Advertisement

ಕೊಲ್ಲೂರು ವಲಯಾರಣ್ಯಾಧಿಕಾರಿ ಕಚೇರಿ, ಮನೆಗಳ ಮೇಲೆ ಎಸಿಬಿ ದಾಳಿ

07:14 AM Mar 10, 2017 | |

ಕುಂದಾಪುರ (ಉಪ್ಪು³ಂದ): ಉಡುಪಿ ಭ್ರಷ್ಟಾಚಾರ ನಿಗ್ರಹ ದಳದ ನಾಲ್ಕು ತಂಡಗಳು  ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯ ವಲಯ ಅರಣ್ಯಾಧಿಕಾರಿ ಶಿವರಾಮ ಆಚಾರ್ಯ ಅವರ ಮನೆಗಳು, ಕಚೇರಿ, ವಸತಿಗೃಹ ಗುರುವಾರ ಬೆಳಗ್ಗೆ ಏಕಕಾಲದಲ್ಲಿ ದಾಳಿ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡು ಅಪಾರ ಮೊತ್ತದ ಅಕ್ರಮ ಆಸ್ತಿ ಪತ್ತೆಮಾಡಿದೆ.

Advertisement

ಶಿವರಾಮರ ಪತ್ನಿ ಸ್ಥಳೀಯ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಬೇರೆ ಆದಾಯದ ಯಾವುದೇ ಮೂಲ ಇಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ದಾಖಲೆಗಳ ಪರಿಶೀಲನೆ ಕಾರ್ಯ ಸಂಜೆಯವರೆಗೂ ಮುಂದು ವರಿದಿದೆ. ಭ್ರಷ್ಟಾಚಾರ ನಿಗ್ರಹ ದಳದ ಅಧೀಕ್ಷಕ ಎಸ್‌.ಎಲ್‌. ಚನ್ನಬಸಪ್ಪ ನಿರ್ದೇಶನದಲ್ಲಿ ಉಡುಪಿ ಡಿವೈಎಸ್ಪಿ ಅರುಣ್‌ ಕುಮಾರ್‌, ನಿರೀಕ್ಷಕರಾದ ಸತೀಶ್‌, ರಂಗನಾಥ್‌, ಬ್ರಿಜೇಶ್‌, ಕೃಷ್ಣಮೂರ್ತಿ, ರಮೇಶ್‌, ರಾಘ ವೇಂದ್ರ ಸೇರಿದಂತೆ ಒಟ್ಟು 30 ಮಂದಿಯ ತಂಡ ಈ ದಾಳಿ ನಡೆಸಿದೆ. ಅರಣ್ಯಾಧಿಧಿಕಾರಿ ಶಿವರಾಮ ಅಚಾರ್ಯ ಅವರ ಮೇಲೆ ಅಕ್ರಮ ಸಂಪತ್ತು ಹೊಂದಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದಅಧಿಕಾರಿಗಳು ದಾಖಲೆ ಗಳನ್ನು ಪರಿಶೀಲನೆ ನಡೆಸಿದರು. ಸಂಪೂರ್ಣ ದಾಖಲೆಗಳನ್ನು ತನಿಖೆ ಮಾಡಿದ ಅನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು  ಎಂದು ಎಸ್‌ಪಿ ಚೆನ್ನಬಸವಣ್ಣ ಎಸ್‌.ಎಲ್‌. ತಿಳಿಸಿದರು.

ಎಲ್ಲೆಲ್ಲಿ  ಏನೇನು  ಸಿಕ್ಕಿದೆ?
ಎಸ್‌.ಪಿ. ಚೆನ್ನಬಸವಣ್ಣ ಎಸ್‌.ಎಲ್‌. ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ‌ ಆಜ್ರಿ, ಕೊಲ್ಲೂರು ಕಚೇರಿ, ಕಿರಿಮಂಜೇಶ್ವರ ಹಾಗೂ ಕಂಬದಕೋಣೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪದ ಮನೆ ಮೇಲೆ ಹೀಗೆ ಒಟ್ಟು  5 ಕಡೆಗಳಲ್ಲಿ ದಾಳಿ ನಡೆಸಿ ವಿವಿಧ ದಾಖಲೆಗಳನ್ನು ವಶಪಡಿಸಿಕೊಂಡರು.

ದಾಖಲೆಗಳನ್ನು ಪರಿಶೀಲಿಸಿದಾಗ ಶಿವರಾಮ ಆಚಾರ್ಯರಿಗೆ ಸಂಬಂಧಿಸಿದ ನಾಗೂರಿಯಲ್ಲಿ 10 ಸೆಂಟ್ಸ್‌ ಜಾಗ, ಅರ್ಜಿಯಲ್ಲಿ 27 ಸೆಂಟ್ಸ್‌ ಜಾಗ ಮತ್ತು ಎರಡು ವಾಣಿಜ್ಯ ಸಂಕೀರ್ಣಗಳು, 10 ಬ್ಯಾಂಕ್‌ ಖಾತೆಗಳು, ಸುಮಾರು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕಂಬದಕೋಣೆಯಲ್ಲಿ 60 ಲ.ರೂ. ಮನೆ, ಮನೆಯಲ್ಲಿ 2.5 ಲಕ್ಷ ರೂ. ಮತ್ತು ಕಚೇರಿಯಲ್ಲಿ 3.70 ಲಕ್ಷ ರೂ. ನಗದು, ಸ್ವಿಫ್ಟ್ ಮತ್ತು ಮಾರುತಿ 800 ಕಾರುಗಳು ಕಿರಿಮಂಜೇಶ್ವರದ ಅತ್ತೆಯ ಮನೆಯಲ್ಲಿ 3 ಲ.ರೂ. ಪತ್ತೆಯಾಗಿದೆ.

ಡೈರಿ, ಡೈರಿ…..
ದಾಳಿ ನಡೆಸಿದ ಸಂದರ್ಭದಲ್ಲಿ  ಎಸಿಬಿ ತಂಡದ ಅಧಿಕಾರಿಗಳಿಗೆ ಶಿವರಾಮ ಆಚಾರ್ಯ ಅವರ ಮನೆಗಳಲ್ಲಿ ಹಣಕಾಸು ವ್ಯವಹಾರದ ಹಲವಾರು ಡೈರಿಗಳು ದೊರಕಿದ್ದು  ಇದರಲ್ಲಿ ಹಣಕಾಸು ವಹಿವಾಟು ನಡೆಸಿರುವ ಕುರಿತು ಮಾಹಿತಿಗಳಿದ್ದು ಇದನ್ನು ಪರಿಶೀಲಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next