Advertisement

ರಾಮಸಾಗರಹಟ್ಟಿಯಲ್ಲಿ 100ಕ್ಕೂ ಹೆಚ್ಚು ಜನರಿಗೆ ವಾಂತಿಭೇದಿ

12:54 PM Dec 02, 2019 | Team Udayavani |

ಕೂಡ್ಲಿಗಿ: ತಾಲೂಕಿನ ಗುಡೇಕೋಟೆ ಸಮೀಪದ ರಾಮಸಾಗರಹಟ್ಟಿ ಗ್ರಾಮದಲ್ಲಿ ಕಳೆದ 3 ದಿನಗಳಿಂದ ಈವರೆಗೆ ಸುಮಾರು 100ಕ್ಕೂ ಹೆಚ್ಚು ಜನರಿಗೆ ವಾಂತಿಭೇದಿ ಕಾಣಿಸಿಕೊಂಡಿದೆ. ಗುಡೇಕೋಟೆ ಆಸ್ಪತ್ರೆ ವೈದ್ಯರ ನೇತೃತ್ವದ ತಂಡ ಗ್ರಾಮದಲ್ಲಿ ಈವರೆಗೆ 97 ಜನರಿಗೆ ಚಿಕಿತ್ಸೆ ನೀಡಿದ್ದು ಉಳಿದವರು ಗುಡೇಕೋಟೆ ಹಾಗೂ ಮೊಳಕಾಲ್ಮೂರು ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ತಾಲೂಕಿನ ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿ ವ್ಯಾಪಿಯಲ್ಲಿರುವ ರಾಮಸಾಗರಹಟ್ಟಿ ಗ್ರಾಮದಲ್ಲಿ ಕಳೆದ 3 ದಿನಗಳಿಂದ ವಾಂತಿಭೇದಿ ಪ್ರಕರಣ ಬೆಳಕಿಗೆ ಬಂದಿದ್ದೂ ಭಾನುವಾರವೂ ನಿಯಂತ್ರಣಕ್ಕೆ ಬಂದಿಲ್ಲ. ಶುಕ್ರವಾರ 20 ಜನರಲ್ಲಿ ಕಾಣಿಸಿಕೊಂಡಿದ್ದು, ಶನಿವಾರ 50ಕ್ಕೂ ಹೆಚ್ಚು ಜನರಲ್ಲಿ ಕಂಡು ಬಂದಿದೆ. ಭಾನುವಾರ 100ಕ್ಕೂ ಹೆಚ್ಚು ಜನರಲ್ಲಿ ವಾಂತಿಭೇದಿ ಕಂಡುಬಂದಿದೆ. ಚಿಕಿತ್ಸೆ ಪಡೆದುಕೊಂಡಿದ್ದ ರೋಗಿಗಳ ಪೈಕಿ ಮತ್ತೆ 22 ಜನರಿಗೆ ಕಾಣಿಸಿಕೊಂಡುವುದು ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ.

ಆಸ್ಪತ್ರೆಯಾದ ಗ್ರಾಮದ ಶಾಲೆ: ರಾಮಸಾಗರಹಟ್ಟಿಯಿಂದ ಗುಡೇಕೋಟೆಗೆ ಯಾವುದೇ ಸರ್ಕಾರಿ, ಖಾಸಗಿ ಬಸ್‌ ಸಂಚಾರವಿಲ್ಲದ ಕಾರಣ ತಾಲೂಕು ವೈದ್ಯಾಧಿಕಾರಿ ಡಾ| ಷಣ್ಮುಖನಾಯ್ಕ ಅವರ ಮಾರ್ಗದರ್ಶನದಂತೆ ಗ್ರಾಮದ ಶಾಲೆಯೊಂದರ ಕೊಠಡಿಗಳು ಈಗ ಆಸ್ಪತ್ರೆಯ ವಾರ್ಡ್‌ಗಳಾಗಿ ಬದಲಾಗಿವೆ. ಶನಿವಾರದಿಂದ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆಯಲಾಗಿದೆ. ಗುಡೇಕೋಟೆ ಆಸ್ಪತ್ರೆ ವೈದ್ಯ ಡಾ| ಶ್ರೀಧರ ಅವರನ್ನು ಇಲ್ಲಿ ನಿಯೋಜಿಸಿದ್ದು 24 ಗಂಟೆಗಳ ಕಾಲ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ನೀರಿನಿಂದಾಗಿರುವ ಶಂಕೆ: ಗ್ರಾಮದಲ್ಲಿ ಕುಡಿವ ನೀರುವ ಪೂರೈಸಲು 6 ಕೊಳವೆಬಾವಿಗಳಿದ್ದು ಇವುಗಳಿಂದ ಪೂರೈಸುವ ನೀರಿನಲ್ಲಿ ಕಲುಷಿತ ನೀರು ಸೇರಿರಬಹದು. ಅಲ್ಲದೆ ಆ ನೀರನ್ನು ಜನರು ಕುಡಿದಿರುವುದರಿಂದ ವಾಂತಿಭೇದಿ ಪ್ರಕರಣಗಳು ಕಾಣಿಸಿಕೊಂಡಿರಬಹುದೆಂದು ವೈದ್ಯರು ತಿಳಿಸಿದ್ದಾರೆ. ಸದ್ಯ 3 ಕೊಳವೆ ಬಾವಿಯಿಂದ ವೈದ್ಯರ ಸಲಹೆಯಂತೆ ನೀರು ಪೂರೈಕೆ ಸ್ಥಗಿತವಾಗಿದ್ದು
ಇನ್ನೂ 3 ಕೊಳವೆಬಾವಿ ನೀರು ಪೂರೈಸಲಾಗುತ್ತಿದೆ.

ಶುದ್ಧ ಕುಡಿವ ನೀರಿನ ಘಟಕವಿದ್ದು ಈ ನೀರನ್ನೇ ಬಳಸಬೇಕೆಂದು ಅಥವಾ ಕಾಯಿಸಿದ ಬಿಸಿ ನೀರು ಕುಡಿಯುವಂತೆ ಗ್ರಾಮದ ಜನರಿಗೆ ತಾಲೂಕು ವೈದ್ಯಾಧಿಕಾರಿಗಳು ಗ್ರಾಮ ಪಂಚಾಯ್ತಿ ಮೂಲಕ ಡಂಗುರ ಸಾರಿಸಿದ್ದಾರೆ.

Advertisement

ಸ್ವಚ್ಛತೆಗೆ ಮುಂದಾದ ಗ್ರಾಮ ಪಂಚಾಯ್ತಿ: ಗ್ರಾಮದಲ್ಲಿ ಈ ಪ್ರಕರಣದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಎಚ್ಚೆತ್ತುಕೊಂಡಿದ್ದು ಕುಡಿಯುವ ನೀರಿನ ಪೈಪ್‌ ಸೋರಿಕೆಯನ್ನು ಪತ್ತೆಮಾಡಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಸಮಸ್ಯೆ ಹೆಚ್ಚಾದ ನಂತರ ಸಿಬ್ಬಂದಿ ಕಾರ್ಯಕ್ಕೆ ಮುಂದಾಗಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರಿನಿಂದ ವಾಂತಿಭೇದಿ ಕಾಣಿಸಿಕೊಂಡಿರುವ ಶಂಕೆ ಇದೆ. ಹಾಗಾಗಿ ನೀರನ್ನು ಬಳ್ಳಾರಿಗೆ ಪರೀಕ್ಷೆ ಕಳುಹಿಸಿಕೊಡಲಾಗಿದೆ. ಗುಡೇಕೋಟೆಯ ವೈದ್ಯ ಡಾ| ಶ್ರೀಧರ್‌ ಸೇರಿದಂತೆ 10 ಸಿಬ್ಬಂದಿಯನ್ನು ತಾತ್ಕಾಲಿಕ ಆಸ್ಪತ್ರೆಗೆ ನಿಯೋಜಿಸಲಾಗಿದೆ. ಸದ್ಯ ಇಲ್ಲಿಯವರೆಗೂ ತಾತ್ಕಾಲಿಕ ಆಸ್ಪತ್ರೆಯಲ್ಲಿ 97 ರೋಗಿಗಳು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬೇರೆ ಕಡೆಗಳಲ್ಲೂ ಚಿಕಿತ್ಸೆಗೆ ದಾಖಲಾಗಿರುವ ಬಗ್ಗೆ ಮಾಹಿತಿ ಪಡೆಯಲಾಗುವುದು.
ಡಾ.ಷಣ್ಮುಖನಾಯ್ಕ,
ಕೂಡ್ಲಿಗಿ ತಾಲೂಕು ಆರೋಗ್ಯಾಧಿಕಾರಿ

ಗ್ರಾಮ ಪಂಚಾಯ್ತಿಯವರ ನಿರ್ಲಕ್ಷ್ಯದಿಂದ ಕುಡಿಯುವ ನೀರಿನ ಪೈಪ್‌ಲೈನ್‌ ಸೋರಿಕೆಯಾಗಿದ್ದು ಈ ಮೂಲಕ ವಾಂತಿಭೇದಿಯಾಗಿದ್ದು ಸ್ಥಳೀಯ ಆಡಳಿತ ಉತ್ತಮ ಕುಡಿಯುವ ನೀರನ್ನು ಪೂರೈಸಬೇಕು.
.ತಿಪ್ಪೇಸ್ವಾಮಿ,
ರಾಮಸಾಗರಹಟ್ಟಿ ಗ್ರಾಮದ ಯುವಕ

Advertisement

Udayavani is now on Telegram. Click here to join our channel and stay updated with the latest news.

Next