ಕೊಲ್ಲೂರು: ಇಲ್ಲಿ ಸೇವೆಯಲ್ಲಿರುವ ಪೊಲೀಸರ ಬಹು ವರ್ಷದ ನಿರೀಕ್ಷೆಯಾದ ವಸತಿ ಗೃಹ ನಿರ್ಮಾಣ ಕಾರ್ಯ ಇನ್ನೂ ಕೈಗೂಡಿಲ್ಲ. ಇದರಿಂದ ಪೊಲೀಸರು ಖಾಸಗಿ ವಸತಿ ಗೃಹಗಳನ್ನೇ ನೆಚ್ಚಿಕೊಳ್ಳುವಂತಾಗಿದೆ.
ಗಡಿರೇಖೆ ಗೊಂದಲ
ಶ್ರೀ ಮೂಕಾಂಬಿಕಾ ಅಭಯಾರಣ್ಯದ ಭಾಗ ದೇಗುಲದ ಸನಿಹದವರೆಗೆ ಚಾಚಿದೆ. ಅದೇ ರೀತಿ ಕಂದಾಯ ಇಲಾಖೆಯ ಜಾಗವೂ ಒಂದು ಕಡೆಯವರೆಗೆ ಗಡಿ ಹೊಂದಿದೆ. ಇಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ನಡುವಿನ ಗಡಿ ರೇಖೆ ಗೊಂದಲ ಉದ್ದೇಶಿತ ವಸತಿ ಗೃಹ ನಿರ್ಮಾಣಕ್ಕೆ ಸಮಸ್ಯೆಯಾಗಿದೆ.
ಇಲಾಖೆಗಳಿಗೆ ಮನವಿ
ವಾಸ್ತವ್ಯಕ್ಕಾಗಿ ವಸತಿ ಗೃಹ ಅಗತ್ಯವಿದ್ದು, ಇದಕ್ಕಾಗಿ ಪೊಲೀಸ್ ಅಧಿಕಾರಿಗಳು ಕಂದಾಯ ಹಾಗೂ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರೂ, ಇನ್ನೂ ಇಲಾಖೆಗಳು ಪ್ರತಿಕ್ರಿಯೆ ನೀಡಿಲ್ಲ. ಕೊಲ್ಲೂರಿಗೆ ಹಿಂದಿನ ಗೃಹ ಸಚಿವರು ಆಗಮಿಸಿದ್ದ ವೇಳೆ ಪೊಲೀಸರು ಲಿಖೀತ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಗತಿಯಾಗಿಲ್ಲ.
ಬೇರೆ ಜಾಗ ಕೊಡಿ
ಹಲವು ವರ್ಷಗಳಾದರೂ ಕಟ್ಟಡ ನಿರ್ಮಿಸಲು ಆಗಿಲ್ಲ. ಆದ್ದರಿಂದ ಇಲ್ಲಿನ ಕಲ್ಯಾಣಿ ಗುಡ್ಡೆಯಲ್ಲಿ ಜಾಗವನ್ನು ನೀಡುವಂತೆ ಪೊಲೀಸರು ಒತ್ತಾಯಿಸಿದ್ದಾರೆ.
ಪೊಲೀಸರ ಪಾಡು
ಇಲ್ಲಿ ವಾಸವಾಗಿರುವ ಅನೇಕ ಪೊಲೀಸರು ಕುಟುಂಬದೊಡನೆ ದುಬಾರಿ ಬೆಲೆ ತೆತ್ತು ಖಾಸಗಿ ವಸತಿ ಗೃಹ ಹಾಗೂ ಬಾಡಿಗೆ ಮನೆಗಳಲ್ಲಿ ವಾಸವಾಗಿರುವುದು ಅನಿವಾರ್ಯವಾಗಿದೆ. ಇದರೊಂದಿಗೆ ಮಕ್ಕಳ ವಿದ್ಯಾಭ್ಯಾಸ, ಮನೆ ಖರ್ಚು ಇತ್ಯಾದಿ ಲೆಕ್ಕ ಹಾಕಿದರೆ ಕೈಯಲ್ಲೇನೂ ಉಳಿಯುತ್ತಿಲ್ಲ ಎನ್ನುವುದು ಪೊಲೀಸರ ಅಳಲು.
– ಡಾ| ಸುಧಾಕರ ನಂಬಿಯಾರ್