Advertisement
ಕಾಸರಗೋಡು: ಕಾಸರಗೋಡು ನಗರ ಸಮೀಪದ ಎರಿಯಾಲ್‌ನಲ್ಲಿರುವ ಕೂಡ್ಲು ಗ್ರೂಪ್ ವಿಲ್ಲೇಜ್ ಆಫೀಸ್ (ಗ್ರಾಮ ಕಚೇರಿ) ವಿಭಜಿಸಬೇಕೆಂದು ಇಲ್ಲಿನ ಜನರು ಕಳೆದ ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಜತೆಗೆ ಈ ಗ್ರಾಮ ಕಚೇರಿಯಲ್ಲಿ ನೌಕರರ ಸಂಖ್ಯೆಯೂ ತೀರಾ ಕಡಿಮೆಯಿದೆ. ಅವಶ್ಯಕತೆಗೆ ಬೇಕಾದಷ್ಟು ನೌಕರರನ್ನು ನೇಮಕಾತಿ ಮಾಡದಿರುವುದರಿಂದ ವಿವಿಧ ಅಗತ್ಯಗಳಿಗೆ ಇಲ್ಲಿಗೆ ಆಗಮಿಸುವ ಜನರು ತೀವ್ರ ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಇದು ವ್ಯಾಪಕ ಪ್ರತಿಭಟನೆಗೂ ಕಾರಣವಾಗಿದೆ.
Related Articles
ಈಗ ಇರುವ 3 ಮಂದಿ ನೌಕರರು ರಾತ್ರಿ ಹಗಲು ಕಷ್ಟಪಟ್ಟು ಸರಕಾರಿ ವಿಷಯಗಳಿಗೆ ಮತ್ತು ಜನರ ಸಮಸ್ಯೆಗಳಿಗೆ ಒಂದು ಹಂತದವರೆಗೆ ಪರಿಹಾರ ಕಲ್ಪಿಸುತ್ತಿದ್ದಾರೆ.
Advertisement
ಇಷ್ಟೆಲ್ಲಾ ಸಂಕಷ್ಟಗಳ ಮಧ್ಯೆಯೂ 2018ನೇ ಜನವರಿಯಿಂದ ತೊಡಗಿ ಇದುವರೆಗೆ 12,000ದಷ್ಟು ಸರ್ಟಿಫಿಕೇಟ್‌ಗಳನ್ನು ವಿತರಿಸಲಾಗಿದೆ. ಇಲ್ಲಿಗೆ ತಲುಪುವ ಜನರ ಸಮಸ್ಯೆಗಳಿಗೆ ಸಂಬಂಧಪಟ್ಟವರು ತುರ್ತು ಪರಿಹಾರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ವಿವಿಧ ಜನಪರ ಸಂಘಟನೆಗಳು ಮುನ್ನೆಚ್ಚರಿಕೆ ನೀಡಿವೆ.
ಅಪಾರ ವಿಸ್ತೀರ್ಣದ ಭೂಪ್ರದೇಶ : ವಿದ್ಯಾನಗರದಲ್ಲಿರುವ ನಗರಸಭಾ ಕ್ರೀಡಾಂಗಣದಿಂದ ತೊಡಗಿ ಸೀತಾಂಗೋಳಿಯ ಕಿನ್‌ಫ್ರಾ ಪಾರ್ಕ್ ತನಕವೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಕತ್ತಬೈಲಿನಿಂದ ತೊಡಗಿ ಮೊಗ್ರಾಲ್ ಸೇತುವೆ ವರೆಗೂ ಇರುವ ಪ್ರದೇಶಗಳು ಈ ಗ್ರಾಮ ಕಚೇರಿಗೆ ಒಳಪಟ್ಟಿವೆ. ಕಾಸರಗೋಡು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ 22 ಮತಗಟ್ಟೆಗಳು ಈ ಗ್ರಾಮ ಕಚೇರಿಯ ವ್ಯಾಪ್ತಿಯಲ್ಲಿ ಸೇರಿವೆ. ಈ ಮೂಲಕ ಕೂಡ್ಲು ಗ್ರಾಮ ಕಚೇರಿಗೆ ಅಪಾರ ಭೂಪ್ರದೇಶವು ಒಳಪಟ್ಟಿದ್ದು, ಇಲ್ಲಿನ ಅಧಿಕಾರಿಗಳು ಮತ್ತು ನೌಕರರು ಹೊರಲಾರದಷ್ಟು ಕೆಲಸದ ಹೊರೆಯನ್ನು ಹೊರಬೇಕಾಗುತ್ತಿದೆ. ಇದರಿಂದಾಗಿ ಯಾವುದೇ ಕೆಲಸಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಬಗ್ಗೆ ಕಂದಾಯ ಸಚಿವರೇ ನೇರವಾಗಿ ಗಮನಿಸಿ ಸರಿಯಾದ ವ್ಯವಸ್ಥೆ ಕಲ್ಪಿಸಬೇಕಾಗಿದೆ.