ನವದೆಹಲಿ: ಕೋಲ್ಕತಾದ ಆರ್ ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆ(31ವರ್ಷ) ಮೇಲಿನ ಅತ್ಯಾ*ಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಸಿಬಿಐ (CBI) ತನಿಖೆ ನಡೆಸಬೇಕೆಂದು ಕೋಲ್ಕತಾ ಹೈಕೋರ್ಟ್ (Calcutta high court) ಮಂಗಳವಾರ (ಆ.13) ಆದೇಶ ನೀಡಿದ್ದು, ಈ ಮೂಲಕ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ಮುಖಭಂಗವಾದಂತಾಗಿದೆ.
ಕೋಲ್ಕತಾ(Kolkata)ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಮೇಲಿನ ಹೀನ ಕೃತ್ಯದ ಕುರಿತ ಕಾಳಜಿ ಮೇಲೆ ಕೋಲ್ಕತಾ ಹೈಕೋರ್ಟ್ ಗೆ ಹಲವಾರು ಸಾರ್ವಜನಿಕ ಹಿತಾಸಕ್ತಿ (PIL) ಅರ್ಜಿಗಳು ಸಲ್ಲಿಕೆಯಾಗಿದ್ದು, ರಾಜೀನಾಮೆ ಕೊಟ್ಟಿದ್ದ ಪ್ರಾಂಶುಪಾಲರ ಮರು ನೇಮಕದ ಬಗ್ಗೆ ಪ್ರಶ್ನಿಸಲಾಗಿತ್ತು.
ನೈತಿಕ ಹೊಣೆ ಹೊತ್ತು ಪ್ರಾಂಶುಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದ ಡಾ.ಘೋಷ್ ಅವರನ್ನು 12ಗಂಟೆಯೊಳಗೆ ಮತ್ತೊಂದು ಸರ್ಕಾರಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರನ್ನಾಗಿ ನೇಮಕ ಮಾಡಿರುವುದು ಯಾಕೆ ಎಂದು ಹೈಕೋರ್ಟ್ ಚೀಫ್ ಜಸ್ಟೀಸ್ ವಿಚಾರಣೆ ವೇಳೆ ಪ್ರಶ್ನಿಸಿದ್ದರು.
ಇಂದು ಮಧ್ಯಾಹ್ನ 3ಗಂಟೆಯೊಳಗೆ ಪ್ರಿನ್ಸಿಪಾಲ್ ತಮ್ಮ ರಜೆ ಅರ್ಜಿಯನ್ನು ಹೈಕೋರ್ಟ್(Calcutta high court)ಗೆ ಸಲ್ಲಿಕೆ ಮಾಡಬೇಕೆಂದು ನಿರ್ದೇಶನ ನೀಡಿತ್ತು. ಇಲ್ಲದಿದ್ದಲ್ಲಿ ಹುದ್ದೆಯಿಂದ ವಜಾಗೊಳಿಸುವ ಎಚ್ಚರಿಕೆ ರವಾನಿಸಿತ್ತು.
ತನಿಖೆಗೆ ಒಳಪಡಬೇಕಾದ ವ್ಯಕ್ತಿಯನ್ನು ರಕ್ಷಿಸುವ ನಿರ್ಧಾರ ತೆಗೆದುಕೊಳ್ಳುವ ಅಗತ್ಯವೇನಿತ್ತು ಎಂದು ಪಶ್ಚಿಮಬಂಗಾಳ ಪರ ಸರ್ಕಾರದ ವಕೀಲರನ್ನು ಚೀಫ್ ಜಸ್ಟೀಸ್ ಪ್ರಶ್ನಿಸಿದ್ದು, ತನಿಖೆಯಲ್ಲಿ ಡಾ.ಘೋಷ್ ಎಲ್ಲಾ ಹೇಳಿಕೆಯನ್ನು ದಾಖಲಿಸಿ, ಬಹಿರಂಗಪಡಿಸುವಂತೆ ಆದೇಶ ನೀಡಿದೆ.