ವಾಡಿ: ವಿಪರೀತ ಹದಗೆಟ್ಟು ಸಂಕಟದ ಸಂಚಾರಕ್ಕೆ ಕಾರಣವಾಗಿದ್ದ ಕೊಂಚೂರ-ವಾಡಿ ಮಧ್ಯದ ರಸ್ತೆಯ ಅಭಿವೃದ್ಧಿಗೆ ಕೊನೆಗೂ ಚಾಲನೆ ದೊರೆತಿದ್ದು, ಪ್ರಯಾಣಿಕರು ಹಾಗೂ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ನನೆಗುದಿಗೆ ಬಿದ್ದಿದ್ದ ಪಟ್ಟಣದಿಂದ ಕೊಂಚೂರ ಮತ್ತು ಬಳವಡಗಿ ಗ್ರಾಮಕ್ಕೆ ಕೂಡುವ ಆರು ಕಿ.ಮೀ. ರಸ್ತೆ ಈ ಭಾಗದ ಜನರ ಗೋಳಾಟಕ್ಕೆ ಕಾರಣವಾಗಿತ್ತು.
ರಸ್ತೆಯುದ್ದಕ್ಕೂ ಜಲ್ಲಿಕಲ್ಲುಗಳ ರಾಶಿ ಹರಡಿಕೊಂಡು ರಸ್ತೆ ಅಧೋಗತಿಗೆ ತಲುಪಿತ್ತು. ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾಗಿತ್ತು. ಜೋಲಿ ಹೊಡೆಯುತ್ತಾ ಸಾಗಿಬರುತ್ತಿದ್ದ ಅನೇಕರು ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡ ಘಟನೆಗಳಿಗೂ ರಸ್ತೆ ಸಾಕ್ಷಿಯಾಗಿತ್ತು. ಸಂಬಂಧಿಸಿದ ಇಲಾಖೆಗಳ ಅಧಿಧಿಕಾರಿಗಳ ಬೇಜವಾಬ್ದಾರಿ, ಚುನಾಯಿತ ಜನಪ್ರತಿನಿಧಿಧಿಗಳ ನಿರ್ಲಕ್ಷéಕ್ಕೆ ಜನರು ಶಾಪ ಹಾಕುವಂತಾಗಿತ್ತು.
ಕೊಂಚೂರಿನಲ್ಲಿರುವ ಸುಪ್ರಸಿದ್ಧ ಶ್ರೀ ಹನುಮಾನ ದೇವಸ್ಥಾನ, ಪಕ್ಕದ ಬಳವಡಗಿ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ಏಲಾಂಬಿಕ ದೇವಸ್ಥಾನಕ್ಕೆ ಭೇಟಿ ನೀಡಲು ನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಜಿಲ್ಲೆಯ ವಿವಿಧೆಡೆಯ ಭಕ್ತರು, ಪಡಬಾರದ ಕಷ್ಟ ಪಡು ವಂತಾ ಗಿತ್ತು. ಹಾರಿ ಬರುತ್ತಿದ್ದ ದಟ್ಟವಾದ ಧೂಳು, ಜೀವ ಹಿಂಡುತ್ತಿದ್ದ ಜಲ್ಲಿಕಲ್ಲುಗಳ ಹಾಸಿಗೆ, ಯಮ ಲೋಕಕ್ಕೆ ಮಾರ್ಗ ತೋರುವಂತಿದ್ದ ತಗ್ಗುಗಳು ಆಡಳಿತಕ್ಕೆ ಕನ್ನಡಿ ಹಿಡಿದ್ದವು.
ಕೊನೆಗೂ ಎಚ್ಚೆತ್ತುಕೊಂಡಿರುವ ಲ್ಯಾಂಡ್ ಆರ್ಮಿ ಅಧಿಕಾರಿಗಳು, ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿದ್ದಾರೆ. 2.58 ಕೋಟಿ ರೂ. ವೆಚ್ಚದಡಿ 4 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಜಲ್ಲಿಕಲ್ಲಿನ ರಸ್ತೆಯೀಗ ಡಾಂಬರ್ ರಸ್ತೆಯಾಗಿ ಬದಲಾಗುತ್ತಿದ್ದು, ಜನರಲ್ಲಿ ಹರ್ಷ ಮೂಡಿಸಿದೆ. ಈ ರಸ್ತೆಯ ದುಸ್ಥಿತಿ ಕುರಿತು ಡಿ.19 ರಂದು “ಊರು ಮುಟ್ಟೋತನ ಬೆನ್ನಟ್ಟೋ ಧೂಳು’ ಶಿರ್ಷಿಕೆಯಡಿ “ಉದಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.
* ಮಡಿವಾಳಪ್ಪ ಹೇರೂರ