Advertisement

Kolkata incident; ಸಿಬಿಐ ವರದಿ ಕಳವಳಕಾರಿ: ಸುಪ್ರೀಂ

11:09 PM Sep 17, 2024 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲ ಟ್ರೈನಿ ವೈದ್ಯೆ ಅತ್ಯಾಚಾರ-ಹತ್ಯೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ ಸಲ್ಲಿಸಿರುವ ಸ್ಥಿತಿಗತಿ ವರದಿ ಮನಸ್ಸನ್ನು ಕಲಕುವ ಹಾಗೂ ಆತಂಕಕಾರಿ ಅಂಶಗಳನ್ನು ಒಳಗೊಂಡಿದೆ ಎಂದು ಸುಪ್ರೀಂಕೋರ್ಟ್‌ ಮಂಗಳವಾರ ಹೇಳಿದೆ.

Advertisement

ಸಿಬಿಐ ತನಿಖಾ ವರದಿಯನ್ನು ಸಿಜೆಐ ಡಿ.ವೈ.ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ಪರಿಶೀಲಿಸಿದೆ. ಘಟನ ಸ್ಥಳದಿಂದ ಸಂತ್ರಸ್ತೆಯ ಒಳ ಉಡುಪಗಳನ್ನು ಮೊದಲಿಗೆ ವಶಪಡಿಸಿಕೊಂಡಿಲ್ಲ. ಹಾಗಾಗಿ ಯಾವ ದಿನಾಂಕದಲ್ಲಿ ಅವುಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂಬುದು ದೃಢಪಟ್ಟಿಲ್ಲ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಈ ಬಗ್ಗೆ ನ್ಯಾಯಪೀಠ ಆತಂಕ ವ್ಯಕ್ತಪಡಿಸಿ, ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆಯೇ ಎಂಬ ಆಯಾಮವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಅದಕ್ಕೆ ಅಗತ್ಯ ಸಮಯವನ್ನು ನೀಡಬೇಕಿದೆ ಎಂದು ನ್ಯಾಯಪೀಠ ಹೇಳಿದೆ.

ಇದೇ ವೇಳೆ  ಟ್ರೈನಿ ವೈದ್ಯೆಯ ಹೆಸರು, ಮಾಹಿತಿ ತೆಗೆದುಹಾಕುವಂತೆ ವಿಕಿಪಿಡೀಯಾಗೆ ಸುಪ್ರೀಂ ಸೂಚಿಸಿದೆ. ಜತೆಗೆ ವೈದ್ಯೆ ಹತ್ಯೆ  ಹೊಣೆ ಹೊತ್ತು ಸಿಎಂ ಮಮತಾ ರಾಜೀನಾಮೆಗೆ ನಿರ್ದೇಶನ ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಜಾ ಮಾಡಿದೆ.

ಮಮತಾ ಸರಕಾರಕ್ಕೆ ತರಾಟೆ: ರಾಜ್ಯ ಸರಕಾರವು ವೈದ್ಯರ ಸುರಕ್ಷೆಗೆ ಕೈಗೊಂಡಿರುವ ಕ್ರಮಗಳನ್ನು ನ್ಯಾಯಪೀಠ ಪರಿಶೀಲಿಸಿ ” ರಟ್ಟಿರೇರ್‌ ಸಾತಿ’ಗೆ ಗುತ್ತಿಗೆ ಭದ್ರತಾ ಸಿಬಂದಿಯನ್ನು ನೇಮಿಸಲು ಯೋಜಿಸಿದ್ದೀರಾ? ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ಅದೇ ರೀತಿ ಗುತ್ತಿಗೆ ಸಿಬಂದಿಯಾಗಿದ್ದರು. ಇದು ನಿಮ್ಮ ಗಮನದಲ್ಲಿರಲಿ ಎಂದು ಹೇಳಿದೆ. ಜತೆಗೆ ಯಾವುದೇ ಮಹಿಳೆಗೆ ರಾತ್ರಿ ಕೆಲಸ ಮಾಡಬೇಡಿ ಎಂದು ಹೇಳುವ ಹಕ್ಕು ನಿಮಗಿಲ್ಲ, ಅವರಿಗೆ ಭದ್ರತೆ ಒದಗಿಸುವುದು ನಿಮ್ಮ ಕರ್ತವ್ಯ ಎಂದು ನ್ಯಾಯಪೀಠ ಹೇಳಿದೆ.

ವಿಚಾರಣೆ ನೇರಪ್ರಸಾರ ಸ್ಥಗಿತಕ್ಕೆ ನಕಾರ

Advertisement

ಟ್ರೈನಿ ವೈದ್ಯೆ ಕೇಸಿನಲ್ಲಿ ಪ.ಬಂಗಾಲ ಸರಕಾರವನ್ನು ಪ್ರತಿನಿಧಿಸುವ ಮಹಿಳಾ ವಕೀಲರಿಗೆ ಆ್ಯಸಿಡ್‌ ದಾಳಿಯಂಥ ಬೆದರಿಕೆಗಳು ಬರುತ್ತಿವೆ. ಹಾಗಾಗಿ ವಿಚಾರಣೆಯ ನೇರ ಪ್ರಸಾರ ಮಾಡಬಾರದು ಎಂದು ವಕೀಲ ಕಪಿಲ್‌ ಸಿಬಲ್‌ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಆದರೆ ಸಿಜೆಐ ತಡೆ ನೀಡಲು ನಿರಾಕರಿಸಿದ್ದು, ನೇರಪ್ರಸಾರ ಸಾರ್ವಜನಿಕ ಹಿತಾಸಕ್ತಿಗಾಗಿ ಮಾಡುತ್ತಿರುವುದು. ವಕೀಲರಿಗೆ ಬೆದರಿಕೆ ಬಂದರೆ ನಾವು ಮಧ್ಯಪ್ರವೇಶಿಸುತ್ತೇವೆ. ಆದರೆ ನೇರಪ್ರಸಾರಕ್ಕೆ ತಡೆ ನೀಡಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next