ಕೋಲ್ಕತಾ:ಡಿಸೆಂಬರ್ 8ರಿಂದ ಒಂದು ವೇಳೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ಇದ್ದರೆ ಪೆಟ್ರೋಲ್ ಬಂಕ್ ನಲ್ಲಿ ಅವರಿಗೆ ಪೆಟ್ರೋಲ್ ಇಲ್ಲ…ಇದು ಕೋಲ್ಕತಾ ಪೊಲೀಸರು ನೂತನವಾಗಿ ಜಾರಿಗೆ ತಂದ ಆದೇಶವಾಗಿದೆ ಎಂದು ವರದಿ ತಿಳಿಸಿದೆ.
ದ್ವಿಚಕ್ರ ವಾಹನ ಸವಾರರ ಸುರಕ್ಷತೆ ದೃಷ್ಟಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೋಲ್ಕತಾ ಪೊಲೀಸ್ ಕಮಿಷನರ್ ಅಂಜು ಶರ್ಮಾ ತಿಳಿಸಿದ್ದು, ಒಂದು ವೇಳೆ ದ್ವಿಚಕ್ರ ವಾಹನದ ಹಿಂಬದಿ ಸವಾರ ಕೂಡಾ ಹೆಲ್ಮೆಟ್ ಧರಿಸದೇ ಪೆಟ್ರೋಲ್ ಬಂಕ್ ಗೆ ಆಗಮಿಸಿದರೂ ಕೂಡಾ ಈ ಕಾನೂನು ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಹೆಲ್ಮೆಟ್ ಧರಿಸದೇ ಯಾವುದೇ ದ್ವಿಚಕ್ರ ವಾಹನ ಸವಾರರು ಕೋಲ್ಕತಾ ಪೊಲೀಸ್ ಸರಹದ್ದಿನೊಳಗಿರುವ ಪೆಟ್ರೋಲ್ ಬಂಕ್ ಗೆ ಆಗಮಿಸಿದಲ್ಲಿ ಅವರಿಗೆ ಪೆಟ್ರೋಲ್ ಇಲ್ಲ. ಅಷ್ಟೇ ಅಲ್ಲ ಹಿಂಬದಿ ಸವಾರನಿಗೂ ಹೆಲ್ಮೆಟ್ ಕಡ್ಡಾಯ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿರುವುದಾಗಿ ವರದಿ ಹೇಳಿದೆ.
ಈ ಆದೇಶ ಡಿಸೆಂಬರ್ 8ರಿಂದ 2021ರ ಫೆಬ್ರುವರಿ2ರವರೆಗೆ ಜಾರಿಯಲ್ಲಿರಲಿದೆ. ಆರ್ಥಿಕವಾಗಿ ಹೆಲ್ಮೆಟ್ ಖರೀದಿಸಲು ಅಸಾಧ್ಯವಾಗಿರುವವರಿಗೆ ಸರ್ಕಾರವೇ ಹೆಲ್ಮೆಟ್ ನೀಡಲಿದೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಇದನ್ನೂ ಓದಿ:ರೈತರ ಪ್ರತಿಭಟನೆ ಕುರಿತ ಹೇಳಿಕೆ: ಕೆನಡಾ ನೇತೃತ್ವದ ಕೋವಿಡ್ 19 ಸಭೆಗೆ ಭಾರತ ಗೈರು
ಹೆಲ್ಮೆಟ್ ಧರಿಸಿ ಬೈಕ್ ಓಡಿಸಿ. ಮಾಸ್ಕ್ ಧರಿಸದಿದ್ದರೆ 2000 ಸಾವಿರ ರೂಪಾಯಿ ದಂಡ ಕಟ್ಟಿ ಎಂದು ಹೇಳುವ ಸರ್ಕಾರದಂತೆ ನಾನು ನಡೆದುಕೊಳ್ಳಲ್ಲ. ಎಲ್ಲರೂ ಮಾಸ್ಕ್ ಧರಿಸಿ ಎಂಬುದಾಗಿ ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.