ಕೊಳ್ಳೇಗಾಲ: ವಿಜ್ಞಾನಕ್ಕೆ ಸೆಡ್ಡು ಹೊಡೆಯುವ ಐತಿಹಾಸಿಕ ಸೀಗ ಮಾರಮ್ಮ ನರಬಲಿ ಹಬ್ಬ ಭಾರೀ ಜನಸ್ತೋಮದೊಂದಿಗೆ ತಾಲ್ಲೂಕಿನ ಪಾಳ್ಯಗ್ರಾಮದಲ್ಲಿ ನಡೆಯಿತು.
ಸೋಮವಾರ ರಾತ್ರಿ 12.30 ರ ಸಮಯದಲ್ಲಿ ಗ್ರಾಮದ ಸೀಗ ಮಾರಮ್ಮನ ದೇವಾಲಯದಲ್ಲಿ ಬಲಿ ಬಿದ್ದ ಕುರಿ ಸೀಗ ನಾಯ್ಕ್ ರನ್ನು ನೋಡಲು ವಿವಿಧೆಡೆಗಳಿಂದ ಸಾಗರೋಪಾದಿಯಲ್ಲಿ ಜನ ಜಮಾವಣೆಗೊಂಡು ಮಳೆ ಲೆಕ್ಕಿಸದೆ ವೀಕ್ಷಣೆ ಮಾಡಿದರು.
ಮಂಗಳವಾರ ಮುಂಜಾನೆ 4 ಗಂಟೆಗೆ ಬಲಿ ಬಿದ್ದ ವ್ಯಕ್ತಿಯನ್ನು ಪಂಚವಾದ್ಯ ಮತ್ತು ಕಂದಾಯ ಚಾಮರಗಳೊಂದಿಗ ಹೊತ್ತು ಗ್ರಾಮದ ಮತ್ತೊಂದು ದೇವಾಲಯವಾದ ಮಾರಿಗುಡಿ ಮುಂಭಾಗ ಬಲಿ ಬಿದ್ದ ವ್ಯಕ್ತಿಯನ್ನು ಸಾರ್ವಜನಿಕರ ವೀಕ್ಷಣೆ ಅವಕಾಶ ಕಲ್ಪಿಸುತ್ತಿದ್ದಂತೆ ಭಕ್ತರು ನೂಕುನುಗ್ಗಲಿನಲ್ಲಿ ಹರಿದು ಬಂದು ವೀಕ್ಷಣೆ ಮಾಡಿದರು.
ನಂತರ ಅರ್ಚಕರಾದ ಉಮೇಶ ಮತ್ತು ಕೆಂಪಣ್ಣ ಬಲಿಯ ಮೇಲೆ ತೀರ್ಥ ಹಾಕುವ ಮೂಲಕ ಕಣ್ಣು ತೆರೆಸಿ ವಿಜ್ಞಾನಕ್ಕೆ ಸೆಡ್ಡು ಹೊಡೆದು ಮರಳಿ ಪ್ರಾಣ ಬರುವಂತೆ ಮಾಡಿದರು.
ದೇವಾಲಯದ ಅವರಣದಲ್ಲಿ ಬಲಿ ಬಿದ್ದ ವ್ಯಕ್ತಿಯ ಕಣ್ಣು ತೆರೆಸುವ ದೃಶ್ಯವನ್ನು ವೀಕ್ಷಿಸಲು ಜನರು ಮುಗಿಬಿದ್ದರು. ನರಬಲಿ ಹಬ್ಬ ವೀಕ್ಷಣೆಗೆ ಹರಿದು ಬಂದ ಜನಸಾಗರವನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಕಳೆದ 2003ರಲ್ಲಿ ನಡೆದಿದ್ದ ನರಬಲಿ ಹಬ್ಬವು 19 ವರ್ಷದ ಬಳಿಕ ಗ್ರಾಮದಲ್ಲಿ ವಾಸಿಸುವ 16 ಸಮಾಜದ ಮುಖಂಡರು ಅಯೋಜನೆ ಮಾಡಿದ್ದಾರೆ. 22 ದಿನದ ಹಬ್ಬದ ನರಬಲಿ ಇಂದು ಯಶಸ್ವಿಯಾಗಿ ನಡೆಯಿತು.