ಚೆನ್ನೈ: ಲೋಕೇಶ್ ಕನಕರಾಜ್ – ರಜಿನಿಕಾಂತ್ ಕಾಂಬಿನೇಷನ್ ನ ʼಕೂಲಿʼ ಸಿನಿಮಾ ದೊಡ್ಡ ನಿರೀಕ್ಷೆಯನ್ನು ಮೂಡಿಸಿದೆ. ಇತ್ತೀಚೆಗೆ ರಿಲೀಸ್ ಆದ ಟೈಟಲ್ ಟೀಸರ್ ನಿಂದ ಸಿನಿಮಾದ ಮೇಲಿದ್ದ ನಿರೀಕ್ಷೆ ದುಪ್ಟಾಟಾಗಿದೆ.
ʼಕೂಲಿʼ ಟೀಸರ್ ನೋಡಿ 70-80 ರ ದಶಕದ ರಜಿನಿ ಫ್ಯಾನ್ಸ್ ಗಳು ಖುಷ್ ಆಗಿದ್ದಾರೆ. ಆದರೆ ಈ ಮಧ್ಯೆ ಸಿನಿಮಾ ತಂಡಕ್ಕೆ ಕಾಪಿ ರೈಟ್ಸ್ ಸಂಕಷ್ಟ ಕಾಡಿದೆ. ಸಂಗೀತ ಲೋಕದ ದಿಗ್ಗಜ ಇಳಯರಾಜ ಅವರು ಚಿತ್ರತಂಡಕ್ಕೆ ಕಾಪಿ ರೈಟ್ಸ್ ನೋಟಿಸ್ ಕಳುಹಿಸಿದ್ದಾರೆ.
ಏನಿದು ವಿವಾದ: ʼಕೂಲಿʼ ಟೈಟಲ್ ಟೀಸರ್ ನಲ್ಲಿ ರಜಿನಿಕಾಂತ್ ಅವರ 1983 ರಲ್ಲಿ ʼತಂಗ ಮಗನ್ʼ ಚಿತ್ರದ ‘ವಾ ವಾ ಪಕ್ಕಂ ವಾ’ ಹಾಡನ್ನು ಬಳಸಿಕೊಳ್ಳಲಾಗಿದೆ. ಈ ಹಾಡನ್ನು ಇಳಯರಾಜ ಸಂಯೋಜಿಸಿದ್ದರು.
ಹಾಡಿನ ಮೂಲ ಮಾಲೀಕರಾಗಿರುವ ಇಳಯರಾಜ ಅವರಿಂದ ಯಾವುದೇ ಔಪಚಾರಿಕ ಅನುಮತಿಯನ್ನು ತೆಗೆದುಕೊಂಡಿಲ್ಲ. 1957ರ ಹಕ್ಕುಸ್ವಾಮ್ಯ ಕಾಯಿದೆಯಡಿ ಇದನ್ನು ಅಪರಾಧವೆಂದು ಪರಿಗಣಿತವಾಗುತ್ತದೆ. ಈ ಕಾರಣದಿಂದ ಲೀಗಸ್ ನೋಟಿಸ್ ಜಾರಿ ಮಾಡಲಾಗಿದೆ.
ಇದೇ ಮೊದಲಲ್ಲ: ನಿರ್ದೇಶಕ ಲೋಕೇಶ್ ಕನಕರಾಜ್ ಅನುಮತಿಯಿಲ್ಲದೆ ಹಾಡನ್ನು ಸಿನಿಮಾದಲ್ಲಿ ಬಳಸಿರುವುದು ಇದೇ ಮೊದಲಲ್ಲ. ಈ ಹಿಂದೆ 1986 ರ ಚಲನಚಿತ್ರದ ‘ವಿಕ್ರಮ್ ವಿಕ್ರಮ್’ ಹಾಡನ್ನು 2022 ಚಿತ್ರದಲ್ಲಿ ಬಂದ ʼವಿಕ್ರಮ್ʼ ಸಿನಿಮಾದಲ್ಲಿ ಬಳಸಿದ್ದಾರೆ. ಈ ಸಮಯದಲ್ಲಿ ಅವರು ಇಳಯರಾಜ ಅವರ ಅನುಮತಿಯನ್ನು ಕೇಳಿಲ್ಲ. ಇದಲ್ಲದೆ ಲೋಕೇಶ್ ಅವರ ನಿರ್ಮಾಣದ ʼಫೈಟ್ ಕ್ಲಬ್ʼ ಸಿನಿಮಾದಲ್ಲಿ ‘ಎನ್ ಜೋಡಿ ಮಂಜ ಕುರುವಿ’ ಹಾಡನ್ನು ಅನುಮತಿಯಿಲ್ಲದೆ ಬಳಸಲಾಗಿತ್ತು.
ʼಕೂಲಿʼ ನಿರ್ಮಾಣ ಮಾಡಿರುವ ಸನ್ ಪಿಕ್ಚರ್ಸ್ ಸೂಕ್ತ ಅನುಮತಿ ಪಡೆಯಬೇಕು ಅಥವಾ ಹಾಡನ್ನು ‘ಕೂಲಿ’ಯಿಂದ ತೆಗೆದುಹಾಕಬೇಕು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ. ಒಂದು ವೇಳೆ ಇದನ್ನು ಮಾಡಲು ಸಾಧ್ಯವಾಗದಿದ್ದರೆ ಕಾನೂನು ಕ್ರಮ ಆಗುವ ಸಾಧ್ಯತೆಯಿರುತ್ತದೆ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.