ಕಂಪ್ಲಿ: ಕೊರೊನಾ ಪರಿಣಾಮ ಬಾಳೆ ವಹಿವಾಟು ಸ್ಥಗಿತವಾದ ಹಿನ್ನೆಲೆಯಲ್ಲಿ ವಾಣಿಜ್ಯ ಬೆಳೆ ಲಕ್ಷಾಂತರ ರೂ ಮೌಲ್ಯದ ಬಾಳೆಗೊನೆಗಳನ್ನು ತೋಟದ ಮಾಲೀಕ ಉಚಿತವಾಗಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಹಂಚುತ್ತಿದ್ದಾನೆ. ತಾಲೂಕಿನ ನೆಲ್ಲುಡಿ ಗ್ರಾಪಂ ವ್ಯಾಪ್ತಿಯ ಶಂಕರಸಿಂಗ್ ಕ್ಯಾಂಪಿನ ರೈತ ಚೆಲ್ಲಾ ಧನಂಜಯ 6 ಎಕರೆ ಭೂಮಿಯಲ್ಲಿ ಬೆಳೆದ ಬಾಳೆ ತೋಟದ ಗೋನೆಗಳು (ಜಿ.9 ತಳಿ) ಕಟಾವಿಗೆ ಬಂದಿವೆ. ಆದರೆ ಕೊರೊನಾ ಪರಿಣಾವಾಗಿ ವ್ಯಾಪಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಹಣ್ಣು ಹಾಳಾಗಬಾರದೆಂದು ರೈತರಿಗೆ ಮತ್ತು ಸಾರ್ವಜನಿಕರಿಗೆ ಕಳೆದ ಮೂರು ದಿನಗಳಿಂದ ಉಚಿತವಾಗಿ ನೀಡುತ್ತಿದ್ದಾರೆ.
ಸುಮಾರು 6 ಎಕರೆಗೆ 9 ಲಕ್ಷಕ್ಕೂ ಅಧಿಕವಾಗಿ ವೆಚ್ಚ ಮಾಡಲಾಗಿದೆ. ಆದರೆ ಮಾರಾಟ ಇಲ್ಲದ್ದರಿಂದ ಬಾಳೆಗೊನೆಗಳು ಹಾಳಾಗಬಾರದೆಂದು ಸುತ್ತಮುತ್ತಲಿನ ಜನತೆಗೆ ಉಚಿತವಾಗಿ ಹಂಚುತ್ತಿರುವುದು ಗಮನ ಸೆಳೆದಿದೆ. ಪ್ರತಿ ಒಂದು ಗೊನೆ ಕನಿಷ್ಠ 45 ರಿಂದ 55 ಕೆಜಿ ತೂಕ ಬರಲಿದೆ ಎಂದು ತಿಳಿದು ಬಂದಿದೆ. ಔಷಧ ಸಂಸ್ಕರಣೆ: ಹಸಿರು ಬಾಳೆಕಾಯಿಗೆ ಮುಂಜಾಗ್ರತೆಯಾಗಿ ಉಚಿತ ಕೊಡುವ ಜೊತೆಗೆ ಯಾವುದೇ ರೋಗಗಳು ಬಾರದೇ ಇರಲೆಂದು ಔಷಧ ನೀರಿನ ಸಂಸ್ಕರಣೆ ಮಾಡಿ ತೇವಾಂಶದೊಂದಿಗೆ ಗೊನೆ ನೀಡುವುದರ ಮೂಲಕ ಮಾದರಿ ರೈತನಾಗಿದ್ದಾನೆ.
ಉಳಿದ ಚಿಗರು ಬಾಳೆ ಗಿಡಗಳಿಗೆ ಪೋಷಣೆ ಮಾಡಿ ಬೆಳೆಸಿದರೆ, ಮುಂದಿನ ದಿನಗಳಲ್ಲಿ ಎರಡನೇ ಬೆಳೆಯಾದರು ಉತ್ತಮವಾಗಿ ಬೆಳೆದು, ಮೊದಲ ಬೆಳೆಗೆ ತಗಲಿರುವ ವೆಚ್ಚ ಹಾಗೂ ನಷ್ಟ ಕೈ ಸೇರಬಹುದು ಎಂಬ ಆಶಯವಿದೆ.
ಚೆಲ್ಲಾ ಧನಂಜಯ,
ಬಾಳೆ ಬೆಳೆದ ರೈತ.