Advertisement

ಕೊಂಬೆಟ್ಟು ಪ್ರೌಢಶಾಲೆ: ಕೊಠಡಿಯಲ್ಲಿ ಬಿರುಕು, ಧರೆ ಕುಸಿತದ ಭೀತಿ

11:22 PM Dec 21, 2019 | Team Udayavani |

ಪುತ್ತೂರು: ಶತಮಾನದ ಇತಿಹಾಸ ಹೊಂದಿರುವ ಪುತ್ತೂರಿನ ಪ್ರಥಮ ಬೋರ್ಡ್‌ ಹೈಸ್ಕೂಲ್‌, ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಕೊಂಬೆಟ್ಟು ಸರಕಾರಿ ಪ್ರೌಢಶಾಲೆ ಒಂದಷ್ಟು ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಅನುದಾನದ ನಿರೀಕ್ಷೆಯಲ್ಲಿದೆ. ಶಾಲೆಯ ಒಂದು ಭಾಗದ ಕಟ್ಟಡದಲ್ಲಿ ಬಿರುಕು ಉಂಟಾಗಿದ್ದು, ಈ ಕಟ್ಟಡದ ನಾಲ್ಕು ಕೊಠಡಿಗಳ ಪೈಕಿ ಎರಡರಲ್ಲಿ ಪಾಠ, ಪ್ರವಚನಗಳನ್ನು ಮಾಡುವುದನ್ನು ನಿಲ್ಲಿಸಲಾಗಿದೆ. ಬಿರುಕು ಬಿಟ್ಟು ಅಪಾಯಕಾರಿಯಾಗಿರುವ ಎರಡು ಕೊಠಡಿಗಳನ್ನು ತೆಗೆಯುವಂತೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಪರಿಶೀಲನೆ ನಡೆಸಿ ತಿಳಿಸಿದ್ದಾರೆ.

Advertisement

654 ವಿದ್ಯಾರ್ಥಿಗಳು
ಸ. ಪ.ಪೂ. ವಿಭಾಗವನ್ನೂ ಹೊಂದಿರುವ ಇಲ್ಲಿ ಪ್ರೌಢಶಾಲೆಯಲ್ಲೇ ಸುಮಾರು 654 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈಗ ಪಾಠ ಪ್ರವಚನಗಳು ನಡೆಯುವ ಒಂದು ಕಟ್ಟಡದಲ್ಲಿ ಬಿರುಕು ಉಂಟಾಗಿರುವುದು ಕೊರತೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಕಟ್ಟಡವನ್ನು ನಿರ್ಮಿಸಲು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.

ಸೌಕರ್ಯದ ಯೋಜನೆ
ಶಾಲೆಯಲ್ಲಿ ಒಂದಷ್ಟು ಮೂಲ ಸೌಕರ್ಯಗಳನ್ನು ಮಾಡಿ ಕೊಳ್ಳುವ ನಿಟ್ಟಿನಲ್ಲಿ ಶಾಸಕ ಸಂಜೀವ ಮಠಂದೂರು ಮೂಲಕ ಎಂಆರ್‌ಪಿಎಲ್‌ ಸಂಸ್ಥೆಯ 1 ಕೋಟಿ ರೂ. ಸಿಎಸ್‌ಆರ್‌ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗಿದೆ. ಇದರಲ್ಲಿ ಬಿರುಕು ಬಿಟ್ಟ ಕೊಠಡಿಗೆ ಪರ್ಯಾಯವಾಗಿ 10 ಕೊಠಡಿಗಳ ಕಟ್ಟಡ ರಚನೆ, ಸಭಾಂಗಣ ನಿರ್ಮಾಣ, ಶೌಚಾಲಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಶೌಚಾಲಯಕ್ಕೆ ಶಾಸಕರು ಈಗಾಗಲೇ 10 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿದ್ದಾರೆ.

ಧರೆ ಕುಸಿತದ ಭೀತಿ
ಶಾಲಾ ಕೆಳ ಭಾಗದಲ್ಲಿ ತಾಲೂಕು ಕ್ರೀಡಾಂಗಣವಿದ್ದು, ಇದರ ಮಧ್ಯೆ ಇರುವ ಬೃಹತ್‌ ಧರೆ ನಿರಂತರ ಕುಸಿತಕ್ಕೆ ಒಳಗಾಗಿ ಅಪಾಯದ ಭೀತಿ ಇದೆ. ಶಾಲಾ ವ್ಯಾಪ್ತಿಯಲ್ಲಿದ್ದ ಕ್ರೀಡಾಂಗಣವನ್ನು ತಾಲೂಕು ಕ್ರೀಡಾಂಗಣ ವ್ಯಾಪ್ತಿಗೆ ಕೆಲವು ವರ್ಷಗಳ ಹಿಂದೆ ನೀಡಲಾಗಿದ್ದು, ಕ್ರೀಡಾಂಗಣ ವಿಸ್ತರಣೆಯ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ, ನೇರವಾಗಿ ಧರೆಯನ್ನು ಕೆತ್ತಲಾಗಿದೆ. ಹೀಗಾಗಿ, ಮಳೆಗಾಲದಲ್ಲಿ ಕುಸಿತ ಉಂಟಾಗುತ್ತಲೇ ಇದೆ. ಇದು ಮುಂದುವರಿದಲ್ಲಿ ಮೇಲ್ಭಾಗದಲ್ಲಿರುವ ಶಾಲಾ ಕಟ್ಟಡವೂ ಕುಸಿಯುವ ಭೀತಿ ಇದೆ. ಮಕ್ಕಳಿಗೂ ಅಪಾಯವಿದೆ.

ಈ ಹಿನ್ನೆಲೆಯಲ್ಲಿ ಶಾಲೆಯಿಂದ ಪ್ರಾಕೃತಿಕ ವಿಕೋಪದಡಿ ಪುತ್ತೂರು ಸಹಾಯಕ ಆಯುಕ್ತರು, ತಾ.ಪಂ. ಹಾಗೂ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಪ್ರಾಕೃತಿಕ ವಿಕೋಪದಡಿ ಶಾಲಾ ಕಟ್ಟಡದ ಅಗತ್ಯಗಳಿಗೆ ಮಾತ್ರ ಅನುದಾನ ಸಿಗುತ್ತದೆ ಎನ್ನುವ ಉತ್ತರ ಶಾಲೆಯವರಿಗೆ ಲಭಿಸಿದೆ. ಹಾಲಿ ಪ್ರತ್ಯೇಕ ತಾಲೂಕು ಕ್ರೀಡಾಂಗಣ ನಿರ್ಮಿಸುವ ಪ್ರಕ್ರಿಯೆಗಳು ಚಾಲ್ತಿಯಲ್ಲಿರುವುದರಿಂದ ಈ ಕ್ರೀಡಾಂಗಣ ಶಾಲೆಗೆ, ಸಾರ್ವಜನಿಕ ಬಳಕೆಗೆ ಉಳಿಕೆಯಾದರೆ ಅನುದಾನ ತರಿಸಿಕೊಂಡು ಧರೆ ಕುಸಿತಕ್ಕೆ ತಡೆ ನಿರ್ಮಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ.

Advertisement

ಶೀಘ್ರ ಪರಿಹಾರ ಅಗತ್ಯ
ಶಾಲಾ ಹೊಸ ಕೊಠಡಿ ನಿರ್ಮಾಣ ಸಹಿತ ಕೆಲವು ಆವಶ್ಯಕ ಸೌಕರ್ಯಗಳಿಗಾಗಿ ಶಾಸಕರ ಮೂಲಕ ಎಂಆರ್‌ಪಿಎಲ್‌ ಸಂಸ್ಥೆಗೆ ಅನುದಾನಕ್ಕೆ ಮನವಿ ಮಾಡಿದ್ದೇವೆ. ಧರೆ ಕುಸಿತದ ತೊಂದರೆಗೂ ಶೀಘ್ರ ಪರಿಹಾರ ಕಂಡುಕೊಳ್ಳಬೇಕಾಗಿದೆ.
– ಪಿ.ಜಿ.ಜಗನ್ನಿವಾಸ್‌ ರಾವ್‌, ಎಸ್‌ಡಿಎಂಸಿ ಕಾರ್ಯಾಧ್ಯಕ್ಷ

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next