ಕೊಂಡ್ಲಹಳ್ಳಿ: ಮೊಳಕಾಲ್ಮೂರು ತಾಲೂಕಿನ ಮಾದರಿ ಗ್ರಾಮ ಕೊಂಡ್ಲಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನೂರು ವಸಂತ ಪೂರೈಸಿ 124 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ರಾಜ್ಯ ಸರ್ಕಾರವು 100 ವರ್ಷ ಪೂರೈಸಿದ ರಾಜ್ಯದ ನೂರು ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಪಾರಂಪರಿಕ ಶಾಲೆಗಳೆಂದು ಗುರುತಿಸಿತ್ತು. ಸರ್ಕಾರವು ಶತಮಾನ ಪೂರೈಸಿರುವ ಶಾಲಾ ಕೊಠಡಿಗಳ ಸಂರಕ್ಷಣೆ ಮತ್ತು ನವೀಕರಣದ ಉದ್ದೇಶದಿಂದ ರಾಜ್ಯದ 100 ಪ್ರಾಥಮಿಕ ಶಾಲೆಗಳನ್ನು ಪಾರಂಪರಿಕ ಶಾಲೆಗಳೆಂದು ಗುರುತಿಸಿದೆ. ಇವುಗಳಲ್ಲಿ ಕೊಂಡ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಒಂದಾಗಿದೆ.
1896ರಲ್ಲಿ ಸ್ವಾತಂತ್ರ ಪೂರ್ವವೇ ಆರಂಭವಾಗಿ 124 ವರ್ಷಗಳ ಹಿಂದೆ ಗ್ರಾಮದ ಆಂಜನೇಯಸ್ವಾಮಿ ದೇಗುಲದ ಎದುರಿನ ರಸ್ತೆಯಲ್ಲಿನ ಚಿಕ್ಕ ಕೊಠಡಿಯಲ್ಲಿ ಆರಂಭವಾಗಿ 20 -25 ವರ್ಷಗಳ ನಂತರ ಗ್ರಾಮದ ಅಪ್ಪಣ್ಣಜ್ಜನವರ ಮಕ್ಕಳಾದ ಗೌಡ್ರು ತಿಪ್ಪಯ್ಯ, ಶಿವರುದ್ರಪ್ಪ, ತಿಪ್ಪಣ್ಣ ಅವರು ನೀಡಿದ 2 ಎಕರೆ ಗುಂಟೆ ನೀಡಿದ ಜಮೀನು ದಾನ ನೀಡಿದ ನಂತರ ಈಗಿನ ಶಾಲೆಯ ಸ್ಥಳದಲ್ಲಿ ಎರಡು ಕೊಠಡಿಗಳು ನಿರ್ಮಾಣಗೊಂಡು ಗ್ರಾಮಸ್ಥರ, ದಾನಿಗಳ ನೆರವಿನಿಂದ 24 ಕೊಠಡಿಗಳಿಂದ ಸಮೃದ್ಧ ಶಾಲೆಯಾಗಿ ಜಿಲ್ಲೆಯಲ್ಲಿಯೇ ಅತಿ ದೊಡ್ಡ ಗ್ರಾಮೀಣ ಶಾಲೆಯಾಗಿ ಹೊರಹೊಮ್ಮಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡಿದೆ.
ಖ್ಯಾತ ನೇತ್ರ ತಜ್ಞ ಡಾ|ಕೆ.ನಾಗರಾಜ್, ನಿಕಟ ಪೂರ್ವ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್. ಕಾಂತರಾಜ್ ಸೇರಿದಂತೆ ಅಪಾರ ಸಂಖ್ಯೆಯಷ್ಟು ವಿವಿಧ ಇಲಾಖೆಗಳ ವಿವಿಧ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಶಾಲೆ ಬೆಳಕಾಗಿ ಬದುಕು ಭವಿಷ್ಯ ನೀಡಿದೆ.
ಮಾ.7ರಂದು ಶನಿವಾರ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದ್ದು, ಸಿದ್ಧತಾ ಕಾರ್ಯಗಳು ಭರದಿಂದ ನಡೆದಿವೆ. ಇದಕ್ಕಾಗಿ ಶತಮಾನೋತ್ಸವ ಸಮಿತಿ, ಎಸ್‌ಡಿಎಂಸಿ, ಹಳೆಯ ವಿದ್ಯಾರ್ಥಿಗಳ ಬಳಗ, ಗಣ್ಯರ, ಗ್ರಾಮಸ್ಥರ ಸಹಕಾರದಿಂದ ಸಮಾರಂಭ ಆಯೋಜಿಸಲಾಗಿದೆ.
ಶಾಲಾ ಕೊಠಡಿಗಳಿಗೆ ಹಾಕಿರುವ ರೈಲು ಬಂಡಿಯ ಪೇಂಟಿಂಗ್ ಶಾಲೆಗ ಹೊಸತನ ನೀಡಿದೆ. ಸಂಭ್ರಮಾಚರಣೆ ನಿಮಿತ್ತ ವಿವಿಧ ಶಾಲಾಭಿವೃದ್ಧಿ ಕಾರ್ಯಗಳು ಉದ್ಘಾಟನೆಗೊಳ್ಳಲಿವೆ. ಸಮಾರಂಭಕ್ಕೆ ಶಾಲೆಯು ತಳೀರು ತೋರಣ, ವಿದ್ಯುದ್ದೀಪಗಳಿಂದ ಸಿಂಗಾರಗೊಂಡು ನವ ವಧುವಿನಂತೆ ಜನಮನಸೂರೆಗೊಳ್ಳುತ್ತಿದೆ.
ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಬಾಳಿಗೆ ಬೆಳಕಾಗಿ ಉಜ್ವಲ ಭವಿಷ್ಯ ನೀಡಿರುವ ನಮ್ಮೂರಿನ ಸರ್ಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಬ್ಬದಲ್ಲಿ ಎಲ್ಲರೂ ಕುಟುಂಬ ಸಹಿತರಾಗಿ ಭಾಗವಹಿಸಿ ಶಾಲೆಯ ಋಣವನ್ನು ನಾವೆಲ್ಲರೂ ತೀರಿಸುವ ಅಮೃತ ಘಳಿಗೆಯಲ್ಲಿ ಪಾಲ್ಗೊಳ್ಳಬೇಕು.
ಎಸ್.ಕೆ.ಗುರುಲಿಂಗಪ್ಪ,
ರಾಜ್ಯ ಪ್ರದೇಶ ಕುರುಬರ ಸಂಘದ ನಿರ್ದೇಶಕರು.
ಟಿ.ರಾಮಚಂದ್ರಪ್ಪ