ಹೊನ್ನಾವರ: ಕರ್ಕಿ ಯಕ್ಷಗಾನ ಪರಂಪರೆಯ ಅಗ್ರಮಾನ್ಯ ಕಲಾವಿದ ಮತ್ತು ಉತ್ತರ ಕನ್ನಡ ಸಭಾಹಿತಮಟ್ಟಿನ ಸಮರ್ಥ ಪ್ರತಿನಿಧಿ ದಿ. ಪಿ. ವಿ. ಹಾಸ್ಯಗಾರ, ಕರ್ಕಿ ಇವರ ನೆನಪಿನಲ್ಲಿ ಕೊಡ ಮಾಡುವ 2018ರ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ಡಾ. ಕೋಳ್ಯೂರು ರಾಮಚಂದ್ರರಾಯರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ 50,001 ರೂಪಾಯಿ ಮತ್ತು ಇತರ ಪ್ರಶಸ್ತಿ ಫಲಕ ಒಳಗೊಂಡಿದೆ.
ನವೆಂಬರ್ 18 ರಂದು ಮಧ್ಯಾಹ್ನ 4.00 ಗಂಟೆಗೆ ಹೊನ್ನಾವರದ (ಕರ್ಕಿನಾಕಾ) ಹವ್ಯಕ ಸಭಾಭವನದಲ್ಲಿ ನಡೆಯಲಿರುವ ಪಿ. ವಿ. ಹಾಸ್ಯಗಾರರ ವಾರ್ಷಿಕ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನಗಳು ನಡೆಯಲಿವೆ. ಪ್ರತಿ ವರ್ಷದಂತೆ ಯಕ್ಷಗಾನ ಸಂಶೋಧನಾ ಕೇಂದ್ರ, ಕುಮಟಾ, ಕಡತೋಕ ಕೃಷ್ಣ ಭಾಗವತ, ಪಿ. ವಿ. ಹಾಸ್ಯಗಾರ ಸಂಸ್ಮರಣ ವೇದಿಕೆ, ಹೆಬ್ಳೇಕೆರಿ (ಕಡತೋಕ) , ಯಕ್ಷರಂಗ ಪತ್ರಿಕಾ ಬಳಗ, ಹಳದೀಪುರ, ಸಿರಿಕಲಾಮೇಳ, ಬೆಂಗಳೂರು ಮತ್ತು ಪಿ. ವಿ. ಹಾಸ್ಯಗಾರ ಕುಟುಂಬದವರ ಸಹಕಾರದೊಂದಿಗೆ ನಡೆಯಲಿರುವ ಸಮಾರಂಭವನ್ನುಪಿವಿ. ಹಾಸ್ಯಗಾರರ ಯಕ್ಷಶಿಷ್ಯ ಬಳಗದವರು ಈವರ್ಷವೂ ಹಮ್ಮಿಕೊಂಡಿದ್ದಾರೆ.
ಹಿರಿಯ ಯಕ್ಷಗಾನ ಕಲಾವಿದ ಶ್ರೀಜಲವಳ್ಳಿ ವೆಂಕಟೇಶ ರಾವ್ ಅಧ್ಯಕ್ಷತೆ ವಹಿಸಲಿರುವರು. ನಿವೃತ್ತ ಮುಖ್ಯಾಧ್ಯಾಪಕ ಅರುಣ ಉಭಯಕರ ಸಮಾರಂಭದ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಶ್ರೀಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆಯವರಿಂದ “ಖಾಂಡವದಹನ” ಯಕ್ಷಗಾನ (ಕರ್ಕಿಮೇಳದಲ್ಲಿ ಹಿಂದೆ ಪ್ರದರ್ಶನಗೊಳ್ಳುತ್ತಿದ್ದ ಅಪರೂಪದ ಹಳೆಯಪ್ರಸಂಗ) ಇದೆ ಎಂದು ಕುಮಟಾದ ಯಕ್ಷಗಾನ ಸಂಶೋಧನಾ ಕೇಂದ್ರದ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀಕೋಳ್ಯೂರು ಮತ್ತು ಅವರ ಗುರು ಕೀರ್ತಿಶೇಷ ಕುರಿಯ ವಿಟ್ಠಲಶಾಸ್ತ್ರಿಯವರ 1950ರ ದಶಕದಲ್ಲಿನ ಕರ್ಕಿಮೇಳದ ಹಿರಿಯ ಪರಮಯ್ಯ ಹಾಸ್ಯಗಾರರ ಜೊತೆಗಿನ ನಿಕಟ ಯಕ್ಷಗಾನ ಸಂಬಂಧ ಇಲ್ಲಿ ಸ್ಮರಣೀಯ. ಆಮೇಲೆ 1980ರ ದಶಕದ ಕೊನೆಯವರೆಗೂ ಕೋಳ್ಯೂರರು ಕರ್ಕಿಮೇಳದಲ್ಲಿ ಆಗಾಗ ಅತಿಥಿ ಕಲಾವಿದರಾಗಿ ಅನೇಕ ಪ್ರದರ್ಶಗಳಲ್ಲಿ ಪಾಲ್ಗೊಂಡರು ಎನ್ನುವುದು ಈಗ ಇತಿಹಾಸ.