ಕೊಲ್ಹಾರ: ಇಂದಿನ ದಿನಮಾನಗಳಲ್ಲಿ ಯುವಕರು ತಮ್ಮ ದಿನನಿತ್ಯದ ಕಾಯಕದ ಜೊತೆಗೆ ಭಕ್ತಿಮಾರ್ಗವನ್ನು ರೂಢಿಸಿಕೊಂಡು ಅಧ್ಯಾತ್ಮದ ಒಲವಿನಿಂದ ಧರ್ಮದ ದಾರಿಯಲ್ಲಿ ಸಾಗಬೇಕು ಎಂದು ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಗಣೇಶ ಯುವಕ ಮಂಡಳ ನಿರ್ಮಿಸಿರುವ ವಿಘ್ನೇಶ್ವರ ದೇವಸ್ಥಾನದ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪಣೆ ಮತ್ತು ಕಳಸಾರೋಹಣ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ನಾವು ನಂಬಿದ ದೇವರ ಮೊರೆಯಲ್ಲಿ ನಂಬಿಕೆ ಅಡಿಯಲ್ಲಿ ಸಾಗಿದಾಗ ಜ್ಞಾನೋದಯವಾಗಿ ದೇವರ ಅನುಗ್ರಹವಾಗುತ್ತದೆ. ಇದರಿಂದ ಸನ್ಮಾರ್ಗದಲ್ಲಿ ಬದುಕಲು ಸಾಧ್ಯವಾಗುತ್ತದೆ. ನಾಗರಿಕ ಸಮಾಜ ದೈವ ಭಕ್ತಿ ಕಡೆಗೆ ಹೆಚ್ಚಿನ ಒಲವನ್ನು ತೋರಿಸಬೇಕು ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, 1972ರಲ್ಲಿ ಹಳೆ ಕೊಲ್ಹಾರ ಗ್ರಾಮದ ಯುವಕರ ಪಡೆ ರಚಿಸಿದ ಗಣೇಶ ಯುವಕ ಮಂಡಳ ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತಿದೆ. ಮುಳುಗಡೆ ಪರಿಹಾರ ಹಣದಿಂದ ನೂತನ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದು ಸಂತಸ. ಈ ದಿಸೆಯಲ್ಲಿ ವಿಘ್ನೇಶ್ವರ ಭಕ್ತರ ಸರ್ವ ಕಂಟಕಗಳನ್ನು ಕಳೆದು ನೆಮ್ಮದಿ ಜೀವನ ಸಾಗಿಸಲು ಪ್ರೇರಣೆ ನೀಡಿ ಆಶೀರ್ವದಿಸಲಿ ಎಂದರು.
ಅಂದಾಜು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ದೇವಸ್ಥಾನದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಕೂಡಗಿ ಗ್ರಾಮದ ಗಂಗಾಧರ ಶಾಸ್ತ್ರಿಗಳು ಹೋಮ-ಹವನ, ನವಗ್ರಹ ರುದ್ರಪೂಜೆಯನ್ನು ವೇದ ಮಂತ್ರ ಪಠಣದೊಂದಿಗೆ ನೆರವೇರಿಸಿದರು. ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಗರ್ಭಗುಡಿಯಲ್ಲಿರುವ ಗಣಪತಿ ಮೂರ್ತಿಗೆ ಮಂತ್ರ ಪಠಣದೊಂದಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿದರು.
ಚನ್ನಪ್ಪ ರಾವತ್ತಪ್ಪ ಬಗಲಿ ಅವರ ಮನೆಯಿಂದ ಆರಂಭವಾದ ಕಳಸದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಗಸಿ ಹತ್ತಿರವಿರುವ ದೇವಸ್ಥಾನಕ್ಕೆ ಆಗಮಿಸಿ ಕಳಸಾರೋಹಣ ಮಾಡಲಾಯಿತು. ಮುತ್ತೈದೆಯರ ಆರತಿ ಉಡಿ ತುಂಬುವ ಕಾರ್ಯಕ್ರಮಗಳು ಜರುಗಿದವು. ವಿನೀತಕುಮಾರ ದೇಸಾಯಿ, ಕಲ್ಲು ದೇಸಾಯಿ, ಶಿವಾನಂದ ತುಂಬರಮಟ್ಟಿ, ಈರಣಗೌಡ ಕೋಮಾರ, ನಾಗಪ್ಪ ಮೇಲಗಿರಿ, ಸಂಗಪ್ಪ ಹುಚ್ಚಪ್ಪಗೋಳ, ಈರಣ್ಣ ಬಿರಾದಾರ, ಮಲ್ಲಯ್ಯ ಗಣಕುಮಾರ, ಈರಯ್ಯ ಮಠಪತಿ, ಇಸ್ಮಾಯಿಲ್‌ಸಾಬನದಾಫ್, ಚಂದ್ರಶೇಖರ ಬೆಳ್ಳುಬ್ಬಿ, ಚನ್ನಪ್ಪ ಕೊಕಟನೂರ, ಶಾಂತಕ್ಕ ಬಾಗಿ ಇದ್ದರು.