ಬಜಪೆ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಜಪೆ-ಸುರತ್ಕಲ್ ರಸ್ತೆಯ ಕೊಂಚಾರ್ ಸಣ್ಣ ಸೇತುವೆ ಬಳಿ ರಸ್ತೆಯಲ್ಲಿ ತ್ಯಾಜ್ಯ ನೀರು ಹರಿದಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಈ ಪ್ರದೇಶದ ಸಮೀಪದಲ್ಲಿಯೇ ಎಂಎಸ್‌ಇಝಡ್ ಕಂಪೆನಿಗಳು ಇದ್ದು ಇದರ ತ್ಯಾಜ್ಯ ನೀರು ಸಮರ್ಪಕ ಚರಂಡಿ ಇಲ್ಲದೇ ಇಲ್ಲಿ ಶೇಖರಣೆಗೊಂಡಿದೆ ಎಂಬುದು ಸ್ಥಳೀಯರ ದೂರು.
ಒಂದು ವಾರದಿಂದ ಈ ಸಮಸ್ಯೆ ಎದುರಾಗಿದ್ದು ಕಪ್ಪು ಬಣ್ಣದ ತ್ಯಾಜ್ಯ ನೀರು ಬಜಪೆ -ಸುರತ್ಕಲ್ ರಸ್ತೆಯ ಕೊಂಚಾರ್ ಸಣ್ಣ ಸೇತುವೆಯ ಬಳಿ ಶೇಖರಣೆಗೊಂಡಿದೆ. ಚರಂಡಿಯಲ್ಲಿ ಹೂಳು ತುಂಬಿದ ಕಾರಣ ನೀರು ಹರಿದಾಡದೇ ರಸ್ತೆಯಲ್ಲಿಯೇ ನಿಂತಿದೆ.
ವಾಹನ ಸವಾರರು ಈ ತ್ಯಾಜ್ಯ ನೀರು ಚಿಮುಕಿಸಿಕೊಂಡೇ ಸಂಚಾರ ಮಾಡಬೇಕಿದೆ. ತ್ಯಾಜ್ಯದಿಂದ ನೈರ್ಮಲ್ಯ ಹದಗೆಟ್ಟಿದ್ದು ಪಾದಚಾರಿಗಳು ಗಬ್ಬು ವಾಸನೆಯಿಂದ ಮೂಗು ಮುಚ್ಚಿಕೊಂಡೇ ತಿರುಗಾಡುತ್ತಿದದ್ದು ಪರಿಸರದ ಕೆಲವರಿಗೆ ಮೈಯಲ್ಲಿ ತುರಿಕೆ ಕಂಡುಬಂದಿದೆ ಎಂದು ನಿವಾಸಿಗಳು ದೂರಿದ್ದಾರೆ.
ಮೀನಿನ ತ್ಯಾಜ್ಯದ ನೀರನ್ನು ಇಲ್ಲಿ ಬಿಡುವ ಕಾರಣ ಕೊಳೆತ ಮೀನಿನ ಗಬ್ಬು ವಾಸನೆ ಬರುತ್ತಿದೆ. ಈ ಸಮಸ್ಯೆಯ ಬಗ್ಗೆ ಗ್ರಾಮ ಪಂಚಾಯತ್‌ಗೆ ತಿಳಿಸಲಾಗಿದೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ.
ತ್ಯಾಜ್ಯ ನೀರು ಬಿಡದಂತೆ ಆದೇಶ
ಕೊಂಚಾರ್‌ನಲ್ಲಿನ ತ್ಯಾಜ್ಯ ನೀರಿನ ಸಮಸ್ಯೆ ಬಗ್ಗೆ ತಿಳಿಸಿದ್ದು ಬುಧವಾರ ಸ್ಥಳಕ್ಕೆ ಭೇಟಿ ನೀಡಲಾಗಿದೆ. ಇಲ್ಲಿನ ಚರಂಡಿ ಮತ್ತು ರಸ್ತೆಯಲ್ಲಿ ತ್ಯಾಜ್ಯ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ತ್ಯಾಜ್ಯ ನೀರು ಬಿಡದಂತೆ ಹಾಗೂ ಶೀಘ್ರವೇ ಚರಂಡಿಯ ಹೂಳು ತೆಗೆಯುವಂತೆ ಎಂಎಸ್‌ಇಝಡ್ ಅಧಿಕಾರಿಗೆ ತಿಳಿಸಲಾಗಿದೆ.
– ರೋಝಿ ಮಥಾಯಸ್, ಅಧ್ಯಕ್ಷರು, ಬಜಪೆ ಗ್ರಾಮ ಪಂಚಾಯತ್