ಕೊಲ್ಕತ್ತಾ: ಹೆತ್ತ ತಾಯಿಯೇ ತಾನು ಜನ್ಮ ನೀಡಿದ ಹಸುಗೂಸನ್ನು ಕಿಟಕಿಯಿಂದ ಎಸೆದು ಕೊಂದ ಭೀಭತ್ಸ ಘಟನೆ ಕೋಲ್ಕತ್ತಾದ ಕಸ್ಬಾ ಪ್ರದೇಶದಲ್ಲಿ ನಡೆದಿದೆ.
ಘಟನೆ ಕಳೆದ ಶನಿವಾರ ನಡೆದಿದ್ದು, ಮನೆಯ ಶೌಚಾಲಯಕ್ಕೆ ಹೋದ ವೇಳೆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು ಈ ವೇಳೆ ಮಗು ಅಳಲು ಪ್ರಾರಂಭಿಸಿದೆ ಇದರಿಂದ ಗಾಬರಿಗೊಂಡ ಮಹಿಳೆ ಮಗುವನ್ನು ಶೌಚಾಲಯದ ಕಿಟಕಿ ಗಾಜನ್ನು ಒಡೆದು ಹೊರಗೆ ಎಸೆದಿದ್ದಾಳೆ, ಕಿಟಕಿ ಗಾಜು ಒಡೆದ ಸದ್ದು ಕೇಳಿದ ಸ್ಥಳೀಯರು ಸ್ಥಳಕ್ಕೆ ಬಂದು ನೋಡಿದಾಗ ಕಿಟಕಿ ಬಳಿ ಹಸುಗೂಸು ಅಳುತ್ತಿರುವುದು ಕಂಡಿದ್ದಾರೆ ಗಾಬರಿಗೊಂಡ ಸಾರ್ವಜನಿಕರು ಕೂಡಲೇ ಕಸ್ಬಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ ಆಗತಾನೆ ಹುಟ್ಟಿದ ಹಸುಗೂಸು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗುವನ್ನು ಹಾಗೂ ಶೌಚಾಲಯದಲ್ಲಿ ನಿತ್ರಾಣಗೊಂಡಿದ್ದ ಮಹಿಳೆಯನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಹಸುಗೂಸು ಚಿಕಿತ್ಸೆ ಫಲಿಸದೆ ರವಿವಾರ ಮೃತಪಟ್ಟಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹೆರಿಗೆಯಿಂದ ನಿತ್ರಾಣಗೊಂಡ ಮಹಿಳೆ ಅರೋಗ್ಯ ಸುಧಾರಿಸುತ್ತಿದ್ದು ಪೊಲೀಸರು ವಿಚಾರಣೆ ನಡೆಸಿದ ವೇಳೆ ಮಹಿಳೆ ತನಗೆ ಕೆಲವು ತಿಂಗಳುಗಳಿಂದ ಋತುಚಕ್ರ ಸರಿಯಾದ ಸಮಯದಲ್ಲಿ ಆಗುತ್ತಿತ್ತು ಅಲ್ಲದೆ ಗರ್ಭಿಣಿಯಾಗಿರುವ ವಿಚಾರವೇ ನನಗೆ ತಿಳಿದಿರಲ್ಲಿಲ್ಲ ಮನೆಯಲ್ಲಿ ಆರೋಗ್ಯವಾಗಿದ್ದ ನಾನು ಶೌಚಾಲಯಕ್ಕೆ ಹೋದ ವೇಳೆ ಹೆರಿಗೆಯಾಗಿದೆ ಈ ವೇಳೆ ಮಗು ಅಳಲು ಪ್ರಾರಂಭಿಸಿದಾಗ ಏನು ಮಾಡುವುದೆಂದು ತೋಚದೆ ಕಿಟಕಿಯ ಗಾಜು ಒಡೆದು ಮಗುವನ್ನು ಹೊರಗೆ ಎಸೆದೆ ಎಂದು ಹೇಳಿದ್ದಾಳೆ. ಅಲ್ಲದೆ ಮಹಿಳೆ ತಾನು ಕಳೆದ ನವೆಂಬರ್ ತಿಂಗಳಲ್ಲಿ ಮದುವೆಯಾಗಿದ್ದು, ಪತಿ ವಿಪರೀತ ಮದ್ಯವ್ಯಸನಿಯಾಗಿದ್ದು ಇದರಿಂದ ನಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಘಟನೆ ಕುರಿತು ಪತಿ ಹಾಗೂ ಮನೆಯವರು ಪತ್ನಿ ಗರ್ಭಿಣಿಯಾಗಿರುವ ವಿಚಾರಣೆ ನಮಗೆ ಯಾರಿಗೂ ಗೊತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಸದ್ಯ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ ಆ ಬಳಿಕವೇ ನಿಜಾಂಶ ಗೊತ್ತಾಗಬೇಕಿದೆ ಎಂದಿದ್ದಾರೆ.