Advertisement

ಐಪಿಎಲ್‌: ಉಮೇಶ್‌, ರಸೆಲ್‌ ಹೊಡತಕ್ಕೆ ತತ್ತರಿಸಿದ ಪಂಜಾಬ್‌ ಕಿಂಗ್ಸ್‌

11:03 PM Apr 01, 2022 | Team Udayavani |

ಮುಂಬೈ: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಭರ್ಜರಿ ಯಶಸ್ಸು ಕಂಡ ಕೋಲ್ಕತ ನೈಟ್‌ ರೈಡರ್ಸ್‌ ತಂಡ ಶುಕ್ರವಾರ ರಾತ್ರಿಯ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿತು. ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ 18.2 ಓವರ್‌ಗಳಲ್ಲಿ 137 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿಯಿತು. ಇದನ್ನು ಬೆನ್ನತ್ತಿದ ಕೋಲ್ಕತ 14.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 141 ರನ್‌ ಗಳಿಸಿತು. ಇನ್ನೂ 33 ಎಸೆತಗಳು ಬಾಕಿಯಿರುವಂತೆಯೇ ಜಯ ಸಾಧಿಸಿತು.

Advertisement

ಸಾಮಾನ್ಯ ಗುರಿ ಬೆನ್ನತ್ತಿದ ಕೋಲ್ಕತ ಪರ ಆಂಡ್ರೆ ರಸೆಲ್‌ ಸ್ಫೋಟಕ ಬ್ಯಾಟಿಂಗ್‌ ಮಾಡಿದರು. ಅವರು 31 ಎಸೆತಗಳಲ್ಲಿ 2 ಬೌಂಡರಿ, 8 ಸಿಕ್ಸರ್‌ಗಳ ನೆರವಿನಿಂದ 70 ರನ್‌ ಸಿಡಿಸಿದರು. ಇವರೊಬ್ಬರೇ ಕೋಲ್ಕತ ಇನಿಂಗ್ಸ್‌ ಅನ್ನು ಪೂರ್ಣವಾಗಿ ಆವರಿಸಿಕೊಂಡಿದ್ದರು.

ಉಮೇಶ್‌ ಘಾತಕ ಬೌಲಿಂಗ್‌: ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬನ್ನು ಕೋಲ್ಕತ ವೇಗಿ ಉಮೇಶ್‌ ಯಾದವ್‌ ಕಟ್ಟಿ ಹಾಕಿದರು. ಅವರು 23ಕ್ಕೆ 4 ವಿಕೆಟ್‌ ಉಡಾಯಿಸಿದರು. ಈ ಪಂದ್ಯದಲ್ಲೂ ಉಮೇಶ್‌ ಅರ್ಲಿ ಬ್ರೇಕ್‌ ಒದಗಿಸುವಲ್ಲಿ ಯಶಸ್ವಿಯಾದರು. ಮೊದಲ ಓವರ್‌ನ ಅಂತಿಮ ಎಸೆತದಲ್ಲೇ ಪಂಜಾಬ್‌ ನಾಯಕ ಮಾಯಾಂಕ್‌ ಅಗರ್ವಾಲ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು. ಒಂದೇ ರನ್‌ ಮಾಡಿದ ಅಗರ್ವಾಲ್‌ ಲೆಗ್‌ ಬಿಫೋರ್‌ ಬಲೆಗೆ ಬಿದ್ದರು.

ಇದರೊಂದಿಗೆ ಉಮೇಶ್‌ ಯಾದವ್‌ ಪವರ್‌ ಪ್ಲೇ ಅವಧಿಯಲ್ಲಿ 50 ವಿಕೆಟ್‌ ಉಡಾಯಿಸಿದ 4ನೇ ಬೌಲರ್‌ ಎನಿಸಿದರು. ಜಹೀರ್‌ ಖಾನ್‌ (52), ಸಂದೀಪ್‌ ಶರ್ಮ (51) ಮತ್ತು ಭುವನೇಶ್ವರ್‌ ಕುಮಾರ್‌ (51) ಉಳಿದ ಮೂವರು.

ಸಿಡಿದು ನಿಂತ ರಾಜಪಕ್ಸ : ಶಿವಂ ಮಾವಿ ಎಸೆದ ಪಂದ್ಯದ 4ನೇ ಓವರ್‌ನಲ್ಲಿ ಬಾನುಕ ರಾಜಪಕ್ಸ ಸಿಡಿದು ನಿಂತಾಗ ಪಂಜಾಬ್‌ ರನ್‌ಗತಿ ಒಮ್ಮೆಲೇ ಏರಿತು. ಒಂದು ಬೌಂಡರಿ ಬಳಿಕ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿ ರಂಜಿಸಿದರು. ಆದರೆ 5ನೇ ಎಸೆತದಲ್ಲಿ ಮಾವಿ ಸೇಡು ತೀರಿಸಿಕೊಂಡರು. 9 ಎಸೆತಗಳ ಚುಟುಕು ಇನಿಂಗ್ಸ್‌ನಲ್ಲಿ 31 ರನ್‌ ಚಚ್ಚಿದ ಸಾಹಸ ರಾಜಪಕ್ಸ ಅವರದಾಗಿತ್ತು (3 ಬೌಂಡರಿ, 3 ಸಿಕ್ಸರ್‌). 16 ರನ್‌ ಮಾಡಿದ ಶಿಖರ್‌ ಧವನ್‌ ಅವರಿಗೆ ಟಿಮ್‌ ಸೌದಿ ಬಲೆ ಬೀಸಿದರು.

Advertisement

ಪವರ್‌ ಪ್ಲೇ ವೇಳೆ 3 ವಿಕೆಟಿಗೆ 62 ರನ್‌ ಪೇರಿಸಿದ ಪಂಜಾಬ್‌ ಉತ್ತಮ ಮೊತ್ತದ ಸೂಚನೆಯನ್ನೇ ನೀಡಿತ್ತು. ಆದರೆ ಇಲ್ಲಿಂದ ಮುಂದೆ ಕೆಕೆಆರ್‌ ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಇನ್ನಷ್ಟು ಚುರುಕುಗೊಂಡಿತು. ಉಮೇಶ್‌ ಯಾದವ್‌ ಅತ್ಯಂತ ಘಾತಕವಾಗಿ ಪರಿಣಮಿಸಿದರು. ಬಿಗ್‌ ಹಿಟ್ಟರ್‌ಗಳಾದ ಲಿಯಮ್‌ ಲಿವಿಂಗ್‌ಸ್ಟೋನ್‌ (19), ರಾಜ್‌ ಬಾವಾ (11) ಅಗ್ಗಕ್ಕೆ ಔಟಾದರು. ಸ್ಫೋಟಕ ಬ್ಯಾಟರ್‌ ಶಾರುಖ್‌ ಖಾನ್‌ ರನ್ನೇ ಗಳಿಸಲಿಲ್ಲ. ಅಲ್ಲಿಗೆ ಪಂಜಾಬ್‌ ತಂಡದ ಬೃಹತ್‌ ಮೊತ್ತದ ನಿರೀಕ್ಷೆ ಸಂಪೂರ್ಣ ಕರಗಿತು.

ಹರ್‌ಪ್ರೀತ್‌ ಬ್ರಾರ್‌ (14), ರಾಹುಲ್‌ ಚಹರ್‌ (0) ಅವರನ್ನು ಪೆವಿಲಿಯನ್ನಿಗೆ ಅಟ್ಟಿದ ಉಮೇಶ್‌ ಯಾದವ್‌ ತಮ್ಮ ವಿಕೆಟ್‌ ಬೇಟೆಯನ್ನು 4ಕ್ಕೆ ಏರಿಸಿಕೊಂಡರು. ಪಂಜಾಬ್‌ ವಿರುದ್ಧ 31 ವಿಕೆಟ್‌ ಕೆಡವಿ ದ್ವಿತೀಯ ಸ್ಥಾನಿಯಾದರು. ಅಗ್ರಸ್ಥಾನದಲ್ಲಿರುವವರು ಸುನೀಲ್‌ ನಾರಾಯಣ್‌ (32 ವಿಕೆಟ್‌). ಪಂಜಾಬ್‌ ಎದುರು ಅತ್ಯಧಿಕ 9 ಸಲ 3 ಪ್ಲಸ್‌ ವಿಕೆಟ್‌ ಕಿತ್ತ ದಾಖಲೆಯೂ ಉಮೇಶ್‌ ಯಾದವ್‌ ಅವರದಾಯಿತು.

15 ಓವರ್‌ ಮುಕ್ತಾಯಕ್ಕೆ ಪಂಜಾಬ್‌ 8ಕ್ಕೆ 102 ರನ್‌ ಗಳಿಸಿತ್ತು. ಡೆತ್‌ ಓವರ್‌ಗಳಲ್ಲಿ ಕ್ಯಾಗಿಸೊ ರಬಾಡ ಮೈಚಳಿ ಬಿಟ್ಟು ಆಡಿದ್ದರಿಂದ ಮೊತ್ತ 130ರ ಗಡಿ ದಾಟಿತು. ರಬಾಡ 16 ಎಸೆತಗಳಿಂದ 25 ರನ್‌ ಬಾರಿಸಿದರು (4 ಫೋರ್‌, 1 ಸಿಕ್ಸರ್‌).

ಸಂಕ್ಷಿಪ್ತ ಸ್ಕೋರ್‌: ಪಂಜಾಬ್‌ 18.2 ಓವರ್‌ 137/10 (ಭಾನುಕ ರಾಜಪಕ್ಸ 31, ಕ್ಯಾಗಿಸೊ ರಬಾಡ 25, ಉಮೇಶ್‌ ಯಾದವ್‌ 23ಕ್ಕೆ 4, ಟಿಮ್‌ ಸೌದಿ 36ಕ್ಕೆ 2). ಕೋಲ್ಕತ 14.3 ಓವರ್‌, 141/4 (ಆಂಡ್ರೆ ರಸೆಲ್‌ 70, ಶ್ರೇಯಸ್‌ ಐಯ್ಯರ್‌ 26, ರಾಹುಲ್‌ ಚಹರ್‌ 13ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next