ಉಳ್ಳಾಲ: ಕಳೆದ ಹಲವು ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ನಟೋರಿಯಸ್ ಆರೋಪಿಯೊಬ್ಬನ ಕಾಲಿಗೆ ಉಳ್ಳಾಲ ಪೊಲೀಸರು ಗುಂಡು ಇಳಿಸಿದ್ದಾರೆ. ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯ ಅಸೈಗೋಳಿಯ ಬಳಿ ರೌಡಿಶೀಟರ್ ಮುಕ್ತಾರ್ ಮೇಲೆ ಫೈರಿಂಗ್ ಮಾಡಲಾಗಿದೆ.
ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿರುವ ಮುಕ್ತಾರ್ ನ ಕ್ರೈಂ ಹಿಸ್ಟರಿಯೇ ಭಯಾನಕವಾಗಿದೆ. 2021ರಲ್ಲಿ ಶೋಭಾ ಎಂಬಾಕೆ ಸಣ್ಣ ಗೂಡಂಗಡಿ ನಡೆಸುತ್ತಿದ್ದಳು. ಈ ವೇಳೆ ಮುಕ್ತಾರ್ ಆಕೆಯ ಬಳಿ ಸಿಗರೇಟ್ ಕೇಳಿದ್ದಾನೆ. ಆದರೆ ಆಕೆ ಅಂಗಡಿ ಕ್ಲೋಸ್ ಆಗಿದೆ ಎಂದು ಹೇಳಿದ್ದಾಳೆ. ಆಗ ಆಕ್ರೋಶದಿಂದ ಆಕೆಯ ಅಂಗಡಿಗೆ ಬೆಂಕಿ ಹಾಕಿ ಸುಟ್ಟಿದ್ದ. ಆವಾಗಲೂ ಆತ ವಾರೆಂಟ್ ಮೇಲೆ ಕಣ್ಣು ತಪ್ಪಿಸಿ ಓಡಾಡುತ್ತಿದ್ದ.
ಇದನ್ನೂ ಓದಿ:ಅಕ್ರಮ ಗೋ ಮಾಂಸದ ಅಡ್ಡೆ ಮೇಲೆ ದಾಳಿ: ಓರ್ವನ ಬಂಧನ; 200 ಕೆ.ಜಿ. ಮಾಂಸ ವಶ
ಮುಕ್ತಾರ್ 2014ರಿಂದ ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದಾನೆ. ಈತನಿಗೆ ಈಗ 27 ವರ್ಷ ವಯಸ್ಸಾಗಿದ್ದು, ಸಣ್ಣ ಪ್ರಾಯದಲ್ಲೇ ಕ್ರಿಮಿನಲ್ ಚಟುವಟಿಕೆ ಭಾಗಿಯಾಗಿದ್ದ. ಉಳ್ಳಾಲ, ಉತ್ತರ ಠಾಣೆ, ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿವೆ. ಕಳೆದ ಐದು ವರ್ಷಗಳಿಂದ ಈತನ ಪತ್ತೆ ಸಾಧ್ಯವಾಗಿರಲಿಲ್ಲ. ಈ ಮಧ್ಯೆಯೂ ಈತ ಆರು ಪ್ರಕರಣಗಳನ್ನು ಮಾಡಿದ್ದಾನೆ. ಆರು ಕೊಲೆ ಯತ್ನ, ಎರಡು ಅಕ್ರಮ ಶಸ್ತಾಸ್ತ್ರ ಕಾಯ್ದೆ, ದರೋಡೆ ಕೇಸ್ ಇದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದರು.
ಇತ್ತೀಚೆಗೆ ಉಳ್ಳಾಲ ಪೊಲೀಸರು ಮುಕ್ತಾರ್ ನನ್ನು ಬಂಧಿಸಿದ್ದರು. ಇಂದು ಬೆಳಗ್ಗೆ ಆರೋಪಿ ಮುಕ್ತಾರ್ ನನ್ನು ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಆಯುಧಗಳನ್ನು ಇಟ್ಟಿದ್ದ ಜಾಗಕ್ಕೆ ಕರೆ ತರಲಾಗಿತ್ತು. ಈ ವೇಳೆ ನಮ್ಮ ಇಬ್ಬರು ಸಿಬ್ಬಂದಿ ಮೇಲೆ ಆರೋಪಿ ದಾಳಿ ಮಾಡಿದ್ದಾನೆ. ಆಗ ಇನ್ಸ್ಪೆಕ್ಟರ್ ಸಂದೀಪ್ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆದರೂ ಲೆಕ್ಕಿಸದೆ ಇದ್ದಾಗ ಎಡಗಾಲಿಗೆ ಫೈರ್ ಮಾಡಿದ್ದಾರೆ ಎಂದು ಶಶಿಕುಮಾರ್ ಹೇಳಿದರು.