Advertisement

ಕೊಂಕಣಿ ಭವನಕ್ಕೆ ಜಾಗ ಗುರುತಿಸಿ: ಐವನ್‌ ಡಿ’ಸೋಜಾ ಸಲಹೆ 

02:45 AM Aug 28, 2018 | Karthik A |

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಜಾಗ ಗುರುತಿಸಿ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದರೆ ಕೊಂಕಣಿ ಭವನ ನಿರ್ಮಾಣಕ್ಕೆ ಬೇಕಾದ ಸರ್ವ ಸಹಕಾರವನ್ನು ನೀಡಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಹೇಳಿದರು. ಸೋಮವಾರ ನಗರದ ಪುರಭವನದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ಕೊಂಕಣಿ ಮಾನ್ಯತಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಭವನ ನಿರ್ಮಾಣಕ್ಕೆ ಸರಕಾರ ಹಣ ತೆಗೆದಿರಿಸಿದೆ. ಜಾಗ ಗುರುತಿಸಬೇಕಿದೆ. ಅಕಾಡೆಮಿಯ ಅಧ್ಯಕ್ಷರು ಕಾರ್ಯ ಪ್ರವೃತ್ತರಾಗಬೇಕು ಎಂದವರು ಸೂಚಿಸಿದರು. ಅಕಾಡೆಮಿಯ ವಿವಿಧ ಬೇಡಿಕೆಗಳ ಬಗ್ಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಸಂಖ್ಯೆ ಕಡಿಮೆ ಇರುವ ಬಗ್ಗೆ ಖೇದ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಹೆಚ್ಚು ಜನರು ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಆರ್‌. ಪಿ. ನಾಯಕ್‌ ಮಾತನಾಡಿ ಕೊಂಕಣಿ ಭವನ ನಿರ್ಮಾಣಕ್ಕೆ ಜಾಗ ಪಡೆಯಲು ಪ್ರಯತ್ನ ನಡೆಸಲಾಗುವುದು ಎಂದರು. ಕೊಂಕಣಿ ಕಾರ್ಯಕ್ರಮಗಳಲ್ಲಿ ಜನರು ಭಾಗವಹಿಸುವಂತೆ ಮಾಡಲು ಕೊಂಕಣಿ ಜಾಗೃತಿ ಅಭಿಯಾನ ನಡೆಸಲಾಗುವುದು. ಶಾಲೆಗಳಲ್ಲಿ ಕೊಂಕಣಿ ಕಾರ್ಯಾಗಾರ ಮತ್ತು ಸರ್ಟಿಫಿಕೇಟ್‌ ಕೋರ್ಸು ನಡೆಸಲು ಉದ್ದೇಶಿಸಿದ್ದು, ಹೈಸ್ಕೂಲ್‌ ತರಗತಿಗಳಿಂದ ಆರಂಭಿಸಲಾಗುವುದು. ಗಾಯನ ಮತ್ತು ರಂಗ ತರಬೇತಿ ನಡೆಸಲಾಗುವುದು. ಲೇಖಕರಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.

ಮಂಗಳೂರು ವಿ.ವಿ.ಯ ಕೊಂಕಣಿ ಅಧ್ಯಯನ ಪೀಠ ಮತ್ತು ಸಂಜೆ ಕಾಲೇಜಿನ ಜತೆ ಸೇರಿ ಕೊಂಕಣಿ ಮಾನ್ಯತಾ ದಿನ ಆಚರಿಸುವ ವಿಚಾರದಲ್ಲಿ ವಿ.ವಿ. ಅಧಿಕಾರಿಗಳ ಅಸಹಕಾರದ ಬಗ್ಗೆ ಆರ್‌.ಪಿ. ನಾಯಕ್‌ ವಿ.ವಿ. ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಕೊಂಕಣಿ ಅಧ್ಯಯನ ಪೀಠವು ಕೊಂಕಣಿ ಕಾರ್ಯಕ್ರಮಗಳನ್ನು ನಡೆಸುವಾಗ ಅಕಾಡೆಮಿಯ ಸಹಯೋಗ ಪಡೆಯಬೇಕು ಎಂದು ಸಲಹೆ ಮಾಡಿದರು. 

ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿ.ವಿ. ಕುಲಪತಿ ಡಾ| ಕಿಶೋರ್‌ ಕುಮಾರ್‌ ಮಾತನಾಡಿ, ಕೊಂಕಣಿ ಅಧ್ಯಯನ ಪೀಠವು ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಸಂಶೋಧನೆ ನಡೆಸಬೇಕು ಎಂದರು. ಕೊಂಕಣಿ ಮಾತನಾಡುವ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೊಂಕಣಿ ಕಾರ್ಯಕ್ರಮಗಳನ್ನು ಸಂಘಟಿಸಬೇಕೆಂದು ಅಕಾಡೆಮಿಯ ಮಾಜಿ ಅಧ್ಯಕ್ಷ ರೋಯ್‌ ಕ್ಯಾಸ್ತೆಲಿನೊ ಹೇಳಿದರು.

Advertisement

ಅಕಾಡೆಮಿ ರಿಜಿಸ್ಟ್ರಾರ್‌ ಚಂದ್ರಹಾಸ ರೈ ಬಿ. ವೇದಿಕೆಯಲ್ಲಿದ್ದರು. ಅಕಾಡೆಮಿಯ ಸದಸ್ಯ ಅಶೋಕ್‌ ಕುಮಾರ್‌ ಸ್ವಾಗತಿಸಿ, ಸ್ಟೀಫನ್‌ ರೊಡ್ರಿಗಸ್‌ ಪ್ರಸ್ತಾವನೆಗೈದರು. ಸಂತೋಷ್‌ ಶೆಣೈ ವಂದಿಸಿದರು. ಸ್ಮಿತಾ ಪ್ರಭು ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next