Advertisement

ಅನೌನ್ಸ್‌ ಮಾಡದಿದ್ರೆ ಹೆಚ್ಚು ಜನ ಸತ್ತೋಗ್‌ ಬುಡೋರು

10:15 AM Dec 16, 2018 | Team Udayavani |

ಮೈಸೂರು: “ಪ್ರಸಾದ ತಿಂದವರು ಆಸ್ಪತ್ರೆಗೆ ಹೋಗುವಂತೆ ಮೈಕ್‌ನಲ್ಲಿ ಅನೌನ್ಸ್‌ ಮಾಡದಿದ್ರೆ, ಇನ್ನೂ ಹೆಚ್ಚು ಜನ ಸತ್ತೋಗ್‌ ಬುಡ್ತಿದ್ರು ಸ್ವಾಮಿ’ ಎಂದು ಭಯ ತುಂಬಿದ ಧ್ವನಿಯಲ್ಲೇ ಘಟನೆಯನ್ನು ವಿವರಿಸಿದರು ರೇವಮ್ಮ.
ಚಾಮರಾಜನಗರ ಜಿಲ್ಲೆ ಹನೂರಿನ ಸುಳುವಾಡಿಯ ಕಿಚ್‌ಗುತ್‌ ಮಾರಮ್ಮನ ದೇವಾಲಯದಲ್ಲಿ ವಿಷಮಿಶ್ರಿತ ಪ್ರಸಾದ ತಿಂದು ಮೃತಪಟ್ಟ ಘಟನೆಯ ಪ್ರತ್ಯಕ್ಷದರ್ಶಿ ಇವರು.

Advertisement

ಶುಕ್ರವಾರ ಬೆಳಗ್ಗೆ ಮಾರಮ್ಮನ ದೇಗುಲದ ಗೋಪುರ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಮಾರಂಭವಿದ್ದರಿಂದ ನೆರೆದಿದ್ದ ಭಕ್ತರಿಗೆ ಪ್ರಸಾದವಾಗಿ ವೆಜಿಟೇಬಲ್‌ ಬಾತ್‌ ಮತ್ತು ಪಂಚಾಮೃತ ನೀಡಲಾಗಿತ್ತು. ಬಾತ್‌ ತಿನ್ನದೆ ಪಂಚಾಮೃತ ಕುಡಿದು ಹೋದವರಿಗೆ ಏನೂ ಆಗಲಿಲ್ಲ. ಬಾತ್‌ನ್ನು ಬಾಯಿಯ ಹತ್ತಿರ ತೆಗೆದುಕೊಂಡು ಹೋದಾಗಲೇ ಕೆಟ್ಟ ವಾಸನೆ ಬರುತ್ತಿತ್ತು. ಆದರೆ, ದೇವರ ಪ್ರಸಾದದ ವಾಸನೆ, ರುಚಿಯನ್ನೆಲ್ಲಾ ನೋಡಬಾರದೆಂಬ ಭಕ್ತಿಯ ಕಾರಣಕ್ಕೆ ವಾಸನೆ ಇದ್ದರೂ ಬಾತ್‌ ತಿನ್ನಲು ಕೆಲವರು ಮುಂದಾದರು. ಆದರೆ, ಕೆಲವರಿಗೆ ಒಂದೆರಡು ತುತ್ತನ್ನೂ ತಿನ್ನಲಾಗಲಿಲ್ಲ. ಬಾತ್‌ ತಿಂದ ಒಬ್ಬ ಹುಡುಗ ಅಲ್ಲೇ ವಾಂತಿ ಮಾಡಿಕೊಂಡು ಅಸ್ವಸ್ಥನಾದ. ಇನ್ನು ಕೆಲವರು ವಾಸನೆಯಿಂದ ತಿನ್ನಲಾಗದೆ ಎಲೆಯಲ್ಲಿದ್ದ ಬಾತ್‌ನ್ನು ಎಸೆದರು.ಎಸೆದ ಬಾತ್‌ ತಿಂದ ಕಾಗೆಗಳೂ ಅಲ್ಲೇ ಒದ್ದಾಡಿ ಜೀವ ಬಿಡುತ್ತಿದ್ದುದನ್ನು ಕಂಡವರು ಏನೋ ಅಚಾತುರ್ಯ ಸಂಭವಿಸಿದೆ ಎಂದು ಕೂಡಲೇ ದೇವಸ್ಥಾನದ ಮೈಕ್‌ನಲ್ಲಿ ಪ್ರಸಾದದಲ್ಲಿ ಏನೋ ಬೆರೆತಿದೆ. ಪ್ರಸಾದ ತಿಂದವರೆಲ್ಲಾ ಆಸ್ಪತ್ರೆಗೆ ಹೋಗಿ ಎಂದು ಅನೌನ್ಸ್‌ ಮಾಡಿದರು. ಆ ವೇಳೆಗೆ ಮನೆಗೆ ಹೋಗಿದ್ದವರೆಲ್ಲಾ ಆಸ್ಪತ್ರೆಗೆ ದೌಡಾಯಿಸಿದರು. ಇಲ್ಲಾ ಅಂದಿದ್ರೆ ಇನ್ನೂ ಎಷ್ಟು ಜನ ಸಾಯೋರೋ ಬುದ್ದಿ ಎಂದು ಅಳಲು ತೋಡಿಕೊಂಡರು ಅವರು. 

ನಾನು ಬಾತ್‌ ತಿನ್ನಲಿಲ್ಲ. ನನ್ನ ಮಕ್ಕಳು ಬಾತ್‌ ತಿನ್ನಲು ಎಲೆಯಲ್ಲಿ ಹಾಕಿಸಿಕೊಂಡು ಬಂದಿದ್ದರು. ಆದರೆ ಕೆಟ್ಟ ವಾಸನೆ ಬಂದಿದ್ದರಿಂದ ತಿನ್ನಲಾಗದೆ ಕೆಳಗೆ ಹಾಕಿದ್ರು. ಅಷ್ಟೊತ್ತಿಗೆ ಮೈಕ್‌ನಲ್ಲಿ ಅನೌನ್ಸ್‌ಮಾಡಿದ್ರು. ಬಾತ್‌  ತಿಂದವರೆಲ್ಲಾ ಆಸ್ಪತ್ರೆಗೆ ಬಂದ್ರು.
 ರೇವಮ್ಮ, ಘಟನೆಯ ಪ್ರತ್ಯಕ್ಷದರ್ಶಿ

ದೇವಸ್ಥಾನದಲ್ಲಿ ಗುದ್ದಲಿ ಪೂಜೆ ಇದ್ದಿದ್ದರಿಂದ ನಾನು, ನನ್ನ ಹೆಂಡತಿ, ನನ್ನ ಅಕ್ಕ ಮೂವರೂ ಹೋಗಿದ್ದೆವು. ಪ್ರತಿ ವರ್ಷವೂ ನಾವು ದೇವಸ್ಥಾನಕ್ಕೆ ಹೋಗುತ್ತಿದ್ದೆವು. ಆದರೆ, ಯಾವಾಗಲೂ ಪ್ರಸಾದ ಅಥವಾ ಏನನ್ನೂ ಕೊಡುತ್ತಿರಲಿಲ್ಲ. ಶುಕ್ರವಾರ ಗೋಪುರದ ಶಂಕುಸ್ಥಾಪನೆ ಇದ್ದಿದ್ದರಿಂದ ದೇವಸ್ಥಾನಕ್ಕೆ ಹೋಗಿ ಪ್ರಸಾದ ತಿಂದೆವು. ದಾರಿ ಮಧ್ಯೆ ಬರುವಾಗ ವಾಂತಿ ಆಯ್ತು. ಈಗ ಸ್ವಲ್ಪ ಪರವಾಗಿಲ್ಲ.
ರಾಜು, ಘಟನೆಯಲ್ಲಿ ಅಸ್ವಸ್ಥಗೊಂಡು, ಕೆ.ಆರ್‌.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ


ಅರ್ಚಕರ ನಡುವಿನ ಕಲಹ ಕಾರಣವೇ?
ಹನೂರು
: ಘಟನೆಗೆ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಅರ್ಚಕರ ನಡುವಿನ ಭಿನ್ನಾಭಿಪ್ರಾಯವೇ ಕಾರಣವಾಗಿರಬಹುದೆಂಬ ಬಲವಾದ ಶಂಕೆಯೂ ವ್ಯಕ್ತವಾಗಿದೆ. ಸುಳ್ವಾಡಿ ಗ್ರಾಮದ ಮತ್ತೂಂದು ದೇವಾಲಯವಾದ ಬ್ರಹೆಶ್ವರ ದೇವಾಲಯದ ಅರ್ಚಕರಾಗಿ ತಮಿಳುನಾಡಿನ ಬರಗೂರಿನವರು ಕೆಲಸ ನಿರ್ವಹಿಸುತ್ತಿದ್ದಾರೆ. ಈ ಅರ್ಚಕರೇ ಈ ಹಿಂದೆ ಕಿಚ್‌ಗುತ್‌ ಮಾರಮ್ಮನ ದೇವಾಲಯದಲ್ಲೂ ಪೂಜಾ ಕೆಲಸಗಳನ್ನು ನಿರ್ವಹಿಸು ತ್ತಿದ್ದರು.

Advertisement

ಆದರೆ, ನಮ್ಮೂರಿನ ದೇವಾಲಯಕ್ಕೆ ಸ್ಥಳೀಯರೇ ಅರ್ಚಕರಿರಲಿ ಎಂದು ಗ್ರಾಮಸ್ಥರು ಬ್ರಹೆಶ್ವರ ದೇವಾಲಯದ ಅರ್ಚಕರನ್ನು ಇಲ್ಲಿ ಪೂಜೆ ನಿರ್ವಹಿಸಬೇಡಿ ಎಂದು ತಡೆಯೊಡ್ಡಿದ್ದರು. ಈ ಸಂಬಂಧ ನ್ಯಾಯಾಲಯಕ್ಕೂ ಮೊರೆ ಹೋಗಲಾಗಿತ್ತು. ಕಳೆದ 10 ವರ್ಷದಿಂದ ಪೂಜಾ ಕೈಂಕರ್ಯಗಳನ್ನು ನೆರವೇರಿಸಲು ಧೂಮಾದಪ್ಪ ಎಂಬ ಸ್ಥಳೀಯ ಅರ್ಚಕರನ್ನು ನೇಮಿಸಲಾಗಿತ್ತು. ಬಳಿಕ, ದೇವಾಲಯ ಪ್ರಸಿದ್ಧಿ ಪಡೆದು ಭಕ್ತಾದಿಗಳು ಹೆಚ್ಚಾದಂತೆಲ್ಲಾ ಬ್ರಹ್ಮಶ್ವರ ದೇವಾಲಯದ ಅರ್ಚಕರು, ಮಾರಮ್ಮ ದೇವಾಲಯದಲ್ಲಿ ಮತ್ತೆ ಪೂಜೆ ನೆರವೇರಿಸಲು ಅವಕಾಶ ಕಲ್ಪಿಸಿಕೊಡುವಂತೆ ಒತ್ತಡ ಹಾಕುತ್ತಿದ್ದರು. ಇದೀಗ ಬ್ರಹ್ಮಶ್ವರ ದೇವಾಲಯದ ಅರ್ಚಕರು ತಮಿಳುನಾಡಿನ ಬರಗೂರಿನಲ್ಲಿ ವಾಸವಾಗಿದ್ದು, ಬ್ರಹ್ಮಶ್ವರ ದೇವಾಲಯಕ್ಕೆ ನಿಗದಿಯಂತೆ ಬಂದು ಪೂಜೆ ಸಲ್ಲಿಸುತ್ತಿದ್ದರು. ಇದರಿಂದ ವಿಷಾಹಾರ ಪ್ರಕರಣಕ್ಕೆ ಅರ್ಚಕರಲ್ಲಿದ್ದ ಅಸಮಾಧಾನ ಕಾರಣವಾಯಿತೇ ಎಂಬ ಸಂಶಯವೂ ವ್ಯಕ್ತವಾಗಿದೆ.

ಮಾಹಿತಿ ಲಭ್ಯವಿಲ್ಲ
ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಇನ್ನೂ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ ಎಂದು ಜಿಲ್ಲಾ ಎಸ್‌ಪಿ
ಧರ್ಮೇಂದರ್‌ಕುಮಾರ್‌ ಮೀನಾ ಹೇಳಿದ್ದಾರೆ. ಸದ್ಯ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಇದುವರೆಗೂ
ಯಾವುದೇ ಸುಳಿವು ದೊರೆತಿಲ್ಲ. ಕೆಲ ಮಾಹಿತಿಗಳು ಲಭ್ಯವಾಗಿವೆ. ಇದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಆಹಾರದ ಮಾದರಿಯನ್ನು ಮೈಸೂರಿನ ಫೋರೆನ್ಸಿಕ್‌ ಸೈನ್ಸ್‌ ಲ್ಯಾಬ್‌ಗ ಕಳುಹಿಸಿಕೊಡಲಾಗಿದ್ದು ಭಾನುವಾರ ವರದಿ ಬರುವ ನಿರೀಕ್ಷೆಯಿದೆ. ಶವಪರೀಕ್ಷೆ ವರದಿ ಸಹ ಭಾನುವಾರ ದೊರಕಲಿದ್ದು, ಬಳಿಕವಷ್ಟೇ ಮಹತ್ವದ ಸುಳಿವು ದೊರಕುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. 

ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಖಚಿತವಾದ ಮಾಹಿತಿಗಳಿನ್ನೂ ಲಭ್ಯವಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಆಹಾರದ ಮಾದರಿಯನ್ನು ಮೈಸೂರಿನ ಫೋರೆನ್ಸಿಕ್‌ ಸೈನ್ಸ್‌ ಲ್ಯಾಬ್‌ ಗೆ ಕಳುಹಿಸಲಾಗಿದ್ದು, ಭಾನುವಾರ ವರದಿ ಬರುವ ನಿರೀಕ್ಷೆಯಿದೆ. ಶನಿವಾರ ನಡೆಸಿರುವ ಶವಪರೀಕ್ಷೆ ವರದಿ ಸಹ
ಭಾನುವಾರ ದೊರಕಲಿದೆ. ಆಗ ಪ್ರಕರಣದ ಬಗ್ಗೆ ಮತ್ತಷ್ಟು ಮಹತ್ವದ ಸುಳಿವು ದೊರಕುವ ಸಾಧ್ಯತೆಯಿದೆ.
ಧರ್ಮೇಂದರ್‌ ಕುಮಾರ್‌ ಮೀನಾ,ಚಾಮರಾಜನಗರ ಎಸ್‌ಪಿ

 ಗಿರೀಶ್ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next