಲಿದ್ದಾರೆಂದರೆ ನನಗೆ, ನಮ್ಮ ಮಕ್ಕಳಿಗೆ ಖುಷಿಯೋ ಖುಷಿ. ಇವತ್ತು ಬೆಳಗ್ಗೆ ದೇವಸ್ಥಾನಕ್ಕೆ ಹೋಗಿಬಂದೆವು. ಮನೆಯಿಂದ ಹೊರಗೆ ಹೋದರೆ ಕಣ್ಣಿಗೆ ಕಂಡವರೆಲ್ಲ ಸ್ನೇಹಿತರೇ! ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುವವರೇ. “ನೋಡು, ಇವನು ನನ್ನ ಕ್ಲಾಸ್‌ಮೇಟ್ ಇಸ್ತ್ರಿ ಅಂಗಡಿ ಇಟ್ಟಿದ್ದಾನೆ, ಇವರು ನಮ್ಮ ದೋಸ್ತ್ ಪೂಜೆಯ ಭಟ್ಟರು, ಇವರು ನನ್ನ ಫ್ರೆಂಡ್- ಈಗ ದೊಡ್ಡ ಬಿಸಿನೆಸ್‌ಮನ್’ ಎಂದೆಲ್ಲ ನನಗೆ ಪರಿಚಯ ಮಾಡಿಸುತ್ತ, ಗೆಳೆಯರ ಹೆಗಲ ಮೇಲೆ ಕೈಹಾಕಿ, “ಮಕ್ಕಳು ಎಂತ ಮಾಡ್ತಾರನಾ?’ ಎಂದು ವಿಚಾರಿಸುತ್ತ, ಶಾಲೆಯ ಟೀಚರ್‌ಗೊ, ಕೂಲಿಕಲಸಕ್ಕ ಮಹಿಳೆಗೋ ನಮಸ್ಕರಿಸಿ, “ಹೇಗಿದ್ದೀರಮ್ಮ’ ಎಂದು ಕುಶಲ ಕೇಳುತ್ತ ಸಮಯ ಹೋದದ್ದೇ ಗೊತ್ತಾಗುವುದಿಲ್ಲ. ನಾನು ದೂರದಲ್ಲಿ ನಿಂತು ಇವರ ಮಾತುಕತೆ ಮುಗಿಯುವವರೆಗೆ ಕಾಯುತ್ತೇನೆ.
Related Articles
Advertisement
ಈಗ ಫೋಟೊಗ್ರಫಿ ಇಲ್ಲ, ಸ್ವಾತಿ ಸ್ಟುಡಿಯೋ ಕೂಡ ಇಲ್ಲ. ಆದರೆ, ಯಾವುದು ನಮ್ಮ ಜೀವನಾಧಾರವಾಗಿ, ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಹೆಸರು ಕೊಡಲು ಕಾರಣವಾಯಿತೊ ಅದೇ ಸ್ಟುಡಿಯೋದ ಹೆಸರನ್ನು ನಮ್ಮ ಪ್ರಥಮ ಪುತ್ರಿಗೆ ಇಟ್ಟಿದ್ದೇವೆ. ಅಂದ ಹಾಗೆ, ನಮಗೆ ಮೂವರು ಮಕ್ಕಳು. ಮೂವರೂ ಹುಟ್ಟಿದ್ದು ನಮ್ಮ ಹಳೆಯ ಮನೆಯಲ್ಲಿಯೇ. ಆ ಮನೆ ಈಗಲೂ ಇದೆ. ಅಲ್ಲಿ ಅತ್ತೆಯವರಿದ್ದಾರೆ. ಈ ಮನೆಗೆ ಬಂದು ಕೆಲವೇ ವರ್ಷಗಳಾದವು. ಈ ಮನೆಗೆ ಇನ್ನೂ ಹೆಸರಿಟ್ಟಿಲ್ಲ !
ಮದುವೆಯಾದ ಹೊಸತರಲ್ಲಿ ಇವರ ಮನೆಯನ್ನು ಹೊಕ್ಕಾಗ “ಅನ್ಯ’ಳೆಂಬ ಭಾವನೆ ಎಂದಿಗೂ ಕಾಡಿರಲಿಲ್ಲ. ನನ್ನ ತಾಯಿಮನೆಯವರಂತೆಯೇ ಸರಳ ಜೀವನ ಇವರದು. ಆಗಲೇ ಇವರದು ಮನೆಕಡೆ ಗಮನ ಕಡಿಮೆ. ಫೊಟೊಗ್ರಾಫರ್ ಆಗಿರುವಾಗಲೇ ಗ್ರಾಮ ಪಂಚಾಯತ್ ಚುನಾವಣೆಗೆ ನಿಂತು ಗೆದ್ದರು. ಉಪಾಧ್ಯಕ್ಷರಾದರು. ಮುಂದೆ ತಾಲೂಕು ಪಂಚಾತ್, ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿಯೂ ಗೆದ್ದರು. ಆವರೆಗೆ ಸ್ವಲ್ಪವಾದರೂ ಮನೆಯವರಿಗೆ ಸಿಗುತ್ತಿದ್ದವರು, ಆಮೇಲಾಮೇಲೆ ಹೊರಗಡೆಯ ಓಡಾಟವೇ ಅಧಿಕವಾಯಿತು. ಬ್ರಹ್ಮಾವರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ನಿಂತರು. ಮೊದಲ ಬಾರಿಗೆ ಸೋತರು. ಆ ಸೋಲನ್ನು ನಾವೆಲ್ಲ ಸಹಜವಾಗಿಯೇ ಸ್ವೀಕರಿಸಿದ್ದೆವು. ಎರಡನೆಯ ಬಾರಿ ಮತ್ತೆ ಚುನಾವಣೆಗೆ ನಿಂತರು. ಸೋಲು ಅನುಭವಿಸಿದರು. ಆಗ ಮಾತ್ರ ಮನೆಗೆ ಬಂದವರು ಬಹಳ ಖನ್ನರಾಗಿಬಿಟ್ಟಿದ್ದರು. ಆವರೆಗೂ ಅವರ ರಾಜಕೀಯ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸದ ನಾನು ಆಗ ಮಾತ್ರ ಮಾತನಾಡಿದೆ. ಹಾಗೆಂದು, ಇನ್ನು ಈ ರಾಜಕೀಯ- ಎಲ್ಲ ಬೇಡ, ಸುಮ್ಮನೆ ಮನೆಯಲ್ಲಿಯೇ ಇರಿ ಎಂದೇನೂ ಹೇಳಲಿಲ್ಲ. “ಮುಂದೆ ಗೆಲುವಾದೀತು. ಸೋಲಿನ ಅನುಭವದ ಬಳಿಕ ಸಿಗುವ ಗೆಲುವು ಹೆಚ್ಚು ಅರ್ಥಪೂರ್ಣವಾಗಿರುತ್ತದೆ’ ಎಂದು ಹೇಳಿದೆ.ನನ್ನ ಮಾತು ನಿಜವೇ ಆಯಿತು!
ಇವರು ಎಂಎಲ್‌ಸಿಯಾದಾಗ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾಗಿದ್ದೆ. ಆದರೆ, ಮೊದಲ ಬಾರಿ ಮಂತ್ರಿಯಾದಾಗ ಹೋಗಲಾಗಲಿಲ್ಲ. ಯಾಕೆಂದು ಕೇಳುತ್ತೀರಾ, ಇವರು ಮಂತ್ರಿಯಾಗುತ್ತಾರೆ ಅಂತ ಇವರಿಗೇ ಗೊತ್ತಿರಲಿಲ್ಲ, ಇನ್ನು ನಮಗೆ ಗೊತ್ತಾಗುವುದು ಹೇಗೆ? ಬೆಳಿಗ್ಗೆ ವಾರ್ತೆ ಕೇಳುವಾಗ ಆನಂದಾಶ್ಚರ್ಯ. ಆಮೇಲೆ ಇತ್ತೀಚೆಗೆ, ಎರಡನೆಯ ಬಾರಿ ಇವರು ಮಂತ್ರಿಯಾದಾಗಲೂ ಇವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಹಾಜರಾಗಲು ಏನೋ ಕಾರಣದಿಂದ ಸಾಧ್ಯವಾಗಲಿಲ್ಲ. ದೂರದ ಊರುಗಳಿಗೆ ಹೋದಾಗಲೆಲ್ಲ ಇವರಿಗೆ ಊಟ-ತಿಂಡಿಯ ಕಾಳಜಿಯಿಲ್ಲ. ಊರಿನಲ್ಲಿದ್ದಾಗ ಮನೆಗೆ ಮಧ್ಯರಾತ್ರಿ ಬಂದರೂ “ಶಾಂತಾ, ಊಟ ಹಾಕು’ ಎನ್ನುತ್ತಾರೆ. ನನ್ನ ಕೈಯಡುಗೆ ಉಣ್ಣದೆ ಇವರಿಗೆ ಸಮಾಧಾನವಿಲ್ಲ. ಅದೂ ನನ್ನ ಮೀನುಸಾರು ಬಹಳ ಇಷ್ಟ. ಹೊರಗೆ ಹೋದಾಗಲೆಲ್ಲ ಇವರಾಗಿಯೇ ನನಗೆ ಫೋನ್ ಮಾಡುವ ವಾಡಿಕೆ ಇಲ್ಲ. ನಾನೇ ದಿನಕ್ಕೆರಡು ಬಾರಿ ಫೋನ್ ಮಾಡಿ, “ಚಹಾ ಕುಡಿದಿರಾ, ತಿಂಡಿ ತಿಂದಿರಾ, ಮಧ್ಯಾಹ್ನ ಸರಿಯಾದ ಹೊತ್ತಿಗೆ ಊಟ ಮಾಡಿ, ಸ್ವಲ್ಪ ರೆಸ್ಟ್ ತಗೊಳ್ಳಿ’ ಎಂದೆಲ್ಲ ಹೇಳುತ್ತಿರುತ್ತೇನೆ. ಮಕ್ಕಳೂ ಇವರಿಗೆ ಫೋನ್ ಮಾಡುತ್ತಾರೆ. ಬಿಡುವಿನಲ್ಲಿದ್ದರೆ ರಿಸೀವ್ ಮಾಡುತ್ತಾರೆ ಅಥವಾ ಬಿಡುವಾದಾಗ ಮಿಸ್ಡ್ ಕಾಲ್ ನೋಡಿ ಅವರೇ ಮರಳಿ ಮಾತನಾಡುತ್ತಾರೆ. ಇವರ ಒಡನಾಟಗಳೆಲ್ಲ ದೊಡ್ಡವರ ಜೊತೆಗೆ. ನಾನು ವಿಧಾನಸಭೆಗೆ ಹೋಗಿಲ್ಲವೆಂದಲ್ಲ, ಆದರೆ, ದೊಡ್ಡವರೊಂದಿಗೆ ಮಾತನಾಡುವುದೆಂದರೆ ಸಂಕೋಚ. ಒಮ್ಮೆ ಡಿ. ಎಚ್. ಶಂಕರಮೂರ್ತಿ ಪತ್ನಿ ಸಮೇತರಾಗಿ ನಮ್ಮ ಈ ಮನೆಗೆ ಬಂದಿದ್ದರು. ಅವರನ್ನು ಉಪಾಹಾರ ಕೊಟ್ಟು ಉಪಚರಿಸಿದೆ. ಅತಿಥಿ ಸತ್ಕಾರ ನನಗೆ ತುಂಬ ಪ್ರಿಯವೇ. ಆದರೆ, ದೊಡ್ಡವರೆಲ್ಲ ಬಂದರೆ ಅವರನ್ನು ಸತ್ಕರಿಸುವಾಗ ಕೊಂಚ ಗಲಿಬಿಲಿಯಾಗುತ್ತದೆ. ಬೆಂಗಳೂರಿನಲ್ಲಿ ಇವರಿಗೆ ಸರ್ಕಾರ ಕೊಟ್ಟ ಮನೆ ಇದೆ; ನಾನೂ ಹೋಗಿ ಅಲ್ಲಿರಬಹುದು. ಆದರೆ, ಇವರಿಗೂ ಹಳ್ಳಿಯೇ ಇಷ್ಟ. ಊರಿಗೆ ಬರಲು ತವಕಿಸುತ್ತಾರೆ. ನಾನೂ ಅಷ್ಟೇ. ಈ ಊರು, ಈ ಜನ, ಈ ಮನೆಯ ಪರಿಸರ- ಇವೆಲ್ಲದರ ಜೊತೆಗೆ ಅದೇನೋ ಭಾವನಾತ್ಮಕ ಸಂಬಂಧ ನಮಗೆ ಬೆಸೆದುಬಿಟ್ಟಿದೆ. ಆಗಲೂ ಈಗಲೂ ಮನೆಯ ಜವಾಬ್ದಾರಿ ನನ್ನದೇ. ಹಾಗಾಗಿ, ಹೊತ್ತು ಹೋದದ್ದೇ ಗೊತ್ತಾಗುವುದಿಲ್ಲ. ಇಡೀ ದಿನ ಏನಾದರೊಂದು ಕೆಲಸ ಇದ್ದೇ ಇರುತ್ತದೆ. ಬಿಡುವಾದಾಗ ಟಿವಿ ನೋಡುತ್ತೇನೆ. ಇವರಿಗೆ ಮಾತ್ರ ಕಾಲಕ್ಷೇಪದ ಸಮಸ್ಯೆಯೇ ಇಲ್ಲ. ಪುಸ್ತಕ ಇವರ ಪ್ರಿಯ ಸಂಗಾತಿ. ಮನೆಯಲ್ಲಿದ್ದಾಗಲೆಲ್ಲ ಏನಾದರೂ ಓದುತ್ತ, ಬರೆಯುತ್ತ ಇರುತ್ತಾರೆ. ನಾನಾಗಲಿ, ಮಕ್ಕಳಾಗಲಿ ಅವರ ಹೆಸರನ್ನಾಗಲಿ, ಅಧಿಕಾರವನ್ನಾಗಲಿ ಬಳಸುವುದಿಲ್ಲ , ಬಳಸುವುದು ಇವರಿಗೆ ಇಷ್ಟವೂ ಇಲ್ಲ. ನಾನು ಹೆಚ್ಚು ಓದಿದವಳಲ್ಲ. ಮದುವೆಯಾಗುವುದಕ್ಕಿಂತ ಮೊದಲು ಸಣ್ಣ ಕೂಲಿಕೆಲಸಕ್ಕೆ ಹೋಗುತ್ತಿದ್ದೆ. ನನ್ನ ಕೈ ಹಿಡಿಯುವವರು ರಾಜ್ಯದ ಸಚಿವರಾಗುತ್ತಾರೆ ಎಂಬ ಕನಸನ್ನೂ ನಾನು ಅಂದು ಕಂಡವಳಲ್ಲ. ಈ ಎಲ್ಲ ಸೌಭಾಗ್ಯವನ್ನು ದೇವರ ಅನುಗ್ರಹವೆಂದು ಭಾವಿಸಿ ವಿನಯದಿಂದಲೇ ಸ್ವೀಕರಿಸಿದ್ದೇನೆ. ಇವರು ಮನೆಯಲ್ಲಿ ಇರಲಿ, ಇಲ್ಲದಿರಲಿ “ಮಿನಿಸ್ಟರ್ ಇದ್ದಾರಾ?’ ಎಂದು ವಿಚಾರಿಸುತ್ತ ಒಬ್ಬರಲ್ಲ ಒಬ್ಬರು ಬರುತ್ತಲೇ ಇರುತ್ತಾರೆ. “ನೀವು ಮಿನಿಸ್ಟರ್ ಹೆಂಡತಿಯಾ?’ ಎಂದು ಅಭಿಮಾನದಿಂದ ನನ್ನನ್ನು ನೋಡುತ್ತಾರೆ. ಬಹುತೇಕ ಮಂದಿ ಬಡವರು. ಮಿನಿಸ್ಟರ್‌ರಲ್ಲಿ ಕಷ್ಟ-ಕಾರ್ಪಣ್ಯ ಹೇಳಿಕೊಂಡು ಹಗುರವಾಗುವ ಆಸೆ. ಇವರಿಲ್ಲದಾಗ ನಾನೇ ಮಾತನಾಡಿಸುತ್ತೇನೆ. ಕೆಲವೊಮ್ಮೆ ಸಾಂತ್ವನದ ಮಾತುಗಳನ್ನು ಆಡುತ್ತೇನೆ. ನಾನಾಗಲಿ, ಇವರಾಗಲಿ ಪರಿಶ್ರಮದ ಬದುಕನ್ನು ಹಾದು ಬಂದವರಾದುದರಿಂದ ಕಷ್ಟದಲ್ಲಿರುವವರಿಗೆ ತಾಳ್ಮೆಯಿಂದ ಸ್ಪಂದಿಸುವುದಕ್ಕೆ ಸಾಧ್ಯವಾಗಿದೆ. ಶಾಂತಾ ಶ್ರೀನಿವಾಸ ಪೂಜಾರಿ