Advertisement
ಎತ್ತರದ ದರೆ ನಡುವಿನ ಅಪಾಯಕಾರಿ ಸ್ಥಿತಿ ಯಲ್ಲಿರುವ ದಾರಿಯಲ್ಲಿ ಹೆಜ್ಜೆ ಇಡುತ್ತ ಮೈದಾನಕ್ಕೆ ಇಳಿಯಬೇಕಾದ ಸ್ಥಿತಿ ಇಲ್ಲಿನ ವಿದ್ಯಾರ್ಥಿಗಳದ್ದು.
Related Articles
Advertisement
ದುರ್ಗಮ ಹಾದಿ :
ಕೊಂಬೆಟ್ಟು ಗುಡ್ಡದ ಮೇಲ್ಭಾಗದಲ್ಲಿ ಶಾಲಾ ಕಟ್ಟಡವಿದ್ದರೆ, ಕೆಳಭಾಗದಲ್ಲಿ ಮೈದಾನವಿದೆ. ಧರೆಯ ನಡುವಿನ ದುರ್ಗಮ ಹಾದಿಯೇ ಇವೆರೆಡರ ಸಂಪರ್ಕ ಕೊಂಡಿ. ಈ ದಾರಿ ಈ ಹಿಂದೆ ಅವೈಜ್ಞಾನಿಕ ಕಾಮಗಾರಿ ನಡೆಸಿದ ಪರಿಣಾಮ ಮಳೆಗಾಲದಲ್ಲಿ ಧರೆ ಮೇಲ್ಭಾಗದಿಂದ ಮಳೆ ನೀರು ಹರಿದು ಸೃಷ್ಟಿಯಾದದ್ದು. ಅದನ್ನೇ ಮೈದಾನಕ್ಕೆ ಇಳಿಯಲು, ಏರಲು ದಾರಿಯಾಗಿ ಬಳಸಲಾಗುತ್ತಿದೆ. ಇಲ್ಲಿ ಕೊಂಚ ಯಾಮರಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತದೆ ಇಲ್ಲಿನ ಪರಿಸ್ಥಿತಿ.
ತಾಲೂಕು ಕ್ರೀಡಾಂಗಣವಾಗಿರುವ ಕಾರಣ ತಾಲೂಕು ಮಟ್ಟದ ಕ್ರೀಡಾ ಕೂಟಗಳು, ನಾನಾ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆಯುವ ಕ್ರೀಡಾ ಕೂಟಗಳು, ತಾಲೂಕು ಮಟ್ಟದ ಗಣರಾಜ್ಯೋತ್ಸವ ಇತ್ಯಾದಿ ಇಲ್ಲೇ ನಡೆಯುತ್ತವೆ. ದಕ್ಷಿಣ ದಿಕ್ಕಿನಲ್ಲಿ ಮಹಾಲಿಂಗೇಶ್ವರ ಐಟಿಐ ಸಂಸ್ಥೆ, ಪಶ್ಚಿಮ ದಿಕ್ಕಿನಲ್ಲಿ ವಿದ್ಯಾರ್ಥಿ ನಿಲಯ, ನೈಋತ್ಯ ದಿಕ್ಕಿನಲ್ಲಿ ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಇದೇ ಮೈದಾನ ಆಸರೆ. ಆದರೆ ಆ ಎರಡೂ ವಿದ್ಯಾಸಂಸ್ಥೆಗಳಿಗೆ ಈ ದುರ್ಗಮ ಹಾದಿಯಲ್ಲಿ ಸಂಚರಿಸಬೇಕಿಲ್ಲ. ಪ್ರತ್ಯೇಕವಾದ ದಾರಿಯಿದೆ.
ಪ್ರಸ್ತಾವನೆ ಸಲ್ಲಿಸಲಾಗಿದೆ :
ಧರೆಯ ನಡುವಿನ ದಾರಿಯಲ್ಲಿ ವಿದ್ಯಾರ್ಥಿಗಳು ಮೈದಾನಕ್ಕೆ ಇಳಿಯುವುದು ಸುರಕ್ಷಿತವಲ್ಲ ಎಂಬ ಬಗ್ಗೆ ಪ್ರೌಢಶಾಲೆ, ಕಾಲೇಜಿನ ಗಮನಕ್ಕೆ ತಂದಿದ್ದು, ಪ್ರತ್ಯೇಕ ದಾರಿ ಬಳಸುವಂತೆ ಸೂಚಿಸಲಾಗಿದೆ. ಮಳೆಗಾಲದಲ್ಲಿ ಧರೆ ಕುಸಿಯದಂತೆ ತಡೆಗೋಡೆ ಸಹಿತ ಮೈದಾನದ ವಿವಿಧ ಕಾಮಗಾರಿಗೆ 2 ಕೋಟಿ ರೂಪಾಯಿ ಕ್ರಿಯಾ ಯೋಜನೆ ತಯಾರಿಸಿ ನಿರ್ಮಿತಿ ಕೇಂದ್ರದಕ್ಕೆ ಕಳುಹಿಸಲಾಗಿದೆ ಎಂದು ಯುವಜನ ಇಲಾಖೆ ಅಧಿಕಾರಿಗಳು ಉದಯವಾಣಿಗೆ ತಿಳಿಸಿದ್ದಾರೆ.
ಶತಮಾನ ಶಾಲೆಯ ಹಿರಿಮೆ :
1916ರ ಮೊದಲು ಈ ಭಾಗದ ಜನತೆ ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ಮಂಗಳೂರು, ಮಡಿಕೇರಿ ಅಥವಾ ದೊಡ್ಡ ಪಟ್ಟಣಗಳನ್ನು ಆಶ್ರಯಿಸಿದ್ದ ಸಂದರ್ಭದಲ್ಲಿ ಪುತ್ತೂರು ವಿದ್ಯಾವರ್ಧಕ ಸಂಘವು ಸ್ಥಾಪಿಸಿದ ಶಾಲೆ ಇದು. ಪೇಟೆಯ ಬಾಡಿಗೆ ಕಟ್ಟಡದಲ್ಲಿ ಜನ್ಮ ತಾಳಿ 1918-19ರಲ್ಲಿ ಕೊಂಬೆಟ್ಟು ಗುಡ್ಡದ ಮೇಲಿನ ಕಟ್ಟಡಕ್ಕೆ ಇದು ಸ್ಥಳಾಂತರಗೊಂಡಿತ್ತು. ಆರಂಭದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆ 1921-22ರಲ್ಲಿ ದ.ಕ. ಜಿಲ್ಲಾ
ಬೋರ್ಡ್‌ಗೆ ಹಸ್ತಾಂತರವಾಗಿ ಪುತ್ತೂರು ಬೋರ್ಡ್ ಹೈಸ್ಕೂಲ್ ಎಂದು ಪರಿವರ್ತನೆ ಗೊಂಡಿತು. 1964-65ರಲ್ಲಿ 11ನೇ ತರಗತಿ ಆರಂಭ ವಾದಾಗ ಹೈಯರ್ ಸೆಕೆಂಡರಿ ಹಾಗೂ 1972ರಲ್ಲಿ 12ನೇ ತರಗತಿ ಆರಂಭವಾದಾಗ ಜೂನಿಯರ್ ಕಾಲೇಜು ಆಗಿ ಪರಿವರ್ತನೆಗೊಂಡಿತು. 1975ರಲ್ಲಿ ಸರಕಾರಕ್ಕೆ ವಹಿಸಿಕೊಡುವ ತನಕ ಬೋರ್ಡ್‌ನ ಅಧೀನ ದಲ್ಲೇ ಇದ್ದ ಹಿನ್ನೆಲೆಯಲ್ಲಿ ಬೋರ್ಡ್ ಹೈಸ್ಕೂಲ್ ಹೆಸರಿನಲ್ಲೇ ಈ ಶಾಲೆ ಹೆಸರು ಗಳಿಸಿತು.
ಈ ಹಿಂದೆಯೇ ಜಿಲ್ಲಾಧಿಕಾರಿ ಸಹಿತ ಎಲ್ಲ ಹಂತದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಹಾಸ್ಟೆಲ್ ಸನಿಹದ ಮೂಲಕ ಮೈದಾನಕ್ಕೆ ಸಂಪರ್ಕ ರಸ್ತೆ ಕಲ್ಪಿಸಲು ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆ ಸಂಪರ್ಕ ದಾರಿ ವ್ಯವಸ್ಥೆ ಅಂತಿಮ ಹಂತದಲ್ಲಿದೆ. ಮುಂದೆ ಧರೆಯಲ್ಲಿನ ದಾರಿ ಮುಚ್ಚಲಾಗುವುದು. ತಾಲೂಕು ಕ್ರೀಡಾಂಗಣಕ್ಕೆ ಹೊಸ ಜಾಗ ಹುಡುಕಾಟ ನಡೆಯುತ್ತಿದ್ದು, ಆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕೊಂಬೆಟ್ಟು ಮೈದಾನ ಕೊಂಬೆಟ್ಟು ಶಾಲಾ ಸುಪರ್ದಿಗೆ ಬರಲಿದೆ. ಈ ಧರೆಯ ಸನಿಹದಲ್ಲಿ ಶಾಲಾ ತರಗತಿ ಕಟ್ಟಡ ಇದ್ದು, ಕಟ್ಟಡದ ಸುರಕ್ಷತೆಯ ದೃಷ್ಟಿಯಿಂದ ತಡೆಗೋಡೆ ಸಹಿತ ಸುರಕ್ಷಾ ಕ್ರಮ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದೆ. -ಸುರೇಶ್, ಪ್ರಾಂಶುಪಾಲರು, ಕೊಂಬೆಟ್ಟು ವಿದ್ಯಾಸಂಸ್ಥೆ
– ಕಿರಣ್ ಪ್ರಸಾದ್ ಕುಂಡಡ್ಕ