ನವದೆಹಲಿ: ಸುಮಾರು 6 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್ ಪಂದ್ಯವನ್ನಾಡಲಿರುವ ವಿರಾಟ್ ಕೊಹ್ಲಿಯ ಆಟ ನೋಡಲು ದೆಹಲಿಯಲ್ಲಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಫೆ. 17ರಿಂದ ಪ್ರಾರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಭಾರೀ ಕುತೂಹಲ ಕೆರಳಿಸಿದ್ದು, ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದ ಟಿಕೆಟ್‌ಗಳು ಈಗಾಗಲೇ ಬಿಕರಿಯಾಗಿವೆ.
ಕ್ರಿಕೆಟ್ ಲೋಕದಲ್ಲಿ ಬಾರ್ಡರ್-ಗವಾಸ್ಕರ್ ಪಂದ್ಯ ತನ್ನದೇ ಆದ ಮಹತ್ವ ಹೊಂದಿದ್ದು, ಕೊಹ್ಲಿಯ ತವರಿನಂಗಳ ಎಂಬ ಕಾರಣದಿಂದಲೂ ಈ ಪಂದ್ಯ ಮಹತ್ವ ಪಡೆದುಕೊಂಡಿದೆ. ಹಾಗಾಗಿ ಈ ಪಂದ್ಯ ಐತಿಹಾಸಿಕವಾಗುವುದರಲ್ಲಿ ಎರಡು ಮಾತಿಲ್ಲ.
ಕಿಂಗ್ ಕೊಹ್ಲಿ ದೆಹಲಿಗೆ ಪ್ರಯಾಣಿಸುವ ಸಂದರ್ಭದಲ್ಲಿ ಇನ್ಸ್ಟಾಗ್ರಾಮ್ ಸ್ಟೋರಿಯೊಂದು ಭಾರೀ ವೈರಲ್ ಆಗಿತ್ತು. ಈ ಪಂದ್ಯದಿಂದಾಗಿನ ತಮ್ಮ ದೆಹಲಿ ಪ್ರಯಾಣ ಮನೆಗೆ ಹತ್ತಿರವಾಗುತ್ತಿರುವ ಭಾವ ತರಿಸುತ್ತಿದೆ ಎಂದು ಬರೆದುಕೊಂಡಿದ್ದರು.
ಅತ್ಯಂತ ಮಹತ್ವದ ಪಂದ್ಯವಷ್ಟೇ ಅಲ್ಲದೇ, ತಮ್ಮ ತವರಿನಂಗಳ ಎಂಬ ಉದ್ದೇಶದಿಂದ ಕೊಹ್ಲಿ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಅದಕ್ಕಾಗಿಯೇ ಅವರು ಎರಡು ದಿನಗಳಿಂದ ಹೆಚ್ಚುವರಿಯಾಗಿ ಬ್ಯಾಟಿಂಗ್ ಅಭ್ಯಾಸವನ್ನೂ ಮಾಡಿದ್ದಾರೆ. ಮುಖ್ಯವಾಗಿ ನೆಟ್ಸ್‌ನಲ್ಲಿ ಸ್ಪಿನ್ ದಾಳಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ.
ದೆಹಲಿಯ ಪಶ್ಚಿಮ ವಿಹಾರ ಭಾಗದಿಂದ ಕ್ರಿಕೆಟ್ ಜಗತ್ತಿಗೆ ಪರಿಚಯವಾದ ʻಚೀಕುʼ ಇಂದು ವಿಶ್ವ ಕ್ರಿಕೆಟ್‌ನ ಧ್ರುವತಾರೆಯಂತೆ ಮಿಂಚುತ್ತಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ 2017ರಲ್ಲಿ ಕೊನೆಯ ಟೆಸ್ಟ್ ಪಂದ್ಯವಾಡಿದ್ದ ವಿರಾಟ್ ಸುಮಾರು 6 ವರ್ಷಗಳ ಬಳಿಕ ಮತ್ತೆ ತಮ್ಮ ನೆಚ್ಚಿನ ಮೈದಾನದಲ್ಲಿ ಆಡಲಿದ್ದಾರೆ. ಹೀಗಾಗಿ ತಮ್ಮ 106ನೇ ಟೆಸ್ಟ್ ಪಂದ್ಯವನ್ನು ಸ್ಮರಣಿಯವನ್ನಾಗಿಸಲು ಕೊಹ್ಲಿ ಯೋಜನೆ ಹಾಕಿಕೊಂಡಂತಿದೆ.
ಮೈದಾನದಲ್ಲಿ ತಮ್ಮ ಅಭ್ಯಾಸ ಮುಗಿಸಿಕೊಂಡು ತೆರಳುತ್ತಿದ್ದ ವೇಳೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಅವರನ್ನು ಮುತ್ತಿಕೊಂಡಿದ್ದಾರೆ. ಕೊಹ್ಲಿ ಪ್ರಾಕ್ಟಿಸ್ ಮುಗಿಸಿ ಹೊರಬರುವುದನ್ನೇ ಕಾಯುತ್ತಿದ್ದ ಅಭಿಮಾನಿಗಳು ಅವರು ಬರುತ್ತಿದ್ದಂತೆ ಅವರನ್ನು ಸುತ್ತಿಕೊಂಡು ಶುಭಹಾರೈಸಿದ್ದಾರೆ. ಪ್ರಾಕ್ಟಿಸ್ ಮುಗಿಸಿಕೊಂಡು ಕಾರಿನಲ್ಲಿ ಹೊರಡುತ್ತಿರುವ ಕೊಹ್ಲಿ ಅವರ ವಿಡಿಯೋಗಳನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಅದೂ ಅಲ್ಲದೇ ಕೊಹ್ಲಿ ಅವರು ಬಂದಿದ್ದ ಪೋರ್ಷೇ ಕಂಪನಿಯ ಐಷಾರಾಮಿ ಸೂಪರ್ ಕಾರ್ ಕೂಡಾ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ:
ಮೇಲೆತ್ತುವ ಕೆಳ ಕ್ರಮಾಂಕ: ಟೆಸ್ಟ್ ತಂಡಕ್ಕೆ ಬಲ ತುಂಬುವ ಬಾಲಂಗೋಚಿಗಳು