Advertisement

ಕೊಲ್ಲೂರು: ದಿನೇ ದಿನೆ ಹೆಚ್ಚುತ್ತಿದೆ‌ ಟ್ರಾಫಿಕ್‌ ಜಾಮ್‌ ಕಿರಿಕಿರಿ…

05:15 PM May 15, 2024 | Team Udayavani |

ಕೊಲ್ಲೂರು: ದಕ್ಷಿಣ ಭಾರತದ ಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲ ಪರಿಸರದಲ್ಲಿ ವಾಹನ ನಿಲುಗಡೆ ಹಾಗೂ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ಬಹುತೇಕ ದಿನಗಳಲ್ಲಿ ಟ್ರಾಫಿಕ್‌ ಜಾಮ್‌
ನಿಂದಾಗಿ ಯಾತ್ರಾರ್ಥಿಗಳು ಹಾಗೂ ಗ್ರಾಮಸ್ಥರು ಕಿರಿಕಿರಿ ಅನುಭವಿಸುತ್ತಿದ್ದಾರೆ.

Advertisement

ತೀರ್ಥ ಕ್ಷೇತ್ರಗಳಲ್ಲಿ ದಿನೇದಿನೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದಂತೆ ವಾಹನ ನಿಲುಗಡೆ ಹಾಗೂ ಸಂಚಾರ ವ್ಯವಸ್ಥೆ ಕೂಡ ಅಸ್ತವ್ಯಸ್ತಗೊಳ್ಳುವುದು ಸಹಜ. ಆದರೆ ಅದಕ್ಕೊಂದು ಪರ್ಯಾಯ ವ್ಯವಸ್ಥೆ ಒದಗಿಸುವುದು ದೇಗುಲ ಆಡಳಿತ ವ್ಯವಸ್ಥೆಯ ಜವಾಬ್ದಾರಿಯಾಗಿದ್ದು, ಪೊಲೀಸ್‌ ಇಲಾಖೆ ಕೂಡ ಕೈಜೋಡಿಸಬೇಕಾದ ಅಗತ್ಯತೆ ಇದೆ. ಈ ದಿಸೆಯಲ್ಲಿ ಮಲ್ಟಿ ಲೆವೆಲ್‌ ಪಾರ್ಕಿಂಗ್‌ ವ್ಯವಸ್ಥೆ ಕಂಡುಕೊಂಡಲ್ಲಿ ಎದುರಾಗುವ ಟ್ರಾಫಿಕ್‌ ಜಾಮ್‌ಗೊಂದು ಶಾಶ್ವತ ಪರಿಹಾರ ಒದಗಿಸಬಹುದಾಗಿದೆ.

ಕಮಿಷನರ್‌ ಕಚೇರಿಯಲ್ಲಿ ಧೂಳು ಹಿಡಿದ ಕಡತಗಳು

ಆಡಳಿತ ಮಂಡಳಿ, ಗ್ರಾ.ಪಂ., ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಿರ್ಣಯ ಕೈಗೊಂಡು ಬಹುಮಹಡಿ ವಾಹನ ನಿಲ್ದಾಣದ ಅಗತ್ಯತೆಯ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಮೂಲಕ ಸಚಿವರು ಹಾಗೂ ಇಲಾಖೆಯ ಕಮೀಷನರ್‌ ಅವರಿಗೆ ಮನವಿ ಕಳುಹಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿತ್ತು. ಒಂದು ಹಂತದಲ್ಲಿ ದೇಗುಲದ ಸನಿಹ ಬಳಕೆಯಲ್ಲಿರುವ ವಾಹನ ನಿಲುಗಡೆ ಜಾಗವನ್ನು ಮಲ್ಟಿಲೆವೆಲ್‌ ಪಾರ್ಕಿಂಗ್‌ ವ್ಯವಸ್ಥೆಗಾಗಿ ಬಳಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು.

ಕೋಟ್ಯಂತರ ರೂ. ವೆಚ್ಚದ ಕಾಮಗಾರಿಯ ಈ ವ್ಯವಸ್ಥೆಯಿಂದ ಏಕಕಾಲದಲ್ಲಿ ಕನಿಷ್ಠ 300ರಿಂದ 400 ವಾಹನಗಳನ್ನು ನಿಲುಗಡೆಗೊಳಿಸಲು ಸಾಧ್ಯವೆಂದು ಅಂದಾಜಿಸಲಾಗಿದೆ. ಆದರೆ ಪ್ರಕ್ರಿಯೆಗೆ ಚಾಲನೆ ನೀಡದ ಕಾರಣ ಕಡತಗಳು ಬೆಂಗಳೂರಿನಲ್ಲಿರುವ ಕಮಿಷನರ್‌ ಕಚೇರಿಯಲ್ಲಿ ಉಳಿದಿದೆ.

Advertisement

ಗಗನ ಕುಸುಮವಾದ ಬೈಪಾಸ್‌ ರಸ್ತೆ ಬಳಕೆ
ಮಾರಿಗುಡಿಯಿಂದ ಎಡಕ್ಕೆ ಸಾಗುವ ರಸ್ತೆಯ ಮೂಲಕ ರಿಂಗ್‌ ರೋಡ್‌ ಮಾದರಿಯಲ್ಲಿ ಬೈಪಾಸ್‌ ರಸ್ತೆ ನಿರ್ಮಿಸಿ ಲಲಿತಾಂಬಿಕಾ ಗೆಸ್ಟ್‌ ಹೌಸ್‌ ತನಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಮಾರ್ಗೋಪಾಯ ಗುರುತಿಸಲಾಗಿದ್ದರೂ, ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಟ್ರಾಫಿಕ್‌ ಜಾಮ್‌ ಗೊಂದಲ ನಿತ್ಯ ನಿರಂತರವಾಗಿ ಮುಂದುವರಿಯುತ್ತಿದೆ.

ಸಾವಿರಾರು ಭಕ್ತರು
ಕರ್ನಾಟಕ ಸಹಿತ ವಿವಿಧ ರಾಜ್ಯಗಳಿಂದ ಪ್ರತಿದಿನ ಕನಿಷ್ಠ 8ರಿಂದ 10 ಸಾವಿರ ಭಕ್ತರು ಶ್ರೀ ದೇವಿ ದರ್ಶನಕ್ಕೆ ಕೊಲ್ಲೂರಿಗೆ ಆಗಮಿಸುತ್ತಾರೆ. ಮಳೆಗಾಲದಲ್ಲಿ ಒಂದಿಷ್ಟು ಭಕ್ತರ ಸಂಖ್ಯೆ ಕಡಿಮೆಯಾದೀತು. ಆದರೆ ಮಿಕ್ಕುಳಿದ ಋತುಗಳಲ್ಲಿ ದಾಖಲೆಯ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ವಾಹನ ಸಂಚಾರ ನಿಲುಗಡೆ ಗೊಂದಲ ನಿವಾರಿಸಲು ಶಾಶ್ವತ ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ರೂಪಿಸಿ, ಅನುಷ್ಠಾನಗೊಳಿಸತಕ್ಕದ್ದು. ವ್ಯವಸ್ಥೆಗಳಿಗೆ ಅನುಕೂಲಕರವಾದ ವಾತಾವರಣವಿದ್ದರೂ
ಇಚ್ಛಾಶಕ್ತಿಯ ಕೊರತೆಯಿಂದ ಪರ್ಯಾಯ ವ್ಯವಸ್ಥೆ ರೂಪಿಸುವಲ್ಲಿ ವಿಫಲವಾಗುತ್ತಿದೆಯೇ ಎಂಬ ಪ್ರಶ್ನೆ ಗ್ರಾಮಸ್ಥರು ಹಾಗೂ ಭಕ್ತರನ್ನು ಕಾಡುತ್ತಿದೆ.

ವಿಸ್ತರಣೆಗೊಂಡ ರಸ್ತೆ: ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಒಂದೆಡೆ ಮುಖ್ಯ ರಸ್ತೆಯ ಸಂಪೂರ್ಣ ಡಾಮರೀಕರಣವಾಗಿರುವುದು ಗ್ರಾಮಸ್ಥರಿಗೆ ಖುಷಿಕೊಟ್ಟರೆ ಇನ್ನೊಂದೆಡೆ ವಿಸ್ತರಣೆಗೊಂಡ ರಸ್ತೆಯ ಇಕ್ಕೆಲಗಳ ಬಹುತೇಕ ಕಡೆ ಗಂಟೆಗಟ್ಟಲೇ ವಾಹನ ನಿಲುಗಡೆಗೊಳಿಸುತ್ತಿರುವ ಯಾತ್ರಾರ್ಥಿಗಳ ಅಸಹಕಾರ ಮತ್ತೆ ಕಿರಿಕಿರಿ ಉಂಟುಮಾಡಿದ್ದು, ಸುಗಮ ವಾಹನ ಸಂಚಾರಕ್ಕೆ ತಡೆ ಒಡ್ಡಿದ್ದು, ಪ್ರತಿದಿನ ಟ್ರಾಫಿಕ್‌ ಜಾಮ್‌ ಕಂಡುಬರುತ್ತಿದೆ.

ಅನುಮತಿಗಾಗಿ ಕಾಯುತ್ತಿದ್ದೇವೆ
ಕೊಲ್ಲೂರಿನಲ್ಲಿ ಏಕಕಾಲದಲ್ಲಿ ನೂರಾರು ವಾಹನ ನಿಲುಗಡೆಗೆ ಮಲ್ಟಿಲೆವೆಲ್‌ ಪಾರ್ಕಿಂಗ್‌ ವ್ಯವಸ್ಥೆಗಾಗಿ ಅಂದಾಜು ವೆಚ್ಚ ಸುಮಾರು 60 ಕೋಟಿ ರೂ. ನ ನೀಲಿನಕ್ಷೆ ಧಾರ್ಮಿಕ ದತ್ತಿ ಇಲಾಖೆ ಕಮಿಷನರ್‌ ಅವರಿಗೆ ಕಳುಹಿಸಲಾಗಿದೆ. ಅನುಮತಿಗಾಗಿ ಕಾಯುತ್ತಿದ್ದೇವೆ.
* ಪ್ರಶಾಂತ ಕುಮಾರ್‌ ಶೆಟ್ಟಿ,
ಕಾರ್ಯನಿರ್ವಹಣಾಧಿಕಾರಿಗಳು, ಕೊಲ್ಲೂರು ಶ್ರೀಮೂಕಾಂಬಿಕಾ ದೇಗುಲ

*ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next