ಕೊಲ್ಲೂರು: ಕೇರಳದ ಕಾಸರಗೋಡು ಶಾರದಾ ನಗರದ ಹಣಂಗೋಡಿನ ದಂಪತಿ ತಮ್ಮ ಮಕ್ಕಳೊಂದಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಜೂ. 4ರಂದು ಶ್ರೀ ದೇವಿಯ ದರ್ಶನಕ್ಕೆಂದು ಆಗಮಿಸಿದ ಸಂದರ್ಭ ಅವರ ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟಿದ್ದ ಚಿಕ್ಕ ಪರ್ಸ್‌ನಲ್ಲಿದ್ದ ಹದಿಮೂರೂವರೆ ಪವನ್ ಚಿನ್ನಾಭರಣ ಕಳವು ಆದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಜೂ. 4ರಂದು ಸುರತ್ಕಲ್‌ನಲ್ಲಿರುವ ತಮ್ಮ ಬಾಡಿಗೆ ಮನೆಯಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನಕ್ಕೆ ಹೊರಟಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಪ್ರವೀಣ ಹಾಗೂ ವಾಣಿಶ್ರೀ ದಂಪತಿ ಚಿನ್ನಾಭರಣಗಳನ್ನು ಚಿಕ್ಕ ಪರ್ಸ್‌ನಲ್ಲಿ ಹಾಕಿ ವ್ಯಾನಿಟಿ ಬ್ಯಾಗ್‌ನಲ್ಲಿ ಜೋಪಾನವಾಗಿಟ್ಟುಕೊಂಡು ಶ್ರೀದೇವಿಯ ದರ್ಶನಕ್ಕೆ ಬಂದಿದ್ದರು.
ದರ್ಶನ ಮುಗಿಸಿ ದೇಗುಲದ ಹೊರಗಡೆ ಬಂದ ವಾಣಿಶ್ರೀ ಅವರು ವ್ಯಾನಿಟಿ ಬ್ಯಾಗ್ ತೆರೆದಿರುವುದನ್ನು ಗಮನಿಸಿ ನೋಡಿದಾಗ ಚಿನ್ನಾಭರ ಣಗಳಿದ್ದ ಚಿಕ್ಕ ಪರ್ಸ್ ಕಾಣೆಯಾಗಿತ್ತು.
ಪರ್ಸ್‌ನಲ್ಲಿ ಇದ್ದ ಏಳೂವರೆ ಪವನ್ ಚಿನ್ನದ ಚೈನ್, ಒಂದೂವರೆ ಪವನ್‌ನ ಎರಡು ಚಿನ್ನದ ಬಳೆ, ಒಂದೂವರೆ ಪವನ್ ತೂಕದ ಒಂದು ಚಿನ್ನದ ಚೈನ್, ಅರ್ಧ ಪವನ್ ಒಂದು ಚಿನ್ನದ ಬಳೆ, ಒಂದು ಪವನ್ ತೂಕದ ನಾಲ್ಕು ಜತೆ ಕಿವಿಯೋಲೆ ಸಹಿತ ಒಟ್ಟು ಹದಿಮೂರೂವರೆ ಪವನ್ ಚಿನ್ನಾಭರಣ ಕಾಣೆಯಾಗಿದ್ದು, ಅದರ ಒಟ್ಟು ಮೌಲ್ಯ 4.75 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಕೊಲ್ಲೂರು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.