ಪಥನಂತಿಟ್ಟ:ಕೇರಳ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಶಬರಿಮಲೆ ಕ್ಷೇತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚು ಸದ್ದು ಮಾಡಿದ್ದು ಕೊನ್ನಿ ವಿಧಾನಸಭೆ ಕ್ಷೇತ್ರ. ಆದರೆ ಕೊನ್ನಿ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಸಿಪಿಎಂ ಅಭ್ಯರ್ಥಿ ಕೆಯು ಜೆನೀಶ್ ಕುಮಾರ್ ಎದುರು ಹಿನ್ನಡೆ ಅನುಭವಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ಹೆಚ್ಚಳ : ಹರಿಯಾಣದಲ್ಲಿ ಒಂದು ವಾರ ಸಂಪೂರ್ಣ ಲಾಕ್ ಡೌನ್
ಕೊನ್ನಿ ಕ್ಷೇತ್ರದಲ್ಲಿ ಹಾಲಿ ಶಾಸಕ, ಎಲ್ ಡಿಎಫ್ ನ ಜೆನೀಶ್ ಕುಮಾರ್ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಬಿಜೆಪಿಯ ಸುರೇಂದ್ರನ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ ಎಂದು ವರದಿ ತಿಳಿಸಿದೆ.
ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಚಾರಕ್ಕೆ ಸಂಬಂಧಿಸಿದಂತೆ ಪಥನಂತಿಟ್ಟದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಕೇರಳ ಎಲ್ ಡಿಎಫ್ ಸರ್ಕಾರ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ಕೂಡಾ ವ್ಯಕ್ತಪಡಿಸಿತ್ತು.
Related Articles
ಕೊನ್ನಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿನ ಭರವಸೆ ಹೊಂದಿದ್ದ ಬಿಜೆಪಿಗೆ ನಿರಾಸೆ ಉಂಟು ಮಾಡಿದೆ. ಪಥನಂತಿಟ್ಟ ಜಿಲ್ಲೆಯಲ್ಲಿ ಕೊನ್ನಿ, ಅಡೂರು, ತಿರುವಲ್ಲಾ, ಅರಾನಮುಲಾ, ರನ್ನಿ ಸೇರಿದಂತೆ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳಿವೆ. ಇಲ್ಲಿನ ಐದು ಕ್ಷೇತ್ರಗಳಲ್ಲಿ ಎಲ್ ಡಿಎಫ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿರುವುದಾಗಿ ವರದಿ ತಿಳಿಸಿದೆ.
ಶಬರಿಮಲೆ ದೇವಾಲಯದೊಳಗೆ 10ರಿಂದ 50ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನೀಡುವ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಏತನ್ಮಧ್ಯೆ ಸುಪ್ರೀಂಕೋರ್ಟ್ ಹಾಗೂ ಕೇರಳ ಎಲ್ ಡಿಎಫ್ ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನೆ ನಡೆದಿತ್ತು. ತೀವ್ರ ಹಿಂಸಾಚಾರ ಕೂಡಾ ಸಂಭವಿಸಿತ್ತು.