ಉಳ್ಳಾಲ: ಜಿಲ್ಲಾ ಕೇಂದ್ರವಾಗಿರುವ ಮಂಗಳೂರಿನಿಂದ ಆಗ್ನೇಯ ಭಾಗದಲ್ಲಿರುವ ಕೊಣಾಜೆ ಗ್ರಾಮ ಎತ್ತರ ಗುಡ್ಡ ಪ್ರದೇಶ ಸೇರಿದಂತೆ ಕೃಷಿ ಭೂಮಿಯನ್ನು ಹೊಂದಿರುವ ಗ್ರಾಮ. ಒಂದು ಕಾಲದಲ್ಲಿ ಬಹುತೇಕ ಗೋಮಾಳ ಪ್ರದೇಶವಾಗಿತ್ತು. 1980ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಆರಂಭವಾದ ಬಳಿಕ ಈ ಪ್ರದೇಶದ ಚಿತ್ರಣವೇ ಬದಲಾಯಿತು. ಗ್ರಾಮ ಕೇಂದ್ರದ ಪರಿಸರದಲ್ಲಿ ಒಂದಷ್ಟು ಅಭಿವೃದ್ಧಿ ಕೆಲಸಗಳು ಆಗಿದ್ದರೆ, ಇನ್ನಷ್ಟು ಪ್ರಗತಿಯಲ್ಲಿದೆ. ಆದರೆ ಒಳರಸ್ತೆಗಳನ್ನು ಮಾತ್ರ ಮರೆಯಲಾಗಿದೆ. ಈ ರಸ್ತೆಗಳು ಅಭಿವೃದ್ಧಿಯಾದರೆ ಗ್ರಾಮ ಸುಂದರವಾಗಲಿದೆ.
ಗ್ರಾಮದ ಪ್ರಮುಖ ರಸ್ತೆಗಳು ಅಭಿವೃದ್ಧಿಯಾಗಿವೆ. ಗ್ರಾಮದ ಒಳರಸ್ತೆಗಳಿಗೆ ಇನ್ನೂ ಆ ಭಾಗ್ಯ ಬಂದಿಲ್ಲ. ಕಚ್ಚಾ ರಸ್ತೆಗಳಾಗಿದ್ದು, ದುರಸ್ತಿಗಾಗಿ ಎದುರು ನೋಡುತ್ತಿವೆ. ಮರಕಳಬೆಟ್ಟುವಿನಿಂದ – ಕೋಟಿಪದವು ಸಂಪರ್ಕಿಸುವ ಬೊಳ್ಳೆಕುಮೇರು ರಸ್ತೆ, ಗುಡ್ಡುಪಾಲ್- ಮಿಷನ್ ಕಾಂಪೌಂಡ್ ಸಂಪರ್ಕ ರಸ್ತೆ, ಮಂಗಳೂರು ವಿವಿ ರಸ್ತೆ – ಕಾನ ಸಂಪರ್ಕಿಸುವ ರಸ್ತೆ, ಕೊಪ್ಪಳ ರಸ್ತೆ ಅಭಿವೃದ್ಧಿಯಾಗಬೇಕಾಗಿದೆ.
ಉಳಿದಂತೆ ಗ್ರಾಮಕ್ಕೊಂದು ಮೈದಾನ ಬೇಡಿಕೆಯಿದ್ದು, ಅಸೈಗೋಳಿ ಮತ್ತು ಕೊಣಾಜೆಯಲ್ಲಿ ಮಾರುಕಟ್ಟೆ ಮತ್ತು ಪಂಚಾಯತ್‌ಗೆ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಬೇಡಿಕೆ ಇದೆ. ಮುಚ್ಚಿಲ್ ಕೋಡಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರ ಅಭಿವೃದ್ಧಿಯಾಗಬೇಕಾಗಿದೆ. ಕೊಣಾಜೆ-ಮುಲಾರ ರಸ್ತೆ ಉತ್ತಮವಾಗಿದ್ದರೂ ಇಲ್ಲಿ ಬಸ್ ಸೌಕರ್ಯ ಇಲ್ಲ.
ಘನತ್ಯಾಜ್ಯ ವಿಲೇವಾರಿ ಮತ್ತು ಘಟಕ ಸ್ಥಾಪನೆ
ಘನತ್ಯಾಜ್ಯ ನಿರ್ಮಾಣಕ್ಕೆ ಒಂದು ಎಕರೆ ಪ್ರದೇಶ ಮೀಸಲಿಟ್ಟಿದ್ದು, ಕಾಮಗಾರಿ ಆರಂಭವಾಗಬೇಕಾಗಿದೆ. ಮಂಗಳೂರು ವಿವಿಯಿಂದ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಕನಸಾಗಿಯೇ ಉಳಿದಿದೆ. ಇದರೊಂದಿಗೆ ಡಿ.ಸಿ. ಮನ್ನಾ ಜಾಗ ವಿಲೇವಾರಿ, ನಿವೇಶನ ರಹಿತರಿಗೆ ನಿವೇಶನ, ವಸತಿ ಯೋಜನೆ ಈಡೇರಬೇಕಾಗಿದೆ.
ಕುಡಿಯುವ ನೀರಿನ ವ್ಯವಸ್ಥೆ
ಅಸೈಗೋಳಿ ಸೈಟ್, ದಡಸ್, ಪಟ್ಟೋರಿ, ತಾರಿಪ್ಪಾಡಿ ಸೈಟ್ ಬಳಿ ಕುಡಿಯುವ ನೀರಿನ ಸಮಸ್ಯೆಯಿದೆ.
ಭರಣಿ ಕೆದು, ತಮ್ಮಂಜೂರು ಕೆರೆ ಅಭಿವೃದ್ಧಿ (ಸರಕಾರಿ ಕೆರೆಗಳು) ಉದ್ಯೋಗಖಾತ್ರಿ ಯೋಜನೆಯಡಿ ಅಭಿವೃದ್ಧಿಗೆ ಅವಕಾಶವಿದೆ. ದಡಸ್ ಬಳಿ 1.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗಿರುವ ಕೆರೆಯ ಕಾಮಗಾರಿ ಪೂರ್ಣಗೊಳಿಸಿ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಬಳಕೆಗೆ ಯೋಗ್ಯವಾದರೆ ಅಸೈಗೋಳಿ ಸೈಟ್, ದಡಸ್ ವ್ಯಾಪ್ತಿಗೆ ನೀರು ಪೂರೈಸಲು ಅವಕಾಶವಿದೆ.
ಕೊಣಾಜೆ ಹೆಸರಿನ ಸುತ್ತ…
ಕೊಣಾಜೆ ಗ್ರಾಮದ ಸ್ಥಳ ನಾಮದ ಕುರಿತು ಕೆಲವು ಅಭಿಪ್ರಾಯವಿದೆ. “ಅಜೆ’ ಎಂದರೆ ನೀರಿನಿಂದ ಮುಳುಗದ ಎತ್ತರವಾಗಿರುವ ಪ್ರದೇಶ ಎಂಬರ್ಥವಿದೆ. ಕೊಣಾಜೆಯ ವಿವಿ ಬಳಿಯ ಕೆಳ ಭಾಗದಲ್ಲಿ ಒಂದು ಕೆರೆಯಿತ್ತು. ಈ ಕೆರೆಗೆ ಕೋಣಗಳು ನೀರು ಕುಡಿಯಲು ಬರುತ್ತಿದ್ದುದರಿಂದ ಈ ಸ್ಥಳಕ್ಕೆ ಕೊಣಾಜೆ ಸ್ಥಳನಾಮ ಬಂತೆಂದು ಹೇಳಲಾಗುತ್ತಿದೆ. ಅರ್ಥ ಪ್ರಕಾರ “ಅಜೆ’ ಎಂದರೆ (ಹೆಜ್ಜೆ ಗುರುತು) ಎಂಬ ಅರ್ಥವೂ ಇದೆ.
ಸಾಮಾನ್ಯವಾಗಿ ನೀರು ಹರಿಯುವ ಮಾರ್ಗವನ್ನು ಅನುಸರಿಸಿಕೊಂಡು ಈ ಹೆಸರುಗಳು ಬಂದಿರುವ ಸಾಧ್ಯತೆ ಇದೆ. ಇನ್ನೊಂದು ಮಾಹಿತಿಯ ಪ್ರಕಾರ ಹಿಂದೆ ಎತ್ತರದ ಪ್ರದೇಶವಾಗಿದ್ದ ಕೊಣಾಜೆಯಲ್ಲಿ ಮುಳಿಹುಲ್ಲು ಬೆಳೆಯುತ್ತಿದ್ದು, ಸುತ್ತಮುತ್ತಲಿನ ಗ್ರಾಮಗಳಿಗೆ ಮತ್ತು ಮಂಗಳೂರು ಕೇಂದ್ರಕ್ಕೆ ಮನೆ ಛಾವಣಿಗೆ ಬೇಕಾದ ಹುಲ್ಲುಗಳನ್ನು ಪಟ್ಟೋರಿ ಬಳಿ ಕೃಷ್ಣ ಭಟ್ಟರ ಮನೆಯಲ್ಲಿ ದಾಸ್ತಾನು ಇಟ್ಟು ಬಳಿಕ ಸಾಗಾಟ ಮಾಡಲಾಗುತ್ತಿತ್ತು. ಈ ಕಾರಣದಿಂದ ಭಟ್ಟರ ಮನೆಗೆ “ಕಣಜದ ಮನೆ’ ಕ್ರಮೇಣ ಕೊಣಾಜೆಯಾಯಿತು ಎಂದು ಹೇಳಲಾಗುತ್ತದೆ. ಈ ಹಿಂದೆ ಹಳೆ ಗಾ.ಪಂ. ಇದ್ದ ಸ್ಥಳದಲ್ಲಿ ಗೋಳಿ ಮರವೊಂದಿದ್ದು ಇಲ್ಲಿ ಕೋಣಗಳು ಹುಲ್ಲು ಮೇಯುತ್ತಿದ್ದು ಬಳಿಕ ಕೋಣಗಳು ಇರುವ ಸ್ಥಳ ಕೊಣಾಜೆ ಆಯಿತು ಎನ್ನುವ ವಾದವೂ ಇದೆ.
3,022 ಕುಟುಂಬ
2011ರ ಜನಗಣತಿ ಪ್ರಕಾರ 11,368 ಜನಸಂಖ್ಯೆಯಿದ್ದರೆ 3,022 ಕುಟುಂಬಗಳು ನೆಲೆಸಿದ್ದು, ಶೇ. 30ರಷ್ಟು ಜನ ಕೃಷಿ ಕಾಯಕವನ್ನು ನೆಚ್ಚಿಕೊಂಡಿದ್ದಾರೆ. ಮೂರು ದೇವಸ್ಥಾನ 7 ದೈವಸ್ಥಾನಗಳು, 5 ಭಜನಮಂದಿರಗಳು, 5 ಮಸೀದಿಗಳು, ಒಂದು ಚರ್ಚ್, ಒಂದು ಪ್ರಾರ್ಥನಾ ಮಂದಿರವಿದೆ. ಸರಕಾರಿ, ಖಾಸಗಿ ಮತ್ತು ಅನುದಾನಿತ 4 ಪ್ರಾಥಮಿಕ ಶಾಲೆ, ಮೂರು ಪ್ರೌಢಶಾಲೆ, 2 ಪದವಿಪೂರ್ವ ಕಾಲೇಜು, ಮಂಗಳೂರು ವಿವಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವಿದೆ.
2,568.31 ಭೂ ಪ್ರದೇಶ
ಕೊಣಾಜೆ ಗ್ರಾಮ 2,568.31 ಎಕರೆ ಭೂ ಪ್ರದೇಶವನ್ನು ಹೊಂದಿದ್ದು, 234.38 ಎಕರೆ ಪ್ರದೇಶ ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಧೀನದಲ್ಲಿದ್ದರೆ, 36.20 ಎಕರೆ ಪ್ರದೇಶ ಅಸೈಗೋಳಿಯಲ್ಲಿರುವ ಕರ್ನಾಟಕ ಮೀಸಲು ಪೊಲೀಸ್ ಪಡೆಯ ಸ್ವಾಧೀನದಲ್ಲಿದೆ. ಪ್ರಸ್ತುತ 80 ಎಕರೆ ಪ್ರದೇಶದಲ್ಲಿ ತಾಲೂಕು ಕೇಂದ್ರ ಕಚೇರಿ, ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಫುಟ್‌ಬಾಲ್ ಮತ್ತು ಹಾಕಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವವಿದೆ.
ಮೂಲ ಸೌಕರ್ಯಕ್ಕೆ ಆದ್ಯತೆ: ಗ್ರಾಮದ ಸಮಗ್ರ ಅಭಿವೃದ್ಧಿಗೆ ಗ್ರಾಮ ಪಂಚಾಯತ್‌ನ ಸದಸ್ಯರು, ಗ್ರಾಮಸ್ಥರ ಸಹಕಾರ, ಮಾರ್ಗದರ್ಶನದೊಂದಿಗೆ ಯೋಜನೆ ರೂಪಿಸಲಾಗುತ್ತಿದೆ. ತಾಲೂಕು ಕೇಂದ್ರವಾಗಿ ಅಭಿವೃದ್ಧಿಯಾಗುತ್ತಿರುವ ಕೊಣಾಜೆಯ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. –
ಚಂಚಲಾಕ್ಷಿ, ಅಧ್ಯಕ್ಷರು ಕೊಣಾಜೆ ಗ್ರಾ. ಪಂ.
ಉದ್ಯೋಗ ನೀಡಿ: ಗ್ರಾಮದಲ್ಲಿ ಕೃಷಿಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಮದಲ್ಲಿರುವ ವಿದ್ಯಾವಂತ ಯುವಜನರಿಗೆ ವಿವಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಉದ್ಯೋಗ ನೀಡುವಂತಾಗಬೇಕು. ಮೂಲಸೌಕರ್ಯಗಳು, ಸ್ವೋದ್ಯೋಗ ತರಬೇತಿ ಸಿಗುವಂತಾಗಬೇಕು.
-ನರ್ಸುಗೌಡ, ಕೊಣಾಜೆ ಅಣ್ಣೆರೆಪಾಲು ನಿವಾಸಿ
-ವಸಂತ ಕೊಣಾಜೆ