Advertisement
ಪರಿಸರ ಉಳಿಸಿಕೊಳ್ಳಬೇಕಾದರೆ ಪ್ರಮುಖವಾಗಿ ಎರಡು ವಿಷಯಗಳ ಕುರಿತು ಗಮನಹರಿಸಬೇಕು. ಒಂದು ಯಥೇಚ್ಛವಾಗಿ ಮರಗಳನ್ನು ಬೆಳೆಸಬೇಕು. ಇನ್ನೊಂದು ಭೂಮಿಗೆ ಸುರಿಯುವ ಮಳೆ ನೀರಿನ ಪ್ರತಿ ಹನಿಯನ್ನು ಹಿಡಿದಿಟ್ಟುಕೊಳ್ಳಬೇಕು. ಮರಗಳನ್ನು ಬೇಕಾಬಿಟ್ಟಿ ಕಡಿದು ಬಳಸಿಕೊಂಡಿರುವ ಕೋಲಾರ ಜಿಲ್ಲೆಯ ಜನರು ಕೆರೆ ಕುಂಟೆಗಳನ್ನು ಸಮತಟ್ಟು ಮಾಡಿ ಕಟ್ಟಡಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಕೆರೆ ಕುಂಟೆ ಕಲ್ಯಾಣಿ ರಾಜಕಾಲುವೆಗಳೆಂಬ ಪೂರ್ವಿಕರ ನಿರ್ಮಾಣಗಳು ಕ್ರಮೇಣ ಕಣ್ಮರೆಯಾಗುತ್ತಿವೆ. ಇವೆಲ್ಲದರ ಪರಿಣಾಮ ಮಳೆ ಅಪರೂಪದ ಅತಿಥಿಯಾಗುತ್ತಿದೆ. ಅಂತರ್ಜಲ ಎರಡು ಸಾವಿರ ಅಡಿಗಳಿಗೆ ತಲುಪಿದೆ.
Related Articles
Advertisement
ಗ್ರಾಮೀಣ ಜನರು ತಾವಾಗಿ ಒಗ್ಗಟ್ಟಾಗಿ ನಿಂತರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಮಹಾರಾಷ್ಟ್ರದ ‘ಹಿವ್ರೆ ಬಝಾರ್’ ಎಂಬ ಹಳ್ಳಿಯ ಉದಾಹರಣೆ ನಮ್ಮೆದುರು ಇದೆ. ಬರಪೀಡಿತ ಆ ಊರಲ್ಲಿ ಜನರೆಲ್ಲ ಗುಳೆ ಎದ್ದು ಹೊರಡುತ್ತಿದ್ದಾಗ ಒಂದು ಪುಟ್ಟ ಗ್ರಾಮದಲ್ಲಿ ಜಲಕ್ರಾಂತಿ ಸಂಭವಿಸಿತು. ಅಲ್ಲಿ ಇಂದು ಐವತ್ತಕ್ಕೂ ಹೆಚ್ಚು ಜನರು ಕೃಷಿ ಮತ್ತು ಡೇರಿ ಕೆಲಸ ಮಾಡುತ್ತಲೇ ದಶಲಕ್ಷಾಧೀಶರಾಗಿದ್ದಾರೆ. ಅಲ್ಲೇನೂ ಯಾರೂ ದೊಡ್ಡ ಅಣೆಕಟ್ಟು ಕಟ್ಟಿಲ್ಲ ಅಥವಾ ಮೋಡಬಿತ್ತನೆ ಮಾಡಲಿಲ್ಲ. ಸುರಿದಷ್ಟು ಮಳೆಯನ್ನೇ ಹಿಡಿದು ನಿಲ್ಲಿಸಿದರು ಅಷ್ಟೆ.
ಇದೇ ಮಾದರಿ: ಅದನ್ನೇ ಮಾದರಿಯಾಗಿ ಇಟ್ಟುಕೊಂಡು ಮಹಾರಾಷ್ಟ್ರದ ‘ಪಾನಿ ಫೌಂಡೇಶನ್ ಸಂಸ್ಥೆ’ ಜಗತ್ತಿನ ಗಮನ ಸೆಳೆಯುವಷ್ಟು ಅಚ್ಚರಿಯ ಕೆಲಸವನ್ನು ಮಾಡುತ್ತಿದೆ. ಮಳೆನೀರನ್ನು ಹಿಡಿದಿಡುವ ‘ವಾಟರ್ ಕಪ್ ಸ್ಪರ್ಧೆ’ಯನ್ನು ನಾಲ್ಕು ವರ್ಷಗಳ ಹಿಂದೆ ಅದು ಮೂರು ತಾಲೂಕುಗಳ 116 ಹಳ್ಳಿಗಳಲ್ಲಿ ಆರಂಭಿಸಿತು. ಕೋಲಾರ ಜಿಲ್ಲೆಯ ಅಂತರಗಂಗೆ ಬೆಟ್ಟ ಸೇರಿದಂತೆ ಖಾಲಿ ಇರುವ ಸರ್ಕಾರಿ ಭೂಮಿ, ಅರಣ್ಯ ಪ್ರದೇಶ, ಖಾಸಗಿ ಭೂಮಿಯಲ್ಲಿ ಇಂತ ಕ್ರಾಂತಿಕಾರಕ ಕೆಲಸವಾದರೆ ಜಿಲ್ಲೆಯಲ್ಲಿ ಪ್ರತಿ ವರ್ಷ ಸುರಿಯುವ 750 ಮಿ.ಮೀ ಮಳೆಯಲ್ಲಿಯೇ ಪರಿಸರ ಕಾಪಾಡಿಕೊಳ್ಳಲು ಸಾಧ್ಯವೆನ್ನುತ್ತಾರೆ ಜಲತಜ್ಞರು. ಇದಕ್ಕಾಗಿ ಜನರು ಮನಸ್ಸು ಮಾಡಬೇಕಷ್ಟೆ.